ಅಂಕಣಗಳು

ದಕ್ಷಿಣ ದಿಕ್ಕಿನ ಲೆಕ್ಕಗಳು

Published On :

ಉತ್ತರಪ್ರದೇಶದಂತೆ ತಮಿಳು ನಾಡು ಮತ್ತು ಆಂಧ್ರಪ್ರದೇಶದ ಚುನಾವಣಾ ಚಿತ್ರಕತೆ ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ನಿರ್ಧರಿಸುತ್ತವೆ. ಈ ಬಾರಿ ಬಿಜೆಪಿ ತಮಿಳುನಾಡು ಮತ್ತು ಆಂಧ್ರದಲ್ಲಿ ಹೊಸ ಗೆಳೆಯರನ್ನು ಸಂಪಾದಿಸಿದೆ. ಹಾಗಿದ್ದರೆ ಈ ಮೈತ್ರಿಯಿಂದಾಗಿ ಬಿಜೆಪಿಗೆ ಲಾಭವಾಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನು ಇಲ್ಲಿನ ಕೆಲವು ಲೇಖನಗಳು ಮಾಡಿವೆ...
ಹಲವು ದಶಕಗಳಿಂದ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳೇ (ಡಿಎಮ್‌ಕೆ ಮತ್ತು ಏಐಎಡಿಎಮ್‌ಕೆ) ಪಾರಮ್ಯ ಮೆರೆಯುತ್ತಿದ್ದರೂ, ಈ ಬಾರಿ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಬಿಜೆಪಿ ನೇತೃತ್ವದ ಒಕ್ಕೂಟ ಅಲ್ಲಿನ ಚುನಾವಣಾ ಚಿತ್ರಕತೆಯನ್ನು ಬದಲಿಸುವ ಸಾಧ್ಯತೆಯಿದೆ ಎನ್ನುತ್ತದೆ 'ಫ್ರೀಪ್ರೆಸ್ ಜರ್ನಲ್‌'ನ ವಿಶ್ಲೇಷಣೆ: "ಬಿಜೆಪಿಯ ಬತ್ತಳಿಕೆಯಲ್ಲೀಗ ಸುಮಾರು 10 ಪ್ರತಿಶತ ಮತ ಪಾಲು ಹೊಂದಿರುವ ಎಮ್‌ಡಿಎಮ್‌ಕೆ ಪಕ್ಷದ ನಾಯಕ, ನಟ, ವಿಜಯಕಾಂತ್ ಇದ್ದಾರೆ. ಅಲ್ಲದೆ ರಾಜ್‌ನಾಥ್ ಸಿಂಗ್ ಅವರು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ ಮುಖ್ಯಮಂತ್ರಿ ಎನ್. ರಂಗಸ್ವಾಮಿಯವರನ್ನು ಬಿಜೆಪಿಯ ಬಳಿ ಕರೆತರುವಲ್ಲಿ ಯಶಸ್ವಿಯಾಗಿರುವುದರಿಂದ, ಕಾಂಗ್ರೆಸ್ ಅಂತೂ ಬೆಚ್ಚಿಬಿದ್ದಿದೆ. ಜಯಲಲಿತಾ ಅವರು ಎನ್‌ಡಿಎಗೆ ಬೆಂಬಲ ಕೊಡುವ ಸಾಧ್ಯತೆ ಈಗಿಲ್ಲದಿದ್ದರೂ ಮುಂದಾದರೂ ಎದುರಾಗಬಹುದು ಎನ್ನುವ ಕಾರಣದಿಂದ, ಅವರನ್ನು ಮಾತ್ರ ಟೀಕಿಸುವುದರಿಂದ ಬಿಜೆಪಿ ದೂರ ಉಳಿಯುತ್ತಿದೆ. ಒಂದು ವೇಳೆ ಬಿಜೆಪಿ ಬಿಜೆಪಿ ನೇತೃತ್ವದ ಒಕ್ಕೂಟ ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಒಂದು ಡಜನ್ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೂ, ಈ ಹೊಸ ಮೈತ್ರಿಗೆ ಭಾರೀ ಲಾಭವಾಗಲಿದೆ" ಎನ್ನುತ್ತದದು.  
ಇದೇ ಧಾಟಿಯಲ್ಲೇ ಸಾಗುತ್ತದೆ ನಿಟಿ ಸೆಂಟ್ರಲ್ ಜಾಲತಾಣದಲ್ಲಿ ಸಂಧ್ಯಾ ಜೈನ್ ಬರೆದಿರುವ ಲೇಖನ. 2011ರ ವಿಧಾನಸಭಾ ಚುನಾವಣೆಯಲ್ಲಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ, ಡಿಎಮ್‌ಕೆಯನ್ನು ಹಿಂದಿಕ್ಕಿ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತ ವಿಜಯಕಾಂತ್‌ರ ಡಿಎಮ್‌ಡಿಕೆ ಈ ಬಾರಿ ಮತ್ತೆ ಮ್ಯಾಜಿಕ್ ಮಾಡಲಿದೆ. "ಬಿಜೆಪಿ ನೇತೃತ್ವದ ಹೊಸ ಮಿತ್ರ ಕೂಟಕ್ಕೆ ಸುಮಾರು 18 ಸ್ಥಾನಗಳಂತೂ ನಿಕ್ಕಿಯಾಗಿವೆ. ಬಿಜೆಪಿ 5 ಕ್ಷೇತ್ರಗಳಲ್ಲಿ, ಡಿಎಮ್‌ಡಿಕೆ 6 ಕ್ಷೇತ್ರಗಳಲ್ಲಿ, ಪಿಎಮ್‌ಕೆ, ಎಮ್‌ಡಿಎಮ್‌ಕೆ ತಲಾ 3 ರಲ್ಲಿ ಮತ್ತು ಕೆಎಮ್‌ಡಿಕೆ ಒಂದು ಕ್ಷೇತ್ರದಲ್ಲಿ ಗೆಲ್ಲಬಹುದು" ಎನ್ನುತ್ತಾರವರು.  
ಆದರೆ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಮಾತ್ರ ತಮಿಳುನಾಡಿನಲ್ಲಿ ಈ ಹೊಸ ಮೈತ್ರಿಕೂಟದ ಆಟ ನಡೆಯುವುದಿಲ್ಲ ಎಂದು 'ಜೀರೋ ಥಿಯರಿಯನ್ನು" ಮುಂದಿಡುತ್ತಾರೆ. ಎನ್‌ಡಿಟಿವಿ ಜಾಲತಾಣಕ್ಕೆ ಬರೆದಿರುವ ಲೇಖನದಲ್ಲಿ ಅವರು, ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಪಕ್ಷಗಳನ್ನು ಜನ ಎಂದೋ ನಿರಾಕರಿಸಿದ್ದಾರೆ ಎನ್ನುತ್ತಾರೆ. ಡಿಎಮ್‌ಡಿಕೆಯ ವಿಜಯ್‌ಕಾಂತ್ ಮತ್ತು ಪಿಎಮ್‌ಕೆಯ ರಾಮ್‌ದಾಸ್ ನಡುವೆ ಮೊದಲಿನಿಂದಲೂ ವೈರವಿರುವುದರಿಂದ ಜನ ಅವರನ್ನು ಮತ್ತು ಹಿಂದೊಮ್ಮೆ ಕರುಣಾನಿಧಿಯವರನ್ನು ಎದುರು ಹಾಕಿಕೊಂಡು ಸುದ್ದಿ ಮಾಡಿದ್ದ ವೈಕೋ ಅವರ ಎಮ್‌ಡಿಎಮ್‌ಕೆಯನ್ನು ತಿರಸ್ಕರಿಸುತ್ತಾರೆ ಎನ್ನುವ ಅಯ್ಯರ್ ಕೊನೆಗೆ ಈ ಮೈತ್ರಿಯ ಬಗ್ಗೆ ವ್ಯಂಗ್ಯವಾಗಿ ಹೇಳುವುದು ಹೀಗೆ: "ತಮಿಳುನಾಡಿನಿಂದ ಒಬ್ಬೇ ಒಬ್ಬ ಹಾಲಿ ಸಂಸದರನ್ನು ಹೊಂದಿರದ ಒಂದು ಪಕ್ಷ, ಅಂಥದ್ದೇ ಇನ್ನೂ ಮೂರು ಪಕ್ಷಗಳೊಂದಿಗೆ ಕೈಜೋಡಿಸಿವೆ. ಎಲ್ಲವೂ ತಾವು ಕುಳಿತ ರೆಂಬೆಯನ್ನೇ ಕತ್ತರಿಸಿಕೊಳ್ಳುವ ಕೆಲಸ ಮಾಡುತ್ತಿವೆ. ಇಂಥ ವಿಫಲ(ಸೊನ್ನೆ) ಪಕ್ಷಗಳನ್ನು ಕಟ್ಟಿಕೊಂಡು ಬಿಜೆಪಿ ಮುನ್ನಡೆಯುತ್ತಿದೆ. ಬಿಜೆಪಿ 1999ರ ನಂತರ ತಮಿಳುನಾಡಿನಲ್ಲಿ ಬರೀ ಸೊನ್ನೆಯನ್ನೇ ಸಂಪಾದಿಸುತ್ತಾ ಬಂದಿದೆ. ಗಣಿತದಲ್ಲಿ ಸಾಮಾನ್ಯ ಜ್ಞಾನವಿದ್ದವನಿಗೂ ಕೂಡ ಈ ಲೆಕ್ಕಾಚಾರ ಗೊತ್ತಿರುತ್ತದೆ- ಸೊನ್ನೆಗೆ ಸೊನ್ನೆ, ಅದಕ್ಕೊಂದು ಸೊನ್ನೆ..ಹೀಗೆ ಒಂದು ಸೊನ್ನೆಗೆ ಎಷ್ಟೇ ಸೊನ್ನೆ ಸೇರಿಸಿದರೂ ಉತ್ತರ ಸೊನ್ನೆಯೇ!"   
----
ಇನ್ನೊಂದೆಡೆ ಆಂಧ್ರ ಪ್ರದೇಶ ವಿಭಜನೆಯ ನಂತರ ತೆಲಂಗಾಣ ಮತ್ತು ಸೀಮೈಕ್ಯ ಆಂಧ್ರದಲ್ಲಿ ಎಂದಿಗಿಂತಲೂ ಸ್ಥಳೀಯ ಪಕ್ಷಗಳ ಚಟುವಟಿಕೆ ತೀವ್ರವಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿ, ವೈಎಸ್‌ಆರ್ ಕಾಂಗ್ರೆಸ್ ಮತ್ತು ತೆಲುಗು ದೇಶಂ ಅಷ್ಟೇ ಅಲ್ಲದೆ ಪವನ್ ಕಲ್ಯಾಣ್‌ರ ಜನಸೇನೆ ಮತ್ತು ಕಿರಣ್ ಕುಮಾರ್ ರೆಡ್ಡಿಯವರ ಸಮೈಕ್ಯಾಂಧ್ರ ಕೂಡ ಈಗ ಸದ್ದು ಮಾಡುತ್ತಿವೆ. ಪವನ್ ಕಲ್ಯಾಣ್ ತಮ್ಮ ಪಕ್ಷ ಸ್ಥಾಪನೆಯಾಗುತ್ತಿದ್ದಂತೆಯೇ, ಮೋದಿ ಪರ ಬೆಂಬಲ ಘೋಷಿಸಿದ್ದಾರೆ. ಈ ಕುರಿತು ರೀಡಿಫ್ ಜಾಲತಾಣದಲ್ಲಿ ಬಂದಿರುವ ಟಿ.ವಿ. ಆರ್ ಶಣೈರ ಲೇಖನ, ಈ ಬಾರಿ ಕಾಂಗ್ರೆಸ್ ತಮಿಳುನಾಡು ಮತ್ತು ಆಂಧ್ರದಲ್ಲಿ ಯಾರ ಜೊತೆ ಬೇಕಿದ್ದರೂ ಕೈಜೋಡಿಸಿದರೂ...ನಿಸ್ಸಂಶಯವಾಗಿಯೂ ಆ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಎನ್ನುತ್ತಾರೆ. ಅವರ ವಿಶ್ಲೇಷಣೆಯನ್ನು ನೋಡಿದರೆ ಇದು ನಿಜವೆನ್ನಿಸದಿರದು. ಅವರು ಹೇಳುತ್ತಾರೆ "ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಅಂದರೆ, 1999ರಲ್ಲಿ ಬಿಜೆಪಿ ಮತ್ತು ತೆಲುಗು ದೇಶಂನ ಚುನಾವಣಾ ಪೂರ್ವ ಮೈತ್ರಿ ಆಂಧ್ರದ 42 ಸ್ಥಾನಗಳಲ್ಲಿ 36 ಸ್ಥಾನಗಳನ್ನು ಗೆದ್ದಿತ್ತು, ಅದೇ ಸಮಯದಲ್ಲಿ ತಮಿಳುನಾಡಿನಲ್ಲಿ ಡಿಎಮ್‌ಕೆ, ಪಿಎಮ್‌ಕೆ ಮತ್ತು ಎಮ್‌ಡಿಎಮ್‌ಕೆ ಒಂದಾಗಿ 39ರಲ್ಲಿ 26 ಸ್ಥಾನಗಳನ್ನು ಗೆದ್ದಿದ್ದವು. ಆಗಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಿತು.
2004ರಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿಯೊಂದಿಗೆ ಕೈ ಜೋಡಿಸಿದ ಕಾಂಗ್ರೆಸ್ ಯಶಸ್ಸು ಪಡೆಯಿತು. ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಮ್‌ಕೆ ಜೋಡಿ ಎಲ್ಲಾ 39 ಸ್ಥಾನಗಳನ್ನು ಗೆದ್ದಿತು. ಆ ವರ್ಷ ಕೇಂದ್ರದಲ್ಲಿ ಬಂದಿದ್ದು ಯುಪಿಎ. 2009ರಲ್ಲಿ ಕೂಡ ಇದೇ ರೀತಿಯ ಫಲಿತಾಂಶ ಹೊರಬಂತು. ಈ ಬಾರಿ ಆಂಧ್ರ ಮತ್ತು ತಮಿಳುನಾಡಿನ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿಯೇ ಸಫಲವಾಗಿರುವುದರಿಂದ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬರುವ ಎಲ್ಲಾ ಸಾಧ್ಯತೆಗಳೂ ಇವೆ".

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.