ಅಂಕಣಗಳು

ಜೋಳಿಗೆಯ ಬಲದಿಂದಲೇ ದಾಸೋಹ

Published On :

ಕಾಯಕವೇ ಕೈಲಾಸವೆಂಬ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿರುವ ಕರ್ಮಯೋಗಿ 'ಸಿದ್ದಗಂಗಾ ಶ್ರೀಗಳು' ಏಪ್ರಿಲ್ 1ಕ್ಕೆ 106ನೇ ವಸಂತಕ್ಕೆ ಹೆಜ್ಜೆಯಿಡಲಿದ್ದಾರೆ. ತನ್ನಿಮಿತ್ತ ಈ ಲೇಖನ.

ಎಣ್ಣೆ ಬತ್ತಿಗೂ ಕಾಸಿಲ್ಲದ ಕಾಲದಲ್ಲಿ ಸಿದ್ಧಗಂಗಾ ಮಠದ ಪೀಠವನ್ನೇರಿದ ಡಾ. ಶಿವಕುಮಾರ ಸ್ವಾಮೀಜಿ ಅವರು ಅಪಾರ ಸಾಧನೆ ಮಾಡಿದ್ದರೂ ಇಂದಿಗೂ ಕೈ ಕಟ್ಟಿ ಕುಳಿತವರಲ್ಲ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರ ಮಾತಿಗೆ ಪುಷ್ಟಿಕೊಡುವಂತಿದೆ ಶ್ರೀ ಮಠದ ಶೈಕ್ಷಣಿಕ ಸಾಧನೆಗಳು. 106ರ ಈ ಇಳಿವಯಸ್ಸಿನಲ್ಲೂ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಂಡಿರುವ ಶ್ರೀಗಳು ಮಠದ ಎಲ್ಲಾ ವ್ಯವಹಾರಗಳನ್ನು ನೋಡುತ್ತಾರೆ. ಹಳೆ ಮಠದಿಂದ ಹೊಸ ಮಠಕ್ಕೆ, ಹೊಸ ಮಠದಿಂದ ದಾಸೋಹ ಭವನಕ್ಕೆ, ಅಲ್ಲಿಂದ ವಿದ್ಯಾರ್ಥಿ ನಿಲಯಕ್ಕೆ, ಬಳಿಕ ಪ್ರಾರ್ಥನಾ ಸ್ಥಳಕ್ಕೆ ನಡೆದಾಡುವ ಸಿದ್ಧಗಂಗಾ ಶ್ರೀಗಳು ಚಟುವಟಿಕೆಯ ಕೇಂದ್ರಬಿಂದು.
80 ವರ್ಷಗಳ ಹಿಂದೆ ಸಿದ್ಧಗಂಗಾ ಶ್ರೀಗಳು ಸಿದ್ಧಗಂಗಾ ಮಠದ ಪೀಠಾರೋಹಣ ಮಾಡಿದ ಮೇಲೆ ಸಿದ್ಧಗಂಗಾ ಕ್ಷೇತ್ರದಲ್ಲಿ ಯಾವ ಕಾರ್ಯವೂ ಸಣ್ಣ ಪ್ರಮಾಣದಲ್ಲಿ ನಡೆದೇ ಇಲ್ಲ. ಬಹಳ ವರ್ಷಗಳ ಹಿಂದೆ ಕಲ್ಲಿನ ಗುಹೆಯಾಗಿದ್ದ ಸಿದ್ಧಗಂಗಾ ಕ್ಷೇತ್ರ ಇಷ್ಟು ಬೃಹತ್ ಪ್ರಮಾಣದಲ್ಲಿ ಬೆಳೆದು ವಿಶ್ವವೇ ಗುರುತಿಸುವ ಮಟ್ಟಕ್ಕೆ ಏರಿರುವುದರ ಹಿಂದೆ ಶ್ರೀಗಳ ದಣಿವರಿಯದ ಕಾಯಕವಿದೆ.
ಅಟವಿ ಸ್ವಾಮಿಗಳು ಆರಂಭಿಸಿದ ಚಿಕ್ಕ ಸಂಸ್ಕೃತ ಗುರುಕುಲ ಇವತ್ತು ಆಳೆತ್ತರಕ್ಕೆ ಬೆಳೆದು ನಿಂತಿದೆ. ಆಧ್ಯಾತ್ಮದ ಜತೆಗೆ ಇವತ್ತಿನ ಶಿಕ್ಷಣವೂ ಶ್ರೀಮಠದಲ್ಲಿ ಲಭ್ಯ. ಜಾತಿ, ಬೇಧವಿಲ್ಲದೆ ಸುಮಾರು 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿದ್ಧಗಂಗೆಯಲ್ಲಿ ದಾಸೋಹ ನಿರಂತರವಾಗಿ ನಡೆಯುತ್ತದೆ. ಶ್ರೀ ಮಠ ಆರಂಭವಾದಾಗ ಹೊತ್ತಿದ ಒಲೆ ಇಂದಿನವರೆಗೂ ನಂದಿಲ್ಲ.
ಸುಮಾರು 600 ವರ್ಷಗಳ ಹಿಂದೆ ಗೋಸಲ ಸಿದ್ದೇಶ್ವರರಿಂದ ಶ್ರೀ ಮಠ ಆರಂಭವಾಯಿತು. ಶ್ರೀ ಮಠವು ವೀರಶೈವ ಪರಂಪರೆಯ ವಿರಕ್ತ ಮಠವಾಗಿದೆ. ಕಳೆದ 80 ವರ್ಷಗಳಿಂದ ಶಿವಕುಮಾರ ಸ್ವಾಮೀಜಿ ಅವರ ಪೀಠಾರೋಹಣ ಬಳಿಕ ಶ್ರೀ ಮಠದ ವಿಶ್ವವನ್ನೇ ಬೆರಗುಗೊಳಿಸುವಂತೆ ಬೆಳೆದು ನಿಂತಿದೆ. ಮುಖ್ಯವಾಗಿ ಶಿವಕುಮಾರ ಸ್ವಾಮೀಜಿ ಅವರದು ಧರ್ಮ ಪ್ರಸಾರ ಉದ್ದೇಶವಾದರೂ ಸಮಾಜಮುಖಿ ಕಾರ್ಯಗಳೇ ಅವರ ಜೀವಾಳ.
ಉದ್ದಾನ ಶಿವಯೋಗಿಗಳಿಂದ ಆರಂಭವಾದ ದಾಸೋಹ, ಶಿವಕುಮಾರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಇಂದು ಬೃಹದಾಕಾರವಾಗಿ ನಡೆದುಕೊಂಡು ಬರುತ್ತಿದೆ. ಸಿದ್ಧಗಂಗಾ ಕ್ಷೇತ್ರದ ಅನ್ನದಾಸೋಹ ಕೀರ್ತಿ ದಿಗಂತಕ್ಕೆ ಮುಟ್ಟಿದೆ. ಬೆಂಗಳೂರು ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದಲ್ಲಿ 1908 ಏಪ್ರಿಲ್ 1 ರಂದು ವೀರಾಪುರದ ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಗೆ ಹುಟ್ಟಿದ ಶ್ರೀಗಳು ಆರಂಭದಿಂದಲೂ ಆಧ್ಯಾತ್ಮದ ಕಡೆಗೆ ಒಲವು ಗಳಿಸಿಕೊಂಡರು. ಒಮ್ಮೆ ಸಿದ್ಧಗಂಗೆಗೆ ಬಂದಿದ್ದಾಗ ಇದೇ ನನ್ನ ಕಾಯಕ ಭೂಮಿ ಎಂದು ಅಂದುಕೊಂಡರಂತೆ. ಸತತ ಅಧ್ಯಯನ, ಸರಳತೆಯಿಂದ ಉದ್ದಾನ ಸ್ವಾಮಿಗಳ ಗಮನಸೆಳೆದ ಶಿವಕುಮಾರ ಸ್ವಾಮೀಜಿ ಅವರು 1930ರ ಮಾರ್ಚ್ 3 ರಂದು ವಿರಕ್ತಾಶ್ರಮ ದೀಕ್ಷೆ ಪಡೆದರು. ಅಲ್ಲಿಂದ ಇಲ್ಲಿಯವರೆಗೆ ಅವರ ಸತತ ದುಡಿಮೆಯಿಂದಾಗಿ ಸಿದ್ಧಗಂಗಾ ಕ್ಷೇತ್ರ ಇಂದು ವಿಶ್ವದ ಗಮನ ಸೆಳೆದಿದೆ.
ಉದ್ದಾನ ಗುರುಗಳ ಮಾರ್ಗದರ್ಶನವೇ ಸಿದ್ಧಗಂಗಾ ಶ್ರೀಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು ಬಸವ ತತ್ವಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಸಾವಿರಾರು ಮಕ್ಕಳು, 144ಕ್ಕೂ ಹೆಚ್ಚು ಶ್ರೀ ಮಠದ ಸಂಸ್ಥೆಗಳ ಆಡಳಿತವನ್ನು ನೋಡುತ್ತಾ, ಆಧ್ಯಾತ್ಮ ಸಾಧನೆ ಮಾಡುತ್ತಾ ಸಾಗಿರುವ ಸಿದ್ಧಗಂಗಾ ಶ್ರೀಗಳು ದಣಿವರಿಯದ ಸಾಧಕರು.
ವಿಶ್ರಾಂತಿ ಎಂದರೆ ಗಂಟೆಗಟ್ಟಲೆ ಹಾಸಿಗೆಯ ಮೇಲೆ ಮಲಗಿರುವುದಲ್ಲ. ಹರಟೆಯಲ್ಲಿ ದಿನವೆಲ್ಲಾ ನಿರತವಾಗಿರುವುದಲ್ಲ. ಒಂದು ಕೆಲಸದಲ್ಲಿ ಬೇಸರವಾದರೆ ಮತ್ತೊಂದರಲ್ಲಿ ತೊಡಗುವುದು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಶ್ರೀಗಳು ದಿನದ 24 ಗಂಟೆಯಲ್ಲಿ ಕೇವಲ 3 ಗಂಟೆ ಮಾತ್ರ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಉಳಿದಂತೆ ಅವರದ್ದು ಬಿಡುವಿಲ್ಲದ ದುಡಿಮೆ.
ಜೋಳಿಗೆಯ ಬಲದಿಂದಲೇ ಇಂದು ಸಹಸ್ರಾರು ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ಶ್ರೀಗಳು ದಾಸೋಹ ನೀಡುತ್ತಾ ಬಂದಿದ್ದಾರೆ. ಪ್ರತಿ ದಿನ 8 ಸಾವಿರ ಮಕ್ಕಳು, 2 ಸಾವಿರ ಭಕ್ತರು ಸೇರಿ ಭರ್ತಿ 10 ಸಾವಿರ ಮಕ್ಕಳಿಗೆ ಊಟ ನೀಡಲು ಭರ್ತಿ 2 ಲಕ್ಷ ರು. ಬೇಕು. ಯಾವುದೇ ಆದಾಯ ಮೂಲವಿಲ್ಲದ ಶ್ರೀ ಮಠವೂ ಅಷ್ಟೂ ಹಣವನ್ನು ನಿಭಾಯಿಸುತ್ತಾ ಬಂದಿದೆ.
1940ರ ದಶಕದಲ್ಲಿ 60 ವಿದ್ಯಾರ್ಥಿಗಳು ಮಾತ್ರ ಇದ್ದರು. ಸಿದ್ಧಗಂಗಾ ಶ್ರೀಗಳ ತಪೋ ಬಲದಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರುತ್ತಾ ಈಗ 8 ಸಾವಿರಕ್ಕೆ ಬಂದು ಮುಟ್ಟಿದೆ. ವಿದ್ಯಾಭ್ಯಾಸ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಬಾರದು. ಪ್ರತಿ ಹಳ್ಳಿಹಳ್ಳಿಯಲ್ಲೂ ಶಾಲೆಗಳು ಆರಂಭವಾಗಬೇಕು ಎಂಬ ಸಂಕಲ್ಪದೊಂದಿಗೆ ಸಿದ್ಧಗಂಗಾ ಶ್ರೀಗಳು ಶೈಕ್ಷಣಿಕ ಕ್ರಾಂತಿಗೆ ಕೈ ಹಾಕಿದರು. ಈ ಯೋಚನೆ ಬಂದ ಕೂಡಲೇ ಅಂದರೆ 1962 ರಿಂದಲೇ ಗ್ರಾಮಾಂತರ ಶಾಲೆಗಳನ್ನು ಆರಂಭಿಸಲು ಶ್ರೀಗಳು ಮುಂದಾದರು.
ಜಾತ್ಯತೀತ ಮನಸ್ಸಿನ ಸ್ವಾಮೀಜಿ ಅವರು ಮಠಕ್ಕೆ ಎಂದೂ ಜಾತಿಯ ಸೋಂಕು ತಗುಲದಂತೆ ಎಚ್ಚರ ವಹಿಸಿದರು. ಆ ಕಾರಣಕ್ಕಾಗಿಯೇ ನೂರಾರು ಜಾತಿಯ ಸಾವಿರಾರು ವಿದ್ಯಾರ್ಥಿಗಳು ಒಂದೇ ಕಡೆ ಕಲಿತು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಈ ಮೂಲಕ ಜಾತ್ಯತೀತ ತತ್ವ ಮತ್ತಷ್ಟು ಬಲಗೊಳ್ಳಲು ಕಾರಣವಾದರು.
ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಶಿಕ್ಷಕ ತರಬೇತಿ ಸಂಸ್ಥೆ, ಸಂಸ್ಕೃತ ಕಾಲೇಜು, ಕನ್ನಡ ಪಂಡಿತ ತರಗತಿ ವಿಭಾಗ, ದೈಹಿಕ ಶಿಕ್ಷಣ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ, ಸಮನ್ವಯ ಶಿಕ್ಷಣ ಸಂಸ್ಥೆ, ದೈಹಿಕ ಶಿಕ್ಷಣ ತರಬೇತಿ ಕಾಲೇಜು ಶ್ರೀ ಮಠದಿಂದಲೇ ನಡೆಯುತ್ತಿವೆ.
ವೇದ ಸಂಸ್ಕೃತದಿಂದ ತಂತ್ರ ವಿಜ್ಞಾನದವರೆಗೆ ನೂರಾರು ಶಿಕ್ಷಣ ಸಂಸ್ಥೆಗಳು, ಧರ್ಮದ ಸಿರಿಗಾಗಿ ಉಪದೇಶ, ಪ್ರವಚನ, ಗ್ರಂಥಗಳ ರಚನೆ, ಶರಣರ ಸಂದೇಶ ಸಾರಲು ದೃಶ್ಯ ಮಾಧ್ಯಮ, ರೈತಾಪಿಗಳ ಬಾಳಿಗೆ ಬೆಳಕು ನೀಡಲು ಹತ್ತು ಹಲವು ಯೋಜನೆಗಳನ್ನು ಶ್ರೀಗಳು ಪ್ರಚುರಪಡಿಸುತ್ತಲೇ ಇದ್ದಾರೆ.
ಅನ್ನ ದಾಸೋಹ, ಜ್ಞಾನ ದಾಸೋಹಗಳು ಮಾತ್ರ ಮಠದ ಗುರಿಯಾಗಿದ್ದು ಇದನ್ನು ಹೊರತುಪಡಿಸಿ ಒಂದು ಜಾತಿಯನ್ನು, ಪಂಗಡವನ್ನು ನಿರ್ಮಿಸುವುದು ನಮ್ಮ ಧ್ಯೇಯವಲ್ಲ ಎಂಬ ಶ್ರೀಗಳ ಮಾತನ್ನು ಮಠದ ಎಲ್ಲಾ ಸಂಸ್ಥೆಗಳೂ ಆಜ್ಞೆಯಾಗಿ ಸ್ವೀಕರಿಸಿ ಕೆಲಸ ಮಾಡುತ್ತಿವೆ. ಸಿದ್ಧಗಂಗಾ ಪ್ರಕಾಶ, ಮಾಸ ಪತ್ರಿಕೆ, ವಸ್ತುಪ್ರದರ್ಶನ, ನಾಟಕಗಳು, ಧಾರ್ಮಿಕ ಹಬ್ಬಗಳು, ಹೀಗೆ ನಾನಾ ಆಚರಣೆಗಳನ್ನು ಶ್ರೀಗಳು ಮಾಡಿಕೊಂಡು ಬಂದಿದ್ದಾರೆ.
ಆಧ್ಯಾತ್ಮದ ಜತೆಗೆ ಸಾಹಿತ್ಯದ ಸುಗಂಧವೂ ಇಲ್ಲಿದೆ. ವಿಜ್ಞಾನದ ಲೇಪವೂ ಇದೆ ಎಂಬುದುಕ್ಕೆ ಸಾಕ್ಷಿ ಶ್ರೀ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದಿರುವ, ನಡೆಯುತ್ತಿರುವ ಶಿಬಿರ, ಸಮ್ಮೇಳನಗಳು. 1963ರಲ್ಲಿ  ಪ್ರಸಿದ್ಧ ವಿದ್ವಾಂಸರಾದ ಡಾ. ರಂ.ಶ್ರೀ ಮುಗಳಿ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ಕೂಡ ನಡೆಯಿತು. ಅದ್ಧೂರಿ ನವರಾತ್ರಿ ಆಚರಣೆ ಮಠದ ವೈಶಿಷ್ಟ್ಯಗಳಲ್ಲೊಂದು. ಕೀರ್ತನೆ, ಶರಣರ ಪುರಾಣ, ಶೂನ್ಯ ಸಂಪಾದನೆ ಪ್ರವಚನ ಹೀಗೆ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ವೈಚಾರಿಕವಾಗಿ ಮಠ ಜ್ಞಾನವನ್ನು ಪಸರಿಸುತ್ತಲೇ ಇದೆ. ಇವೆಲ್ಲ ಘಟನೆಗಳಿಗೂ ಸಾಕ್ಷಿಪ್ರಜ್ಞೆಯಾಗಿ ಡಾ. ಶಿವಕುಮಾರ ಸ್ವಾಮೀಜಿ ಇದ್ದಾರೆ.
ಈ ಇಳಿ ವಯಸ್ಸಿನಲ್ಲಿ ಶ್ರೀಗಳು ಕನ್ನಡಕ ಕೂಡ ಹಾಕದೆ ಓದಬಲ್ಲರು, ಅವರ ಬಳಿ ಇನ್ನು ನೂರಾರು ಯೋಜನೆಗಳಿವೆ. ಮಠದ ಅಭಿವೃದ್ಧಿ, ಮಕ್ಕಳಿಗೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡಬೇಕಾದ ನಿಟ್ಟಿನಲ್ಲಿ ಶ್ರೀಗಳು ಯೋಚಿಸುತ್ತಿದ್ದಾರೆ. ಅಪಾರ ಸಾಧನೆ ಮಾಡಿದರೂ ಒಂದಿಷ್ಟೂ ಬೀಗದೆ ಅದೇ ಜೀವನೋತ್ಸಾಹ, ಶಾಂತಿಗಣ್ಣಿನ ಪ್ರೀತಿಯನ್ನು ಇಟ್ಟುಕೊಂಡಿರುವ ಸಿದ್ಧಗಂಗಾ ಶ್ರೀಗಳು ಸಿದ್ಧಗಂಗೆಯ ಸಿದ್ಧಿ ಪುರುಷರೇ ಸರಿ.

-ಉಗಮ ಶ್ರೀನಿವಾಸ್
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.