ನಂಬಿಕೆಗಳ ಮೇಲೇಕೆ ದಾಳಿ?
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕಿದೆ. ಬಹು ಸಂಖ್ಯಾತ ಹಿಂದೂ ಸಮಾಜ ಸೇರಿದಂತೆ ಇತರ ಧರ್ಮದ ಜನರೂ ಸಹ ತಮ್ಮ ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಬದುಕುತ್ತಿದ್ದಾರೆ. ಆದರೆ ಈಗ ನಂಬಿಕೆ, ಸಂಪ್ರದಾಯಗಳ ಎದುರಿಗೆ, ವಿಜ್ಞಾನ ಮತ್ತು ಆಧುನಿಕತೆಯ ಗೋಡೆಯನ್ನು ನಿರ್ಮಿಸಲಾಗಿದೆ. ಪ್ರಪಂಚ ವಿಜ್ಞಾನದಿಂದಾಗಿ ಅಂಗೈಯಗಲಕ್ಕೆ ಬದಲಾಗಿದೆ. ಇಂಥ ಸಮಯದಲ್ಲೂ ನಂಬಿಕೆ, ಸಂಪ್ರದಾಯಗಳನ್ನು ಅನುಸರಿಸುತ್ತೇವೆ, ಆಚರಿಸುತ್ತೇವೆ ಎನ್ನುವುದು ಮೌಢ್ಯವಲ್ಲದೇ ಮತ್ತೇನು ಎಂದು ಪ್ರಶ್ನಿಸಲಾಗುತ್ತಿದೆ. ಹಾಗಂತ ನಾವು ವಿಜ್ಞಾನವನ್ನೂ ಗೌರವಿಸಬೇಕು. ವಿಜ್ಞಾನವೂ ಒಳ್ಳೆಯದೇ ಎನ್ನುವುದನ್ನೂ ನಾವು "ನಂಬಬೇಕು".
ನವಗ್ರಹಗಳಿವೆ ಎನ್ನುತ್ತದೆ ವಿಜ್ಞಾನ. ಅದು ರುಜುವಾತು ಕೂಡ ಆಗಿದೆ. ಆದರೆ ನವಗ್ರಹಗಳ ಬಗ್ಗೆ ಅವರು ನಮ್ಮ ಪೂರ್ವಜರು ಎಂದೋ ತಾಳೆಗರಿಗಳಲ್ಲಿಯೇ ಹೇಳಿಲ್ಲವೇ? ವಿಜ್ಞಾನವು ಪ್ರಯೋಗಗಳ ಮೂಲಕ ಸ್ಪಷ್ಟತೆ ಕಂಡರೆ, ಸಂಪ್ರದಾಯ, ಜ್ಯೋತಿಷ್ಯ ಎನ್ನುವುದು ನಂಬಿಕೆಯ ಬಲದಲ್ಲಿ ಉಳಿದಿದೆ. ನವಗ್ರಹಳ ಚಲನ ಶೀಲತೆಯನ್ನು ನಮ್ಮ ಪೂರ್ವಿಕರು ಜ್ಯೋತಿಷ್ಯಾಶ್ತ್ರದಲ್ಲಿ ಹೇಳಿರುವುದಕ್ಕೂ, ವಿಜ್ಞಾನಿಗಳು ಕಂಡು ಹಿಡಿದಿರುವುದಕ್ಕೂ ಸಾಮ್ಯತೆ ಇದೆ.
'ದೇವರು' ಎನ್ನುವ ಕಾಣದ ಶಕ್ತಿಯನ್ನು ಪ್ರತಿಯೊಬ್ಬರೂ ತಮ್ಮ ತಮ್ಮದೇ ರೀತಿಯಲ್ಲಿ ನೋಡುತ್ತಾರೆ. ದೇವರಿದ್ದಾನೆ ಎನ್ನುವ ನಂಬಿಕೆ, ಮನುಷ್ಯನಿಗೆ ನೆಮ್ಮದಿ ಕೊಡುತ್ತದೆ. ಭದ್ರತೆಯ ಭಾವವೊದಗಿಸುತ್ತದೆ. ತಪ್ಪು ಮಾಡಿದರೆ ಶಿಕ್ಷೆ ಕೊಡುತ್ತಾನೆ ಎನ್ನುವ ಭಯವೂ ನಂಬಿಕೆಯ ಮೂಲದಿಂದಲೇ ಉಗಮವಾಗಿರುವುದು. ಮನುಷ್ಯನಿಗೆ ಇಂಥ ನಂಬಿಕೆಯೇ ಇಲ್ಲವೆಂದ ಮೇಲೆ ಆತನಿಗೆ ಯಾರ ಭಯ? ಆಗ ಆತ ಏನು ಮಾಡುವುದಕ್ಕೂ ಹೇಸುವುದಿಲ್ಲ. ಇತ್ತೀಚೆಗೆ ಹಿರಿಯ ವಿಜ್ಞಾನಿಯೊಬ್ಬರು ಗಗನ ಯಾನಕ್ಕೆ ಉಪಗ್ರಹವನ್ನು ಕಳುಹಿಸುವ ಮೊದಲು ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ್ದು ಏಕೆ? ಹಾಗೆ ಅವರು ಮಾಡಿದ್ದು, ಮಾನಸಿಕವಾಗಿ ಗಟ್ಟಿಗೊಳ್ಳಲು ಅಲ್ಲವೇ? ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದ ಅವರು ಹಾಗೆ ಮಾಡಿದರು. ವ್ಯಕ್ತಿಯೊಬ್ಬನಿಗೆ ನಂಬಿಕೆಯಿಂದ ಒಳ್ಳೆಯದಾಗುತ್ತದೆ, ನೆಮ್ಮದಿ ಸಿಗುತ್ತದೆ ಎಂದಾದರೆ ಆ ನಂಬಿಕೆ ಒಳ್ಳೆಯದೇ. ಅದನ್ನು ಮೌಢ್ಯ ಎಂದು ಹೀಗಳೆಯುವುದಕ್ಕೆ ಅರ್ಥವಿದೆಯೇ? ಅದರಿಂದ ಅವರಿಗೆ ಅಥವಾ ಇನ್ಯಾರಿಗಾದರೂ ನಷ್ಟವಿಲ್ಲ ಅಲ್ಲವೇ? ಮನಸ್ಸು ಸೋತಾಗ/ ಹೆದರಿಕೊಂಡಾಗ, ಅದಕ್ಕೆ ದೇವರ ಧ್ಯಾನ (ಆಚರಣೆಯ ರೂಪದಲ್ಲಿ) ವಿಶ್ರಾಂತಿ ಕೊಡುತ್ತದೆ. ಕೆಟ್ಟ ಸಮಯ ಎದುರಾದಾಗ ಒಳ್ಳೆಯ ಸಮಯ ಬರುತ್ತದೆ ಎಂಬ ನಂಬಿಕೆಯಿಂದ ಜನ ದೇವರ ಮೊರೆ ಹೋಗುತ್ತಾರೆ. ಆಗ ಎಷ್ಟೇ ಕಷ್ಟಗಳು ಎದುರಾದರೂ ಮನಸ್ಸು ಅಡ್ಡ ಮಾರ್ಗಗಳನ್ನು ಹಿಡಿಯುವುದಿಲ್ಲ. ಆದರೆ ಇದೇ ಸಮಯದಲ್ಲಿ ಕೆಲವರು ಇಂಥವರ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದೂ ಸುಳ್ಳಲ್ಲ. ಹೀಗಾಗಿಯೇ ಸಮಾಜದಲ್ಲಿ ವಾಮಾಚಾರದಂತಹ ವಿಕೃತಿಗಳು ತಲೆಯೆತ್ತುತ್ತವೆ. ನಿಸ್ಸಂಶಯವಾಗಿಯೂ ನಾವೆಲ್ಲ ಒಕ್ಕೊರಲಿನಿಂದ ಇದನ್ನು ವಿರೋಧಿಸಲೇಬೇಕು.
ಸರ್ಕಾರ ತರುವ ಕಾನೂನಿನಿಂದ ಸಮಾಜಕ್ಕೆ ನ್ಯಾಯ ದೊರಕುವಂತಾಗಬೇಕು. ಇನ್ನು ವಾಸ್ತು ಶಾಸ್ತ್ರದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದೇ ಅದನ್ನು ಹಂಗಿಸುವವರಿಗೆ ಏನೆನ್ನೋಣ? ಇಂದು ಭಾರತೀಯ ವಾಸ್ತು ಶಾಸ್ತ್ರವನ್ನು ಪ್ರಪಂಚವೇ ಮೆಚ್ಚುತ್ತದೆ. ಅದಕ್ಕೂ ಮುಂದೆ ವೈಜ್ಞಾನಿಕ ಆಧಾರಗಳು ಸಿಕ್ಕೇ ಸಿಗುತ್ತವೆ. ಪೂಜೆ ಪುನಸ್ಕಾರ, ಹೋಮ ಹವನಾದಿಗಳಿಗೂ ವೈಜ್ಞಾನಿಕ ಆಧಾರಗಳನ್ನು ಇಂದಿನ ವಿಜ್ಞಾನ ಒದಗಿಸುತ್ತದೆ. ನಮ್ಮ ಬಹುತೇಕ ಆಚರಣೆಗಳಿಗೆ ನಮಗರಿವಿಲ್ಲದ ಅನೇಕ ವೈಜ್ಞಾನಿಕ ಕಾರಣಗಳಿವೆ. ಆದರೆ ನಮ್ಮ ನಂಬಿಕೆಗಳು ಎಂದಿಗೂ ಸಾಮಾಜಿಕ ಸೌಹಾರ್ದವನ್ನು ಕೆಡಿಸುವಂತಿರಬಾರದು. ಹಾಗೆ ಕೆಡಿಸುವ ಅನಿಷ್ಠ ಪದ್ಧತಿಗಳನ್ನು ಎಲ್ಲರೂ ಸೇರಿ ತುಳಿದು ಹಾಕಬೇಕು. ಇನ್ನು, ನಂಬಿಕೆ ಯಾವುದು ಮತ್ತು ಮೂಢನಂಬಿಕೆ ಯಾವುದು ಎನ್ನುವುದನ್ನು ಅರಿತುಕೊಳ್ಳುವ ವೈಚಾರಿಕತೆ ನಮ್ಮಲ್ಲಿ ಬೆಳೆಯಬೇಕು. ನಂಬಿಕೆಗಳೇ ಅಲ್ಲವೇ ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದು? ಯಾರಿಗೂ ಹಾನಿ ಮಾಡದ ನಮ್ಮ ಆಚರಣೆಗಳು, ಸಂಪ್ರದಾಯಗಳತ್ತ ಇಂದು ವಿದೇಶಿಯರು ಬಹುವಾಗಿ ಆಕರ್ಷಿತರಾಗುತ್ತಿದ್ದಾರೆ. ಆದರೆ ಇದನ್ನು ಅರ್ಥಮಾಡಿಕೊಳ್ಳದ ಕೆಲವರು ಹಿಂದು ಧರ್ಮದಲ್ಲಿನ ಆಚರಣೆಗಳೆಲ್ಲ ಮೌಢ್ಯವೆಂದು ಬಿಂಬಿಸಹೊರಟಿದ್ದಾರೆ. ನಿಜಕ್ಕೂ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಇಂಥ ಕಾಯ್ದೆಗಳು ಜಾರಿಯಾಗಬಾರದು. ಕಾನೂನಿನ ಹೆಸರಿನಲ್ಲಿ ಪ್ರಜೆಗಳ ನಂಬಿಕೆಗಳನ್ನು ಒಡೆಯುವ ಪ್ರಯತ್ನ ಸರ್ಕಾರ ಮಾಡದಿರಲಿ. ಪ್ರಜೆಗಳೆಲ್ಲರಿಗೂ ಸಮಾನ ಹಕ್ಕು ಸಿಗುವಂತಾಗಲಿ.
- ರಜನಿ ಚಂದ್ರಶೇಖರ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

