ಅಂಕಣಗಳು

ಕರ್ನಾಟಕ ಇನ್ನಷ್ಟು ಕೆಡಲಿದೆ

Published On :

'ಕೆಟ್ಟ ಕಾರಣಕ್ಕೆ ಸುದ್ದಿಯಾಗುವಂಥ ಸ್ಥಿತಿಗೆ ತಲುಪಿತೇ ನಮ್ಮ ಕರ್ನಾಟಕ?' ಎಂಬ 'ಬೆತ್ತಲೆ ಜಗತ್ತು' ಅಂಕಣಕ್ಕೆ ಪೂರಕವಾಗಿ ಒಂದಿಷ್ಟು.
ಕರ್ನಾಟಕ ಬರಿ ಭಯೋತ್ಪಾದನೆಯಿಂದಷ್ಟೆ ಕೆಟ್ಟ ಹೆಸರು ಪಡೆಯುತ್ತಿದೆಯಾ? ಸ್ವಲ್ಪ ಇರಿ. ಇದನ್ನು ಸಾಮೂಹಿಕವಾಗಿ ಹಾಗು ವ್ಯವಸ್ಥಿತವಾಗಿ ಕೆಡಿಸುತ್ತಿರುವ ಬುದ್ಧಿಜೀವಿ(ಬುಜಿ)ಗಳ ಬಗ್ಗೆ ಒಂದಿಷ್ಟು ಹೇಳಲೇಬೇಕು. ಕರ್ನಾಟಕದಲ್ಲಿದ್ದಷ್ಟು ಭೌದ್ಧಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಇವತ್ತು ಬೇರಾವುದೆ ರಾಜ್ಯಗಳಲ್ಲಿ ಸುಲಭವಾಗಿ ಸಾಧ್ಯವಿಲ್ಲ. ಗಣೇಶನ ಬಗ್ಗೆ ಸ್ಯಾಡಿಸ್ಟ್ ಚಿಂತನೆ ಹರಿಯಬಿಟ್ಟ ಲೇಖಕನ ಬಂಧನವಾಗುತ್ತಿದ್ದಂತೆ ಅಂತರ್ಜಾಲ ತಾಣಗಳಲ್ಲಿ ಬಾಯಿ ಹರಿಬಿಟ್ಟಿರುವ ಸ್ವಘೋಷಿತ ಲಡಾಯಿ ಲೇಖಕಿ, ಅತ್ತ ಸಂದರ್ಶನವೊಂದರಲ್ಲಿ 'ಮಾಸ್ಟರನೊಬ್ಬ ನಟ' ಎಂದು ಬಾಯಿ ಬಡಿದುಕೊಳ್ಳುತ್ತಿದ್ದ ಸ್ವಯಂ ಬಿರುದಾಂಕಿತ ಪ್ರಗತಿಪರೆ, ಫೇಸ್‌ಬುಕ್ಕಿನಲ್ಲಿ ಲೇಖಕನ ಚಿತ್ರಕ್ಕೆ ಪ್ರತಿಯಾಗಿ, ಅಘೋರಿ-ನಾಗಾ ಸಾಧುಗಳ ಚಿತ್ರ ಪ್ರದರ್ಶಿಸಿ ಇದು ಅಸಹ್ಯ ಅಲ್ಲವಾ ಎನ್ನುತ್ತಾ ಅವನ ಬೆಂಬಲಕ್ಕೆ ನಿಂತ ಬರಹಗಾರರು..., ಈಗಷ್ಟೆ ಹೊಸ ಪತ್ರಿಕೆ ಮಾಡುತ್ತಿರುವ ಆ ಮೂಲಕವಾದರೂ ಬರಹ ಪ್ರಪಂಚದಲ್ಲಿ ನನ್ನದೊಂದಿರಲಿ ಎಂದು ಕಾಲೂರಲೆತ್ನಿತ್ತಿರುವ ಹೊಸ ಸಂಪಾದಕ, ಅವನ ಬೆಂಬಲಕ್ಕೆ ಒಳ ಹೊರ ಏನೂ ಗೊತ್ತಿಲ್ಲದ ಆದರೆ ಮೋದಿಯವರನ್ನು ಬೈದು ದೊಡ್ಡವನಾಗಬಹುದಲ್ಲ ಎನ್ನುವ ಶಾರ್ಟ್‌ಕಟ್ ಬಯಸುವ ಕಾಪಿ ಬರಹಗಾರರು, ಸ್ಥಳೀಯವಾಗಿ ಕವನ ವಾಚನಕ್ಕೆ ವೇದಿಕೆ ಹುಡುಕುವ ಅರೆಬೆಂದ 'ಬುಜಿ'ಗಳು ಹೀಗೆ ಹಲವರ ಸಾಮೂಹಿಕ ಅರ್ಥ ಇಷ್ಟೆ. ಇವರಿಗೆಲ್ಲಾ ಐಡೆಂಟಿಟಿ ಕ್ರೈಸಿಸ್. ಹೇಗಾದರೂ ಮೊದಲ ಪಂಕ್ತಿಗೆ ಪತ್ರಿಕೆಗಳ ಪುಟಕ್ಕೆ, ಆ ಮೂಲಕ ಚಾಲನೆಯಲ್ಲಿರಬೇಕು. 
ನಮ್ಮ ರಾಜ್ಯದಲ್ಲಿ ಇಂತಹ ಎಲ್ಲಾ ವಿಕೃತಿಗಳನ್ನು ಸಹಿಸಿಕೊಳ್ಳಬೇಕು. ಧರ್ಮ, ದೇಶ, ಸಂಸ್ಕೃತಿಯ ಮೇಲೆ ಬೌದ್ಧಿಕ ದಾಳಿಗಳನ್ನು ಬಾಯಿ ಮುಚ್ಚಿ ನೋಡಿಕೊಂಡಿರಬೇಕು. ನಿಮ್ಮೆಲ್ಲರ ಹರಣ ಹನನವಾದರೂ ಸರಿ ಇಂತಹ ವಿಷಯಗಳ ವಿರುದ್ಧ ಧ್ವನಿ ಎತ್ತಬಾರದು. ಮುಂದುವರೆದ ಹೇಳಿಕೆ ಗಮನಿಸಿ. ಯಾಸಿನ್ ಭಟ್ಕಳ್ ಅವನೇ ಅನ್ನುವುದಕ್ಕೇ ಏನು ಖಾತರಿ? ಯೋಗೇಶ ಮಾಸ್ಟರ್‌ಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ವಾ? ನಮ್ಮಲ್ಲೂ ಸಿದ್ದರಾಮಯ್ಯ ಬರಹಗಾರರನ್ನು ಬಂಧಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಇತ್ಯಾದಿ..
ಅಂದರೆ ನಮ್ಮ ಸಂಸ್ಕೃತಿ ಮತ್ತು ಬೌದ್ಧಿಕ ಸಂಪತ್ತಿನ ಮೇಲೆ ನಿರಂತರ ದಾಳಿ ನಡೆಯುತ್ತಿದ್ದರೂ ನಾವೆಲ್ಲಾ ಸುಮ್ಮನಿರಬೇಕು. ಮೇಲಾಗಿ ಈ ಲೇಖಕಿಯರ ಹೇಳಿಕೆಗಳಲ್ಲಿ ಬರುವ, ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ಮೊದಲೇ ಸೃಷ್ಟಿಸಿಕೊಳ್ಳುವ ಅಲಿಬಿಯ ಭಾಗವಾಗಿ, ಇನ್ನಾರಾದರೂ ಪ್ರಶ್ನಿಸಿಯಾರು ಎಂದು 'ಇತರ ಧರ್ಮದ ಬಗ್ಗೆ ಬರೆದು ತೋರಿಸಿ ತಾಕತ್ತಿದ್ದರೆ...  ಎಂದು ನಮ್ಮನ್ನು ಪ್ರಶ್ನಿಸುತ್ತಾರೆ' ಎಂದೂ ಸೇರಿಸಿ ಬರೆದು ಬಿಡುವವರಿಗೊಂದು ಪ್ರಶ್ನೆ.
ಹೌದು, ಈ ರಾಜ್ಯದಲ್ಲಿ ಇರುವ ಯಾಸಿನ್ ಭಟ್ಕಳ್‌ನ ಬೆಂಬಲಕ್ಕೆ ಮಾತಾಡುವ, ಯೋಗೇಶ ಮಾಸ್ಟರ್ ಚಿತ್ರ್ರಗಳಿಗೆ ಆತನ ಬೆಂಬಲಕ್ಕೆ ನಿಂತು ಆತ ನಟ, ಅಭಿವ್ಯಕ್ತಿ ಸ್ವಾತಂತ್ರ ಎಂದೆಲ್ಲಾ ಹರಿಹಾಯುವ, ಪರೋಕ್ಷವಾಗಿ ಮೋದಿ ಭಾಷಣವನ್ನು ಓಟನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವವರೆಲ್ಲಾ ಕೋಮುವಾದಿಗಳು ಎಂದು ಜರಿಯುವ ಆಧುನಿಕ ಮನೋಭಾವದ 'ಬುಜಿ'ಗಳಿಗೆ ಕೆಲವು ಮೂಲ ಭೂತ ಪ್ರಶ್ನೆಗಳು:
ಹೌದು ನಾನೂ ಅದನ್ನೆ ಕೇಳುತ್ತೇನೆ. ನಿಮಗೆ ಮುಸ್ಲಿಂ, ಕ್ರೈಸ್ತ, ಯಹೂದಿ ಜೊತೆಗೆ ಈ ನಮ್ಮದೇ ದೇಶದ ನಿರ್ದಿಷ್ಟ ವರ್ಗಗಳ ನಾಯಕರುಗಳ ಬಗ್ಗೆ ಅಥವಾ ಇನ್ನಾವುದೇ ಧರ್ಮದ ಬಗ್ಗೆ ಹೀಗೆ 'ಸಂಶೋಧನಾತ್ಮಕ' ಬರಹವನ್ನು ಪ್ರಕಟಿಸಿ ಜೀರ್ಣಿಸಿಕೊಳ್ಳುವ ತಾಕತ್ತಿದೆಯಾ? ಹೌದು ಎಂದಾದಲ್ಲಿ ನೀವು ಮೇಲಿನ ಹೇಳಿಕೆ ಕೊಡಲು ಅರ್ಹರು. ಅಸಲಿಗೆ ನಿಮ್ಮ ನಿಮ್ಮ ಬ್ಲಾಗುಗಳು ಮತ್ತು ಸ್ವಂತ ಪ್ರಕಟಣೆಗಳನ್ನು ಹೊರತು ಪಡಿಸಿ ಕ.ಸಾ.ಪ., ಕ.ಅ.ಪ್ರಾ., ಕನ್ನಡದ ಇನ್ನಾವುದೇ ಸಂಘಟನೆಗಳು ಕೊಡುವ ವೇದಿಕೆ ಹೊರತುಪಡಿಸಿದರೆ ನಿಮಗೆ ನಿಮ್ಮದೇ ಭಾಷಣಕ್ಕೆ ಅಥವಾ ಕವನ ಓದಲು ಕನಿಷ್ಟ ಐವತ್ತು ಜನರನ್ನಾದರೂ ಸೇರಿಸಿಕೊಳ್ಳುವ ತಾಕತ್ತಿದೆಯಾ?
ನಿಮ್ಮೆಲ್ಲಾ ಕಾರ್ಯಕ್ರಮಗಳಿಗೆ ಸರಕಾರಿ ಸಂಘಟನೆಗಳ ಬೆಂಬಲದಿಂದಾಗಿ ಸ್ವಯಂ ಘೋಷಿತ ಬರಹಗಾರರೆಂಬ ಪಟ್ಟವನ್ನುಳಿಸಿಕೊಳ್ಳಲು ಸುಲಭಕ್ಕೆ ಅರ್ಥವಾಗದ 'ಅರ್ಧ ಮುಚ್ಚಿದ ಅರ್ಧ ಬಿಚ್ಚಿದ' ಎಂಬಂತಹ ಕವನಗಳನ್ನು ವೇದಿಕೆಯ ಮೇಲೆ ಓದಲು ಸಾಧ್ಯವಾಗುತ್ತಿದೆ. ದೇಶದ, ರಾಜ್ಯದ ಹಿತಕ್ಕೆ ಮಾರಕವಾಗಿರುವ ಸಂಸ್ಕೃತಿಯ ಮೇಲಿನ ದಾಳಿಗಳನ್ನು ಬೆಂಬಲಿಸಿ ಪ್ರಗತಿಪರ ಎಂದುಸಿರಿಕೊಂಡು ದೇಶ, ರಾಜ್ಯದ ನೆಲ, ಜಲ ಭಾಷೆಯ ಮೇಲಾಗುವ ಬೌದ್ಧಿಕ ಮತ್ತು ಸಾಮಾಜಿಕ ದಾಳಿಗಳಿಗೆ ಧ್ವನಿ ಎತ್ತದೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಸೋಗಲಾಡಿತನದಲ್ಲಿ, ವೈರುಧ್ಯಗಳ ಹೇಳಿಕೆಯಿಂದಲೇ ಜನಪ್ರಿಯತೆಯಲ್ಲಿರಲು ಬಯಸುವ ಸ್ಟೇಜ್ ಸಾಹಿತಿ ಮತ್ತು ಬುದ್ಧಿಜೀವಿಗಳೆ... ನಿಮ್ಮಲ್ಲಿ ಎಷ್ಟು ಜನರು ಸಾಹಿತ್ಯಿಕವಾಗಿ ಇವತ್ತು ನಿರಂತರವಾಗಿ ನಾಡಿನ ಪತ್ರಿಕೆಗಳಲ್ಲಿ, ಬರಹಗಳಲ್ಲಿ, ಪ್ರಕಟಣೆಗಳಲ್ಲಿ ಜೀವಂತವಾಗಿದ್ದೀರಿ? ಪ್ರಗತಿಪರ ಎಂದು ತನ್ನನ್ನು ತಾನೇ ಕರೆದುಕೊಳ್ಳುವ ಲೇಖಕಿಯಿಂದ ಮೊನ್ನೆ ಇಂಥದ್ದೇ ಹಾಸ್ಯಾಸ್ಪದವಾದ ಹೇಳಿಕೆ ಹೊರಟಿತು. ನಮ್ಮ ನಮ್ಮ ಪುಸ್ತಕಗಳನ್ನು (ಖರ್ಚಾಗದಿರುವುದರಿಂದ) ಇನ್ಮು ಮುಂದೆ ಸಮಾರಂಭದಲ್ಲಿ ಪರಸ್ಪರ ಒಬ್ಬರದೊಬ್ಬರು ಪುಸ್ತಕ ಹಂಚಿಕೊಳ್ಳೋಣ (ನನ್ನದು ನಿನಗೆ, ನಿನ್ನದು ನನಗೆ) ಎನ್ನುವ ಮಟ್ಟಿಗೆ ಬೌದ್ಧಿಕ ದಿವಾಳಿತನಕ್ಕೆ ಬಂದು ನಿಂತಿದ್ದೀರಲ್ಲ... ನೀವೆಲ್ಲಾ ಬ್ಲಾಗುಗಳಲ್ಲಿ ಕಂಡ ಕಂಡಲ್ಲಿ ಮಾಸ್ಟರ್‌ನಂಥವನನ್ನು ಬೆಂಬಲಿಸದೇ ಏನು ಮಾಡುತ್ತೀರಿ?
ಯಾವುದೇ ಕಾರ್ಯಕ್ರಮದ ವೇದಿಕೆ ಇರಲಿ ಇವತ್ತು ಅಲ್ಲಿ ಬಿ.ಜೆ.ಪಿ ಹೊರತು ಪಡಿಸಿ ಇನ್ನಾವುದೇ ಪಕ್ಷ ಅಥವಾ ವ್ಯಕ್ತಿ ಕೇಂದ್ರಿಕೃತ ಕಾರ್ಯಕ್ರಮ ಇದ್ದರೆ, ಸಮಾನತೆ ಎಂದರೆ ಅಭಿವೃದ್ಧಿಯಲ್ಲ, ಮೋದಿಯಂತಹ ಅನಾಹುತಕಾರಿ ಮನುಷ್ಯ ಪ್ರಧಾನಿ ಪಟ್ಟಕ್ಕೆ ಯೋಗ್ಯ ಅಲ್ಲ ಎನ್ನುತ್ತಾ ಸಂಬಂಧ ಇಲ್ಲದ ವಿಷಯದಲ್ಲೂ ಗುಜರಾತಿನ ವಿಷಯವನ್ನು ಎಳೆದು ತರುತ್ತಿರಲ್ಲಾ? ಸಾಹಿತ್ಯಿಕ ವೇದಿಕೆಯಲ್ಲಿ ಮೋದಿಯ ಬಗ್ಗೆ ಯಾಕೆ ಮಾತು ಬೇಕು? ಹೋಗಲಿ ನಿಮ್ಮಲ್ಲಿ ಎಷ್ಟು ಜನ ಮೋದಿಯವರ ಆಡಳಿತ ನೋಡಿದ್ದೀರಿ? ಎಷ್ಟು ಜನರಿಗೆ ಅಲ್ಲಿನ ಹಿಂದುಳಿದ ನಾಡಿನಿಂದ ಒಳಾವರಣದಲ್ಲಿರುವ ಪ್ರದೇಶಗಳಲ್ಲಿ ಜೀವಿಸಿದ ಗುಜರಾತಿನ ಕೊಟ್ಟ ಕೊನೆಯ ಹಳ್ಳಿಗಳಲ್ಲೂ ಇವತ್ತು ಯಾವ ರೀತಿಯ ಜನಜೀವನ ಇದೆ ಎನ್ನುವುದನ್ನು ಪ್ರಾಯೋಗಿಕವಾಗಿ ಗಮನಿಸಿದ ಅನುಭವವಿದೆ? ನೀವೆಷ್ಟು ವರ್ಷಗಳಿಂದ ಅವರ ಪಕ್ಷ ಅಥವಾ ಇತರೆ ಸಂಘಟನೆಯ ಕಾರ್ಯಕರ್ತರಾಗಿ ದುಡಿದಿದ್ದೀರಿ? ಮೋದಿಯ ಬಗ್ಗೆ ಓತ ಪ್ರೋತವಾಗಿ ಅವರ ಭಾಷಣವನ್ನು ಟೀಕಿಸುವ ನಿಮ್ಮ ಸಾಧನೆಗಳೇನು? (ಮುಂಬೈ ಶಣ್ಮುಖಾನಂದ ಹಾಲ್‌ನಲ್ಲಿ ನಡೆದ ಅವರ ಭಾಷಣದ ರೆಕಾರ್ಡ್ ಲಭ್ಯವಿದ್ದರೆ ಒಮ್ಮೆ ಕೇಳಿ ನೋಡಿ. ಯಾವ ನಾಯಕ ಇವತ್ತು ಎದುರಾಳಿ ಪಕ್ಷದವರನ್ನು ಮಾತು ಕೇಳಲೆಂದೆ ಆಕರ್ಷಿಸುವಷ್ಟು ಅಂಕಿ ಅಂಶ ಸಮೇತ ಪ್ರಬುದ್ಧವಾಗಿ ಮಾತಾಡಬಲ್ಲರು. ಮೋದಿಯವರ ಭಾಷಣ ಬರೀ ಸ್ವಯಂ ಕೆರೆತವಲ್ಲ. ಅವರಲ್ಲಿನ ವಿಷಯ ಮತ್ತು ವೈಚಾರಿಕತೆಯ ಹಿಡಿತ ಸಂಪೂರ್ಣ ತಯಾರಿಯಿಂದ ಕೂಡಿರುತ್ತದೆ)
ಆದರೆ ನಮ್ಮಲ್ಲಿ ಬುದ್ಧಿ ಜೀವಿಗಳೆನ್ನಿಸಿಕೊಂಡ ನೀವು ಮಾಡುತ್ತಿರುವುದೇನು? ನಿಮ್ಮಿಂದ ಒಂದು ಮಾತೂ ಬರುವುದಿಲ್ಲ. ಮಾತಾಡಿದರೆ ಬರೀ ಕೋಮುವಾದ ಎಂದು ನಮ್ಮ ಅನ್ನ, ನಮ್ಮ ನೆಲ, ನಮ್ಮ ಜಲಮೂಲಗಳಿಂದ ಬೆಳೆದುಬಂದ ನಮ್ಮ ಧರ್ಮದ ಸಂಸ್ಕೃತಿಯನ್ನೆ ತೆಗಳುವುದು. ಇನ್ನು ಸೃಜನಶೀಲತೆ ಎಲ್ಲಿಂದ ಬಂದೀತು?  ಸಾಮಾಜಿಕವಾಗಿ ಹೇಳಿಕೆ ಕೊಟ್ಟು ಭಟ್ಕಳ್ ಮತ್ತು ಮಾಸ್ಟರ್‌ನಂಥವರನ್ನು ಬೆಂಬಲಿಸಿ ಜನಪ್ರಿಯತೆಗೆ ಶಾರ್ಟ್‌ಕಟ್ ಹುಡುಕುವುದು...
ಬರೆದಿದ್ದೆಲ್ಲಾ ರದ್ದಿಯಂತಹದ್ದು. ಎಷ್ಟು ಜನ ಬರಹಗಾರಿಗೆ ನಿಮ್ಮ ಕನಿಷ್ಟ ಒಂದು ಸಾವಿರ ಪುಸ್ತಕ ಮಾರಾಟವಾಗುತ್ತೆ ಎನ್ನುವ ಧೈರ್ಯವಿದೆ? (ಭೈರಪ್ಪನವನನ್ನು ಟೀಕಿಸುವ ಮುನ್ನ ಅವರ ಮಾರಾಟದ ವೇಗವೆ ನಿಮ್ಮಂಥವರ ಹೊಟ್ಟೆ ಉರಿಗೆ ಕಾರಣವಾಗುತ್ತಿದೆ ಎನ್ನುವುದು ರಹಸ್ಯವಾಗುಳಿದಿಲ್ಲ. ಎಷ್ಟು ಜನ ಬು.ಜೀ. ಗಳ ಪುಸ್ತಕಗಳು ಭಾಷೆಯ ಗಡಿ ಮೀರಿ ಜನಪ್ರಿಯತೆ ಪಡೆದಿವೆ?)  ಬೆಂಬಲ ಬೇಕು ಅದು ಎಲ್ಲಾ ವರ್ಗಗಳನ್ನೂ ಮೀರಿ ನಿಲ್ಲಬೇಕು ನಿಜ. ಆದರೆ ಅದು ವೇದಿಕೆಯ ಮತ್ತು ಜನಪ್ರಿಯತೆಯ ತೆವಲಿಗೆ ಬಲಿಯಾಗಬಾರದು.

- ಸಂತೋಷಕುಮಾರ ಮೆಹೆಂದಳೆ, ಲೇಖಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.