ಅಂಕಣಗಳು

ಛೇ...ಹಲ್ಕಾ!

ಛೇ...ಹಲ್ಕಾ!
'ಈ ಮನುಷ್ಯ ಇನ್ನೂ ಏಕೆ ಹೊರಗಿದ್ದಾನೆ' ಎಂದು ಅಮಿತ್ ಷಾರನ್ನು ಪ್ರಶ್ನಿಸುತ್ತ ತೆಹಲ್ಕಾ ಹೊರತಂದಿದ್ದ ಮುಖಪುಟವಿದು. ಷಾ ಫೋಟೊ ಜಾಗದಲ್ಲಿ ತೇಜ್ಪಾಲ್ ಚಿತ್ರ ಹಾಕುವ ಸಮಯವಿದು.
Published On :

ಸಮಾಜವನ್ನು ಪ್ರಶ್ನಿಸುವ, ನೀತಿಬೋಧನೆ ಮಾಡುವವನ ಮೇಲಿನ ಜವಾಬ್ದಾರಿ ಯಾವತ್ತೂ ಹೆಚ್ಚು. ತಾನು ಹೇಳುವ ಆದರ್ಶವನ್ನು ಸ್ವತಃ ಪಾಲಿಸುತ್ತಾನೆಯೇ ಎಂಬುದು ಮೊದಲ ಪ್ರಶ್ನೆಯಾದರೆ, ಕೊನೆಪಕ್ಷ ಅದರ ತೀರ ವಿರುದ್ಧ ಮಾರ್ಗದಲ್ಲಿ ಕಾಲಿಡದ ಎಚ್ಚರವನ್ನಾದರೂ ಕಾಯ್ದುಕೊಳ್ಳಬೇಕು. ತನ್ನ ಹತ್ತೆಂಟು 'ಸ್ಟಿಂಗ್ ಆಪರೇಷನ್‌'ಗಳ ಮೂಲಕ ಅತ್ಯಾಚಾರ- ಭ್ರಷ್ಟಾಚಾರ-ಸೆಕ್ಸ್ ಸ್ಕ್ಯಾಂಡಲ್- ಕೋಮುವಾದವನ್ನು ಬೆತ್ತಲಾಗಿಸಿದ್ದಾಗಿ ಹೇಳಿಕೊಳ್ಳುತ್ತಿದ್ದ 'ತೆಹಲ್ಕಾ' ನಿಯತಕಾಲಿಕದ ಸಂಪಾದಕ ತರುಣ್ ತೇಜ್ಪಾಲ್ ಖುದ್ದು ಅತ್ಯಾಚಾರಕ್ಕೆ ಯತ್ನಿಸಿದ್ದು, ಮಗಳ ವಯಸ್ಸಿನವಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವುದು ಇದೀಗ ಬಯಲಾಗಿದೆ.
ಈ ಕುಕೃತ್ಯ ಬಯಲಾಗುತ್ತಲೇ ತರುಣ್ ತೇಜ್ಪಾಲ್ 'ಆರು ತಿಂಗಳ' ರಾಜಿನಾಮೆ ಸಲ್ಲಿಸಿ, ಎಲ್ಲವೂ ಸರಿಹೋಯಿತು ಎಂಬಂತೆ ಇಷ್ಟುದ್ದದ ಪತ್ರ ಬರೆದಿರುವುದು ಮಾಧ್ಯಮದ ಒಂದು ವರ್ಗ ಆತ್ಮಸಾಕ್ಷಿಯೇ ಇಲ್ಲದೆ ಕೆಲಸ ಮಾಡುತ್ತಿದೆ ಎಂಬ ಆಕ್ರೋಶಕ್ಕೆ ಕಾರಣವಾಗಿದೆ. ಬ್ಲಾಗ್, ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಆಕ್ರೋಶದ ಅಲೆಯೇ ಹರಿದಾಡುತ್ತಿದೆ. ಎಲ್ಲರ ತಪ್ಪುಗಳನ್ನು (ಕೆಲವೊಮ್ಮೆ ಆಗಿರದ ತಪ್ಪುಗಳನ್ನೂ) ಪ್ರಶ್ನಿಸುವ ಮಾಧ್ಯಮ ಪಾಳಯದಲ್ಲೇ ಒಬ್ಬಾತ ಲೈಂಗಿಕ ದೌರ್ಜನ್ಯದಂಥ ಗಂಭೀರ ಪ್ರಕರಣದಲ್ಲಿ ಸಿಲುಕಿದಾಗ ವ್ಯಾಪಕವಾಗಿ ಚರ್ಚೆ ಆಗಬೇಕು ಎಂಬುದು ಹೆಚ್ಚಿನವರ ಅಭಿಪ್ರಾಯ. ಈ ನಿಟ್ಟಿನಲ್ಲಿ, ವಿಚಾರವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವ ಚರ್ಚೆಗಳಲ್ಲಿ ಕೆಲವನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ.
---
ರೀಡಿಫ್ ಜಾಲತಾಣದಲ್ಲಿ, 'ಎ ವುಮನ್ ಇನ್ ಟುಡೇಸ್ ಇಂಡಿಯಾ' ಹೆಸರಿನಲ್ಲಿ ತೇಜ್ಪಾಲ್ ಕುರಿತ ಕಳವಳವನ್ನು ಕಟ್ಟಿಕೊಡುವ ಬರಹವೊಂದು ಪ್ರಕಟವಾಗಿದೆ. ಪ್ರಕರಣದ ಹಲವು ಆಯಾಮಗಳನ್ನು ತಡಕಾಡಿರುವ ಈ ಲೇಖನ ಮಹಿಳೆಯರ ಪರ ಪ್ರಾತಿನಿಧಿಕ ಧ್ವನಿಯಂತೆಯೂ ತೋರುತ್ತದೆ. ಆ ಬರಹ...
ತರುಣ್ ತೇಜ್ಪಾಲ್ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ನೀವು ಎಷ್ಟೇ ಬುದ್ಧಿವಂತರಾಗಿದ್ದಿರಬಹುದು, ನಿಮ್ಮನ್ನು ಆ ಸ್ಥಿತಿಗೆ ತಂದುಕೊಳ್ಳಲು ಎಷ್ಟೇ ಪರಿಶ್ರಮಪಟ್ಟಿರಬಹುದು, ಆದರೆ ನಿಮ್ಮಲ್ಲಿ ಅಧಿಕಾರವೆಂಬುದು ಕೇಂದ್ರೀಕೃತವಾದಾಗ ವ್ಯಕ್ತಿತ್ವದ ಕರಾಳ ಮುಖಗಳನ್ನು ಅಭಿವ್ಯಕ್ತಿಗೊಳಿಸುವುದಕ್ಕೆ ಮುಂದಾಗುತ್ತೀರಿ. ಏಕೆಂದರೆ ಅದನ್ನು ತಮ್ಮ ಸಾಧನೆಗಳ ಹಿಂದೆ ಬಚ್ಚಿಟ್ಟುಬಿಡಬಹುದು ಎಂಬ ವಿಶ್ವಾಸ ಆ ವ್ಯಕ್ತಿಗಿರುತ್ತದೆ.
ಹೇಗೂ ತಪ್ಪಿಸಿಕೊಳ್ಳಬಹುದು ಎಂಬ ವಿಶ್ವಾಸಇರುವುದರಿಂದಲೇ ಆ ವ್ಯಕ್ತಿ ತನ್ನಲ್ಲಿರುವ ಅಧಿಕಾರವನ್ನು ಹೇಗೆ ಬೇಕೊ ಹಾಗೆ ಉಪಯೋಗಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ. ತನ್ನ ಕೈ ಕೆಳಗೆ ಕೆಲಸ ಮಾಡುತ್ತಿರುವವರನ್ನು ಆತ ನಿಂದಿಸಬಲ್ಲ, ಪೀಡಿಸಬಲ್ಲ. ಏಕೆಂದರೆ ಹಾಗೆ ಮಾಡಿ ಆತ ದಕ್ಕಿಸಿಕೊಳ್ಳಬಲ್ಲ.
ತರುಣ್ ತೇಜ್ಪಾಲ್ ಮಾಡಿರುವುದು ಇದನ್ನೇ.
ತಮ್ಮ ಪತ್ರದಲ್ಲಿ, ಮಾಡಿರುವ ಕೃತ್ಯ ಅಲ್ಲಗಳೆಯದೇ 'ತಪ್ಪು ತಿದ್ದಿಕೊಳ್ಳುವುದು', 'ಕ್ಷಮೆ ಕೊಟ್ಟುಕೊಳ್ಳುವುದು' ಎಂಬ ಪದಗಳನ್ನೆಲ್ಲ ಬಳಸಿರುವುದು ಸಂತ್ರಸ್ತೆಯ ಗಾಯಕ್ಕೆ ಉಪ್ಪು ಹಚ್ಚಿ ತಿಕ್ಕಿದಂತೆ ಎನ್ನಿಸುತ್ತಿದೆಯಲ್ಲದೇ ಇನ್ಯಾವ ರೀತಿಯಲ್ಲೂ ನೋಡಲು ಸಾಧ್ಯವಿಲ್ಲ.
ಅವರ ಪತ್ರದ ಎರಡನೇ ಪ್ಯಾರಾ ಹೇಳುತ್ತದೆ: 'ತೀರ್ಮಾನ ತೆಗೆದುಕೊಳ್ಳುವುದರಲ್ಲಾದ ದೋಷ, ಪರಿಸ್ಥಿತಿಯನ್ನು ತಪ್ಪಾಗಿ ಗ್ರಹಿಸಿದ್ದು ಇವೆಲ್ಲ ನಾವು ನಂಬಿಕೊಂಡಿದ್ದ ಹಾಗೂ ಹೋರಾಡುತ್ತಿದ್ದ ತತ್ವಕ್ಕೆ ವಿರುದ್ಧವಾದ ವಿದ್ಯಮಾನ ಹುಟ್ಟುವುದಕ್ಕೆ ಕಾರಣವಾಯಿತು.'
ಮಿಸ್ಟರ್ ತೇಜ್ಪಾಲ್! ನಿಮ್ಮಂಥ ಬುದ್ಧಿಜೀವಿ ವ್ಯಕ್ತಿ ಲೈಂಗಿಕ ತೃಷೆ ತೀರಿಸುವಂತೆ ಕೇಳುವುದು ಹಾಗೂ ನಿಮ್ಮನ್ನು ಬೇರೆಯವರ ವಿರುದ್ಧ ಲೈಂಗಿಕ ಆಕ್ರಮಣವನ್ನು ತೋರಿದ್ದು 'ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಆದ ದೋಷ' ಎಂದು ಹೇಳಲಾಗುತ್ತದೆಯೇ? ಈ ಬಗ್ಗೆ ಇನ್ನೂ ಗೊಂದಲವಿದ್ದರೆ ಸ್ಪಷ್ಟವಾಗಿ ಹೇಳುವೆ ಕೇಳಿ; ಲೈಂಗಿಕ ದೌರ್ಜನ್ಯ ಎಂದರೆ ಅತ್ಯಾಚಾರವೇ ಆಗಬೇಕಿಲ್ಲ. ಲೈಂಗಿಕ ಅಭೀಪ್ಸೆಯನ್ನು ಹೇರುವ ಮಾತುಗಳೂ ಆಗಿದ್ದಿರಬಹುದು. ಒಬ್ಬರ ಇಚ್ಛೆಗೆ ವಿರುದ್ಧವಾಗಿ ಆಕೆಯ ದೇಹವನ್ನು ತಡವುವ ಪ್ರಕ್ರಿಯೆಯೂ ಆಗಿರಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ- ನಿಮ್ಮ ಪುರುಷ ಸಹೋದ್ಯೋಗಿ ಜತೆ ಹೀಗೆಲ್ಲ ಮಾಡುತ್ತಿದ್ದಿರಾ? ಇಲ್ಲವಲ್ಲ. ಹೀಗಾಗಿ ನೀವೇನು ಮಾಡುತ್ತಿದ್ದಿರಿ ಎಂಬುದು ನಿಮಗೆ ನಿಖರವಾಗಿ ತಿಳಿದಿತ್ತು. ನಿಮ್ಮ ನೌಕರಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದಿರಿ. ಈ ಅಪರಾಧವನ್ನು 'ತಪ್ಪು ತೀರ್ಮಾನ' ಎಂಬ ಪದಗುಚ್ಛದಲ್ಲಿ ಮುಚ್ಚಿಡಲು ಸಾಧ್ಯವಿಲ್ಲ.
ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಎಡವಿದ್ದು ಎಂಬ ನಿಮ್ಮ ಇನ್ನೊಂದು ಸಾಧಾರಣ ವ್ಯಾಖ್ಯಾನವನ್ನೂ ಗಮನಿಸೋಣ. ನಿಮ್ಮ ಶೋಷಣೆಗೆ ತುತ್ತಾದ ಪತ್ರಕರ್ತೆಗೆ ಆ ಕ್ಷಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ತೋಚದೆ ಇದ್ದಿರಬಹುದು. ಏಕೆಂದರೆ ಪತ್ರಕರ್ತನಾಗಿ ನಿಮ್ಮನ್ನು ಬಹಳ ಗೌರವದಿಂದ ನೋಡಿರುತ್ತಾಳೆ. ಬಹುಶಃ ಬಾಸ್ ಜಾಗದಲ್ಲಿರುವ ನಿಮ್ಮನ್ನು ಎದುರಿಸುವುದು ಹೇಗೆ ಎಂಬುದು ತಿಳಿಯದೇ ಇದ್ದಿರಬಹುದು. ನಿಮ್ಮ ಒಟ್ಟಾರೆ ಉದ್ದೇಶ ಆ ಕ್ಷಣಕ್ಕೆ ಆಕೆಗೆ ಅಂದಾಜಿಗೆ ನಿಲುಕುವುದು ಕಷ್ಟವಾಯಿತೇನೋ.
ಈ ಪ್ರತಿಕ್ರಿಯೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವುದಕ್ಕೆ ಏನಿದೆ? ಅದಕ್ಕೂ ಹೆಚ್ಚಾಗಿ ನಿಮ್ಮೊಳಗಿನ ಉದ್ದೇಶವನ್ನು ಅದು ಹೇಗೆ ತಾನೆ ತಪ್ಪರ್ಥ ಮಾಡಿಕೊಂಡಿರಿ? ಕಿರಿಯ ಸಹೋದ್ಯೋಗಿಯನ್ನು ಉತ್ತಮ ಪತ್ರಕರ್ತೆಯಾಗಿ ರೂಪಿಸುವುದೇ ನಿಮ್ಮ ಉದ್ದೇಶವಾಗಿತ್ತಾ? ಅದಲ್ಲ ಎಂಬುದು ಎಂಥವರಿಗೂ ತಿಳಿಯುತ್ತದಲ್ಲವೇ?
ಈ ಹಿನ್ನೆಲೆಯಲ್ಲಿ ನೋಡಿದಾಗ ನಿಮ್ಮ 'ಬೇಷರತ್ ಕ್ಷಮಾಪಣೆ' ಸಾಕಾಗುತ್ತದೆಯೇ ತೇಜ್ಪಾಲ್? ಇಂಥದೇ ಪ್ರಕರಣದಲ್ಲಿ ನಿಮ್ಮ ತನಿಖಾ ವರದಿಯಿಂದಾಗಿ ಸಿಲುಕಿಕೊಂಡ ರಾಜಕಾರಣಿಯೊಬ್ಬ 'ಬೇಷರತ್ ಕ್ಷಮೆ' ಕೋರಿದರೆ ಸುಮ್ಮನಾಗಿಬಿಡುತ್ತೀರಾ? ಆತ ಆರು ತಿಂಗಳು ಮನೆಯಲ್ಲಿ ಕುಳಿತು ಮತ್ತೆ ಬಂದರೆ ಸಾಕು ಅಂತ ಹೇಳುತ್ತೀರಾ? ನೀವೀಗ ಎಸಗಿರುವ ಅಪರಾಧಕ್ಕೆ ಆರು ತಿಂಗಳ ಸಜೆ ಸಾಕೇ? ಇದೇ ಬೇರೆಯವರ ವಿಷಯದಲ್ಲಾಗಿದ್ದರೆ ನಿಮ್ಮ ಮಾಧ್ಯಮ ಸಂಸ್ಥೆ ಆಕಾಶದೆತ್ತರ ಬೊಬ್ಬೆ ಹಾಕುತ್ತಿತ್ತು. ಅದು ಸರಿಯಾದುದ್ದೇ. ಆದರೆ ನಿಮಗೆ ಮಾತ್ರ ಬೇರೆಯದೇ ನಿಯಮಗಳು ಅನ್ವಯಿಸುತ್ತವೆಯೇ?
ಆರು ತಿಂಗಳ ರಾಜಿನಾಮೆ ನೆಪದಲ್ಲಿ ನಿಮ್ಮ ಹಿರಿಯ ಸಹೋದ್ಯೋಗಿ ಶೋಮಾ ಚೌಧರಿಗೆ ಬರೆದ ಪತ್ರವಂತೂ ಇನ್ನೂ ಅಸಹ್ಯಾಗಿದೆ. ತರುಣ್ ತೇಜ್ಪಾಲ್ ಎಂದರೆ ಎಂಥ ಮಹೋನ್ನತ ವ್ಯಕ್ತಿ ಗೊತ್ತಾ ಎಂದು ನಿಮ್ಮನ್ನು ನೀವೇ ವೈಭವೀಕರಣ ಮಾಡಿಕೊಂಡಿರುವ ಹೊಲಸು ರದ್ದಿ ಕಾಗದವದು. ಈ ಬಗ್ಗೆ ಆಂತರಿಕ ತನಿಖೆ ನಡೆಸುತ್ತೇವೆ ಸಾಕು ಎನ್ನುತ್ತಿರುವ ತೆಹಲ್ಕಾದ ಶೋಮಾ ಚೌಧರಿ ಅವರಿಗೂ ಕೆಲ ಪ್ರಶ್ನೆಗಳಿವೆ? ಒಂದೊಮ್ಮೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತೆ ನಿಮ್ಮ ಸಹೋದರಿಯಾಗಿದ್ದರೆ? ನಿಮ್ಮ ಮಗಳಾಗಿದ್ದರೆ? ನಿಮ್ಮ ಉತ್ತಮ ಸ್ನೇಹಿತೆ ಆಗಿದ್ದರೆ...? ಅಥವಾ ನೀವೇ ಆಗಿದ್ದರೆ....?
---
ಟ್ವಿಟ್ಟರ್ ಲೋಕದಲ್ಲಿ ಗುಡುಗು

ತರುಣ್ ತೇಜ್ಪಾಲ್ ಈಗ ಕಾಂಗ್ರೆಸ್ ಸೇರಬಹುದು, (ಅರ್ಥಾತ್ ಅಧಿಕೃತವಾಗಿ)
- ಶರತ್ ಎಚ್ ರಾವ್

ಮಾಧ್ಯಮದ ಅರಣ್ಯದಲ್ಲಿ ಇನ್ನೆಷ್ಟು ಮಂದಿ ತೇಜ್ಪಾಲರಿದ್ದಾರೋ!
- ಗೌತಮ್ ನಂದಾ

ಮಹಿಪಾಲ್ ಮದ್ರೆನಾ, ಎನ್. ಡಿ. ತಿವಾರಿ, ಅಭಿಷೇಕ್ ಮನು ಸಿಂಘ್ವಿ ಇವರೆಲ್ಲ ತೇಜ್ಪಾಲ್ ಸಾಹಸಕ್ಕೆ ಅಭಿನಂದಿಸಿರಬಹುದು.
- ಜಗದೀಶ್ ದುಬೆ

ತೇಜ್ಪಾಲ್ ಎಂದು ಹೇಳದಿರಿ. ರೇಪ್‌ಪಾಲ್ ಎನ್ನಿರಿ.
- ಉಷಾ ರಾವತ್

ಅಸಾರಾಂ ಬಾಪೂ ಮತ್ತವರ ಮಗ ತಪ್ಪು ವೃತ್ತಿ ಆರಿಸಿಕೊಂಡರು. ತೇಜ್ಪಾಲ್ ಥರ ತೆಹಲ್ಕಾದಲ್ಲಿದ್ದಿದ್ದರೆ ತಮಗೆ ತಾವೇ ತೋಚಿದ ಶಿಕ್ಷೆ ವಿಧಿಸಿಕೊಂಡರೆ ಸಾಕಿತ್ತು, ಜೈಲಿಗೆ ಹೋಗಬೇಕಿರಲಿಲ್ಲ.
- ನರೇಶ್

ತರುಣ್ ತೇಜ್ಪಾಲ್ ಲೈಂಗಿಕ ದೌರ್ಜನ್ಯ ತಡೆಗೆ ಹೊಸ ಕಾಯ್ದೆ ತಂದಂತಿದೆ. ಆರು ತಿಂಗಳು ಮನೆಯಲ್ಲಿ ಕುಳಿತರೆ ಸಾಕು!
- ಹರಿಹರ ಟಿ. ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.