ಜೀವನದ ಹಾಡಲ್ಲಿ ಮನ್ನಾ ಡೇ...

ಖ್ಯಾತ ಮಲಯಾಳಂ ಚಿತ್ರ 'ಚೆಮ್ಮೀನ್'ನ "ಮಾನಸ ಮೈನೆ ವರೂ .." ಎಂದು ಶುರುವಾಗುವ ಹಾಡು ಬಾಲ್ಯದಿಂದ ಇಲ್ಲಿಯವರೆಗೂ ಅದೆಷ್ಟು ಬಾರಿ ಕೇಳಿದ್ದೇನೊ ಎಂಬುದು ಗೊತ್ತಿಲ್ಲ. ಪ್ರಣಯ, ವಿರಹ, ದೇಶಭಕ್ತಿ.... ಹೀಗೆ ಹಾಡು ಯಾವುದೇ ಇರಲಿ, ಮನ್ನಾ ಡೇ ಅವರ ಮಧುರ ಕಂಠದಿಂದ ಹೊರಹೊಮ್ಮಿದ ಆ ಗೀತೆಗಳನ್ನು ಮರೆಯುವುದು ಉಂಟೆ?
ಮನ್ನಾ ಡೇ ಎಂಬ ಪ್ರಭೊದ್ ಚಂದ್ರ ಡೇ ಅವರ ಹಾಡಿನ ಮಾಧುರ್ಯವೇ ಅಂಥದ್ದು. ಪ್ರಣಯಗೀತೆಯಾಗಲಿ, ವಿರಹ ಗೀತೆಯೇ ಆಗಲಿ ಮನ್ನಾ ಡೇ ಹಾಡಿದರೆಂದರೆ ಅದು ನಮ್ಮ ಮನಸ್ಸನ್ನು ನಾಟಿ ಅಲ್ಲೊಂದು ಹೊಸ ಸಂಚಲನವನ್ನೇ ಮೂಡಿಸುತ್ತವೆ. ಅವುಗಳು ನಮ್ಮ ಜೀವನದೊಂದಿಗೆ ಬೆಸೆದು ಜೀವನ ರಾಗಗಳಾಗಿ ಮಾರ್ದನಿಸುತ್ತವೆ.
ರಾತ್ರಿಯ ಏಕಾಂತದಲ್ಲಿ "ಯೇ ರಾತ್ ಭೀಗಿ ಭೀಗಿ, ಯೇ ಮಸ್ತ್ ಫಿಜಾಯೇ" ಎಂಬ ಹಾಡು ನೀಡುವ ಪುಳಕ ಒಂದೆಡೆಯಾದರೆ ಮೊದಲ ಪ್ರಣಯದ ಗುಂಗಿನಲ್ಲಿ "ಪ್ಯಾರ್ ಹುವಾ ಇಕ್‌ರಾರ್ ಹುವಾ" ಎಂದು ಅದೆಷ್ಟು ಸಾರಿ ನಾವು ಗುನುಗಿರಲ್ಲ!
ಪ್ರೀತಿ ಮುರಿದು ಬಿದ್ದ ದಿನಗಳಲ್ಲಿ ಮನ್ನಾ ಡೇ ಹಾಡಿದ "ಕಸ್ಮೆ ವಾದೆ ಪ್ಯಾರ್ ವಫಾ ಸಬ್ ಬಾತೇ ಹೈ, ಬಾತೊನ್ ಕಾ ಕ್ಯಾ?" ಎಂದು, ಜೀವನ ಅಂದ್ರೆ ಇಷ್ಟೇನೇ ಎಂದು ಸಾರಿ ಹೇಳುವಾಗ ಮತ್ತೆ ಮತ್ತೆ ಕೇಳಿ ಮುಸುಕೆಳೆದು ಅತ್ತವರು ನಾವು.
ಆಮೇಲೆ ಕಣ್ಣೊರಸಿ ಮುಂದಿನ ಹೆಜ್ಜೆ ಇಡುವಾಗ "ಜಿಂದಗಿ, ಕೈಸಿ ಹೆ ಪಹೇಲಿ ಹಾಯ್.." ಎಂಬ ಹಾಡು ನೀಡುವ ಉನ್ಮಾದ ಅದನ್ನು ಅನುಭವಿಸಿಯೇ ಅರಿಯಬೇಕು. ಈ ಪ್ರಯಾಣದಲ್ಲಿ ಜೊತೆಯಾಗುವ ನಮ್ಮ ಸ್ನೇಹಿತರೊಂದಿಗೆ "ಯೇ ದೋಸ್ತಿ ಹಮ್ ನಹಿ ಛೋಡೆಂಗೆ" ಎಂದು ಗಟ್ಟಿಯಾಗಿ ಹಾಡದೇ ಇದ್ದರೂ, ಶಾಲಾ ಕಾಲೇಜುಗಳ ಆಟೋಗ್ರಾಫ್‌ಗಳಲ್ಲಿ ಈ ಸಾಲೊಂದು ಸ್ಥಾನ ಗಿಟ್ಟಿಸಿಕೊಳ್ಳುತ್ತಿತ್ತು.
ಏತನ್ಮಧ್ಯೆ, ಮನೆಯಲ್ಲಿ ನಮ್ಮ ಮಕ್ಕಳನ್ನು ಮುದ್ದಿಸುತ್ತಾ "ತುಝೆ ಸೂರಜ್ ಕಹೂಂ ಯಾ ಚಂದಾ...ತುಝೆ ದೀಪ್ ಕಹೂಂ ಯಾ ತಾರಾ?"ಎಂದು ಹಾಡುವಾಗಲೂ ಅಲ್ಲಿ ಮನ್ನಾ ಡೇ ಅವರ ದನಿ ಇರುತ್ತಿತ್ತು.
ಅವರ ಈ ಕಂಚಿನ ಕಂಠವೇ "ಏಕ್ ಚತುರ ನಾರ್ ಕರ್‌ಕೇ ಸಿಂಗಾರ್" ಎಂದು ಕಿಶೋರ್ ಕುಮಾರ್ ಅವರೊಂದಿಗೆ ಜುಗಲ್‌ಬಂದಿ ನಡೆಸಿದ್ದು, "ಯೇ ಮೇರಿ ಜೊಹರ ಜಬಿ" ಎನ್ನುವ ಎನರ್ಜೆಟಿಕ್ ಹಾಡುಗಳ ಮೂಲಕ ಜೋಶ್ ಬರಿಸಿದ್ದು. "ಏ ಮೇರೆ ಪ್ಯಾರೆ ವತನ್" ಎಂದು ಹಾಡಿ ದೇಶಭಕ್ತಿ ಉಕ್ಕಿಸಿದ್ದೂ ಇದೇ.
"ಆಜ ಸನಮ್ ಮಧುರ್ ಚಾಂದ್ನಿ ಮೇ ಹಮ್" ಎಂದು ಪ್ರಣಯ ಗೀತೆ ಹಾಡಿಸಿ ಕುಣಿಸಿದ್ದೂ ಇದೇ ಸುಮಧುರ ದನಿ.
ಹೀಗೆ ನಮ್ಮ ಎಷ್ಟೋ ಭಾವನೆಗಳನ್ನು, ಭಾವಗಳ ತುಮುಲಗಳನ್ನು ಹಾಡಿನ ಮೂಲಕ ಅವಿಸ್ಮರಣೀಯವಾಗಿ ಮಾಡಿದ ಮನ್ನಾ ಡೇ ನಮ್ಮನ್ನು ಬಿಟ್ಟು ಅಗಲಿದರೂ ಅವರು ನಮ್ಮೊಂದಿಗೆ ಇದ್ದಾರೆ. ಕಾಡುವ ಹಾಡಾಗಿ, ಆ ಹಾಡಿನ ದನಿಯಾಗಿ...
- ರಶ್ಮಿ ಕಾಸರಗೋಡು
rashmitendulkar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


