ಅಂಕಣಗಳು

2014 ರ ಕರ್ನಾಟಕದ ಆಯ-ವ್ಯಯ ರೈತರ ಪರವಾಗಿರಲಿ

Published On :

ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಹಸ್ತಗುಣ ಚೆನ್ನಾಗಿದೆ ಎಂದು ನಂಬಿ ಸಿದ್ಧಹಸ್ತದ ಫಲಕ್ಕಾಗಿ ಹಾತೊರೆದು ಕಾದಿರುವ ಜನರು ರಾಜ್ಯದ ಎಲ್ಲಾಮೂಲೆಗಳಲ್ಲೂ ಅನೇಕಾನೇಕ.
ಈ ವರ್ಷದ ಮಳೆಯು ನೇಗಿಲಯೋಗಿ ಸ್ನೇಹಿಯಾಗಿ ಆರಂಭವಾಗಿರುವುದನ್ನು ಗಮನಿಸಿದರೆ ಪ್ರಕೃತಿ ಸಿದ್ದರಾಮಯ್ಯನವರ ಪರವಾಗಿ ಹವಾಮಾನಗಳನ್ನು ಮಾರ್ಪಾಡು ಮಾಡುತ್ತಿದೆಯೇನೋ ಎನ್ನುವ ಊಹೆ ಉದ್ಭವಿಸದಿರದು. ಕೃಷಿ ಬಜೆಟ್ ಅನ್ನು ಕೇವಲ ಪ್ರತ್ಯೇಕಿಸುವುದರಿಂದ ಏನನ್ನೂ ಸಾಧಿಸಲಾಗದು ಅಥವಾ ಯಾವುದೇ ಪವಾಡ ಮಾಡಿ ತೋರಿಸಲಾಗದು ಎಂಬುದನ್ನು ಮನಗಾಣಬೇಕು. ಬದಲಾಗಿ ವಿವಿಧ ಕ್ಷೇತ್ರಗಳಿಂದ ಆಯ್ದ ಪ್ರಜ್ಞಾವಂತ ಅನುಭಾವಿಗಳ ಜೊತೆ ಅರ್ಥಪೂರ್ಣ ಚರ್ಚೆಗಳ ಮೂಲಕ ಮೂಡಿಬರುವ ಸಲಹೆ-ಮಾದರಿಗಳನ್ನೇ ದಾರಿ ದೀಪವನ್ನಾಗಿಸಿ ಕಾರ್ಯೋನ್ಮುಖಿಯಾದರೆ ಮಾತ್ರ ಫಲ ಕಾಣಲು ಸಾಧ್ಯವಾದೀತು. ಇದು ಸುಲಭವಲ್ಲವೆನಿಸಿದರು ಕಷ್ಟವೂ ಅಲ್ಲವೆಂಬುದು ನನ್ನ ಅಭಿಪ್ರಾಯ.
ಈಗ ನಾವಿರುವುದು ಜಾಗತಿಕ ಮಾರುಕಟ್ಟೆ ಮತ್ತು ಸಂಸ್ಕೃತಿಯೊಡನೆ. ಮೊದಲಹೆಜ್ಜೆಯೆಂದರೆ ಕೃಷಿ ಆದ್ಯತೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದು. ಅದಕ್ಕಾಗಿ ಒಂದು ವಿಶಿಷ್ಟ ಸಮಿತಿಯೊಂದು ರಚನೆಯಾಗಬೇಕು. ಇಂತಹ ಸಮಿತಿಯಲ್ಲಿ ಅನುಭವಿ ನಾಯಕರು, ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳು, ಸಾಧನೆ ಮಾಡಿದ ವಿವಿಧ ವರ್ಗದ ರೈತರು, ಸರ್ಕಾರೇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಕೊಡುಗೆ ನೀಡಿರುವವರು ಇತ್ಯಾದಿ ಇರಬೇಕು. ಕಾಲಮಿತಿಯೊಳಗೆ ಶಿಫಾರಸ್ಸುಗಳು ಸರ್ಕಾರದ ಮುಂದೆ ಮಂಡನೆಯಾಗಬೇಕು. ಈಗ ಚಾಲ್ತಿಯಲ್ಲಿರುವ ಕೃಷಿ ನೀತಿ ಮಾರ್ಪಾಡಾಗಬೇಕು.
ಕೆಲವು ಕ್ಷೇತ್ರಗಳಲ್ಲಿ ಕರ್ನಾಟಕ  ರಾಜ್ಯವು ವಿಜ್ಞಾನ ವಿರೋಧಿ ರಾಜ್ಯ ಎನಿಸಿಕೊಂಡಿರುವುದು ಹಲವಾರು ಭಾರಿ ಚರ್ಚೆಗಳಲ್ಲಿ ಭಾಗವಹಿಸಿದಾಗ ನನಗೆ ಹಾಗು ನನ್ನ ಸಹೋದ್ಯೋಗಿಗಳಿಗಂತೂ ಕೇಳಿಬಂದಿದೆ. ಕರ್ನಾಟಕಕ್ಕೆ ಇಂತಹ ಅಪಕೀರ್ತಿ ಸಲ್ಲದು. ಆದ್ದರಿಂದ ಪ್ರಸ್ತುತ ಮುಖ್ಯ ಮಂತ್ರಿ ಗಂಭೀರವಾಗಿ ಇದನ್ನು ಗಮನಿಸಿ ವಿಜ್ಞಾನ ತಾಣವಾದ ಬೆಂಗಳೂರು ಇರುವ ಈ ರಾಜ್ಯದ ವಿಜ್ಞಾನಿಗಳನ್ನು ಮತ್ತು ಇಲ್ಲಿ ಬೇರೆಲ್ಲೂ ಇಲ್ಲದಷ್ಟು ವಿಶಿಷ್ಟವಾಗಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ರೈತರು ಮತ್ತು ಗ್ರಾಮೀಣರಿಗೆ ವಿಜ್ಞಾನದ ಸಂಪೂರ್ಣ ಪ್ರಯೋಜನ ದೊರಕುವಂತಾಗಿಸಲು ಕೃಷಿ ಬಜೆಟ್ ರೂಪಿಸಬೇಕಾಗಿದೆ. ಇಂತಹ ಬಜೆಟ್ ಲಭ್ಯವಾಗಲಿ ಎಂಬುದು ರಾಜ್ಯದ ಕೃಷಿ ವಿಜ್ಞಾನಿಗಳ ಮಹದಾಸೆಯೂ ಆಗಿದೆ. ಸಧ್ಯದಲ್ಲಿ  ಬಳಕೆಯಲ್ಲಿರುವ ಕೆಲವು ನೀತಿನಿಯಮಗಳು ಮಾರುಕಟ್ಟೆ ಮತ್ತು ಸಂಸ್ಕೃತಿ ರೈತಸ್ನೇಹಿಯಾಗಿಲ್ಲ. ಸಬ್ಸಿಡಿಯಿಂದ ಉದ್ಯಮಿಗಳಿಗೆ ಅದರಲ್ಲೂ ಬಹುರಾಷ್ಟ್ರೀಯ ಉದ್ಯಮಿಗಳಿಗೆ ದೊರಕುವಷ್ಟು ಪ್ರಮಾಣದಲ್ಲಿ ರೈತರಿಗೆ ಪ್ರಯೋಜನವಾಗುತ್ತಿಲ್ಲ ಎಂಬುದನ್ನು ಗಮನಿಸಬೇಕು. ರಸಗೊಬ್ಬರಗಳಿಗೆ ನೀಡುತ್ತಿರುವ ಸಬ್ಸಿಡಿ ಪರೋಕ್ಷವಾಗಿ ರೈತರಿಗೆ ಸ್ವಲ್ಪಮಟ್ಟಿಗೆ ಸಿಗುತ್ತದೆಯೇ ಹೊರತು, ಹೆಚ್ಚಿನ ಲಾಭ ಉದ್ಯಮಿಗಳಿಗೇ ಸಿಗುತ್ತಿದೆ.
ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಪ್ರಸ್ತುತ ಸಾಲಿನ ಜನಗಣತಿಯ ಪ್ರಕಾರ ರೈತರು 119 ಲಕ್ಷ  ಮತ್ತು ಕೃಷಿ ಕೂಲಿಗಳು 144 ಲಕ್ಷ. ಕುಗ್ಗುತ್ತಿರುವ ರೈತರ ಸಂಖ್ಯೆ ಹಾಗೂ ಹಿಗ್ಗುತ್ತಿರುವ ಕಾರ್ಮಿಕರ ಸಂಖ್ಯೆಯ ಪ್ರವೃತ್ತಿ ಭಯಾನಕವಾಗಿದೆ. ವಿಶೇಷ ಆರ್ಥಿಕ ವಲಯಗಳನ್ನು (Special Economic Zone -SEZ)  ಸ್ಥಾಪಿಸುವಾಗ ಆಯ್ಕೆ ಮಾಡುವ ಉದ್ಯಮಗಳು ಗ್ರಾಮೀಣರ ಮತ್ತು ರೈತರ ಪರವಾಗಿರಲಿ, ಬಹುರಾಷ್ಟ್ರೀಯ ಕಂಪನಿಗಳ ಪರವಾಗದಿರಲಿ ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಕೊಯಿಲೋತ್ತರ ಸಂಸ್ಕರಣೆ (Post Harvest Technology-PHT) ಮಾಡಿ ಮತ್ತು ಮೌಲ್ಯ ಹೆಚ್ಚಿಸಿ (Value Addition) ಅಂದರೆ ದ್ವಿತೀಯ ಕೃಷಿಗೆ (Secondary Agriculture) ಒತ್ತು ನೀಡಿ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಸಣ್ಣ ಪ್ರಮಾಣದ ಉದ್ಯಮಗಳನ್ನೂ ಸ್ಥಾಪಿಸುವ ವ್ಯವಸ್ಥೆಗೆ ಮಾನ್ಯತೆ ಕೊಡಬೇಕಾಗಿದೆ. ಅದರಿಂದ ಗ್ರಾಮೀಣ ನಿರುದ್ಯೋಗಿಗಳು ಪಟ್ಟಣಮುಖಿಗಳಾಗುವವರ ಸಂಖ್ಯೆಯನ್ನು ಗಣನೀಯವಾಗಿ ಇಳಿಸಬಹುದು ಹಾಗೂ ರೈತರ ಆದಾಯವನ್ನು ಹೆಚ್ಚಿಸಬಹುದು.
ರೈತರಿಗೆ ಸಕಾಲದಲ್ಲಿ ಗುಣಮಟ್ಟವುಳ್ಳ ಬೀಜವನ್ನು ನ್ಯಾಯವಾದ ಬೆಲೆಯಲ್ಲಿ ಒದಗಿಸುವ ವ್ಯವಸ್ಥೆ ಮಹತ್ವದ ವಿಷಯ
1. ಸ್ವಬೀಜಾಭಿವೃದ್ಧಿಗೆ ಕಳೆದ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ನೀಡಿತ್ತಾದರೂ ಅದು ತೃಪ್ತಿಕರವಾಗಿ ಬಳಕೆಯಾಗಲಿಲ್ಲ. ಜೆ.ಎಸ್.ಎಸ್. ಸಂಸ್ಥೆಯ ಗ್ರಾಮೀಣಾಭಿವೃದ್ಧಿ ನಿರ್ದೇಶಕನಾಗಿ ನಾನೂ ಅದರ ಬಳಕೆಯಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೆ. ಸಂಪೂರ್ಣವಾಗಿ  ಬಿಡುಗಡೆಯಾಗಲಿಲ್ಲವೋ ಅಥವಾ  ಬೇರೆ ಯಾವುದೋ ರೀತಿ ಲೋಪವುಂಟಾಯಿತೋ ತಿಳಿಯದು. ಅಂತು ಅದರ ಬಳಕೆ ಅಷ್ಟೊಂದು ತೃಪ್ತಿಕರವಾಗಿ ಆಗಲಿಲ್ಲ. ಈಗಿನ ಬಜೆಟ್‌ನಲ್ಲಿ ಮತ್ತೆ ಅದಕ್ಕೆ ಒತ್ತುಕೊಡಬೇಕಾಗಿದೆ. ಅದರಿಂದ ಈಗ ಸ್ಥಗಿತಗೊಂಡಿರುವ ಬೀಜಸಂಸ್ಕರಣಾ ಘಟಕಗಳು ಕಡಮೆ ಖರ್ಚಿನಲ್ಲಿ ಕಾರ್ಯಾಚರಣೆಗೆ ತಂದು ರೈತರು ಗುಣಮಟ್ಟವುಳ್ಳ ಬೀಜ ಬಿತ್ತನೆ ಮಾಡಲು  ಅನುವಾಗುತ್ತದೆ.
2. ಈಗ ಚಾಲ್ತಿಯಲ್ಲಿರುವ ಬೀಜಕ್ಕೆ ನೀಡುತ್ತಿರುವ ಸಬ್ಸಿಡಿ ವೈಜ್ಞಾನಿಕವಾಗಿ ರೂಪಿಸಿದ್ದಾಗಿಲ್ಲ ಮತ್ತು ರೈತಪರವಾಗಿಲ್ಲವೆನ್ನಬಹುದು. ಒಂದುಕಡೆ ದೇಶೀ ತಳಿಗಳನ್ನು ಹಾಗು ಆಯಾ ಭಾಗದ ನಾಡತಳಿಗಳನ್ನು ಉಳಿಸಿಕೊಳ್ಳಬೇಕೆಂದು ಶಿಫಾರಸ್ಸುಗಳಿವೆ. ಈ ಸಲಹೆ ವೈಜ್ಞಾನಿಕ ಅರ್ಥಪೂರ್ಣವಾಗಿದೆ. ರೈತ ಬೆಳೆಯುವುದು ಯಾವುದೇ ತಳಿಯಾಗಿರಲಿ ಆ ಬೀಜ ಶುದ್ಧವಾಗಿರಬೇಕು ಮತ್ತು ಅದರಿಂದ ಉತ್ತಮ ಇಳುವರಿ ಸಿಗಬೇಕು ಎಂಬುದು ಎಲ್ಲರೂ ಒಪ್ಪಲೇಬೇಕಾದ ವಿಷಯ. ಅಂದಮೇಲೆ ಇದಕ್ಕೆ ಸಬ್ಸಿಡಿ ಇಲ್ಲವೇಕೆ ಎಂಬುದನ್ನು ಚರ್ಚಿಸಿ ನಿರ್ಧರಿಸಬೇಕು. ಸರ್ಟಿಫೈ ಮಾಡಿದ ಬೀಜಕ್ಕೆ ಮಾತ್ರ ಸಬ್ಸಿಡಿ ಎಂಬುದನ್ನು ಕೈಬಿಡಬೇಕಾದ ಸಮಯವಿದು.
3. ಕಂಪನಿ ಹೈಬ್ರಿಡ್ ತಳಿಗಳನ್ನು ಹೊರತುಪಡಿಸಿ ಉಳಿದ ಹೈಬ್ರಿಡ್ ಮತ್ತು ಇತರ ತಳಿಗಳ ಬೀಜೋತ್ಪಾದನೆ ರೈತರಿಂದಲೂ ಸಾಧ್ಯ. ಕೆಲವು ವಿಷಯಗಳಲ್ಲಿ ತರಬೇತಿ ಬೇಕಾಗುತ್ತದೆಯಷ್ಟೆ. ಇತ್ತ ಗಮನವಿತ್ತು ತರಬೇತಿಗಾಗಿ ಅನುದಾನ ಬೇಕಾಗುತ್ತದೆ.
4. ಇಡೀ ರಾಷ್ಟ್ರದಲ್ಲೇ ಬೀಜೋದ್ಯಮದಲ್ಲಿ ಸಾಧನೆ-ಹೆಸರು ಮಾಡಿರುವ ರಾಜ್ಯ ಕೃಷಿವಿಶ್ವವಿದ್ಯಾಲಯಗಳ ಮಾರ್ಗದರ್ಶನ ಮತ್ತು ಸಹಯೋಗದೊಂದಿಗೆ ಮೇಲ್ಕಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಸುಲಭಸಾಧ್ಯ. ಇದನ್ನು ಗಮನದಲ್ಲಿಟ್ಟು ಬಜೆಟ್ ರೂಪಿಸಿ ಕಾರ್ಯಾರಂಭಕ್ಕೆ ತರಲು ಇದು ಸದಾವಕಾಶ.
5. ರೈತರು ಸ್ಥಳೀಯ ತಳಿಗಳನ್ನು ಬೆಳೆಯುತ್ತಿದ್ದು ಪುರಾತನ ತಳಿಗಳಲ್ಲಿರುವ  ಮುಂದಿನ ಪೀಳಿಗೆಗೆ ಬೇಕಾಗುವ  ವಂಶವಾಹಿಗಳನ್ನು ಸಂರಕ್ಷಿಸುವಲ್ಲಿ ಮಹತ್ತರವಾದ ಪಾತ್ರವಹಿಸಿರುವುದು ಅಭಿನಂದನೀಯ. ಇಂತಹ ತಳಿಗಳು ಮುಂದಿನ ದಿನಗಳಲ್ಲಿ ಬರಬಹುದಾದ ಯಾವುದೇ ಅಹಿತಕರ ವಾತಾವರಣಗಳಲ್ಲಿ ಕೃಷಿ ಮಾಡಲು ಯೋಗ್ಯ ತಳೀಕರಣಕ್ಕೆ ಅಂದರೆ ಆಯಾ ಕಾಲ ಮತ್ತು ಋತುಮಾನಗಳಿಗೆ ತಕ್ಕಂತೆ ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಲು ಬೇಕಾಗುವ ವಂಶವಾಹಿಗಳ ಭಂಡಾರಗಳಿವು ಎಂಬುದನ್ನು ಅರಿಯಬೇಕಾಗಿದೆ. ಆದ್ದರಿಂದ ರೈತರು ಬೆಳೆಯುವ ವಿಶೇಷ ಗುಣಗಳನ್ನು ಹೊಂದಿರುವ ಎಲ್ಲಾ  ತರಹದ ತಳಿಗಳಿಗೂ ಮತ್ತು ಬೀಜಕ್ಕೂ ಸಬ್ಸಿಡಿ ನೀಡುವುದು ಸೂಕ್ತ. ವೈಜ್ಞಾನಿಕವಾಗಿ ಈ ವಿಷಯವನ್ನು ಸಮರ್ಥಿಸಬಹುದಾಗಿದೆ.
6. ಕೃಷಿಗಾಗಿ ಇನ್ನೂ ಹೆಚ್ಚಿನಮಟ್ಟದ ಅನುದಾನ ಬೇಕಾಗಿದೆ. ಕೃಷಿಗೆ ಅರ್ಥಪೂರ್ಣ ಸ್ವರೂಪವುಳ್ಳ ವಿಶಿಷ್ಟ  ಕಮಿಷನ್ ಬೇಕಾಗಿದೆ. ಶಿಕ್ಷಣ, ಸಂಶೋಧನೆಯಲ್ಲಿ ಅದರಲ್ಲೂ ತಾಂತ್ರಿಕತೆಯನ್ನು ರೈತರಿಗೆ ತಲುಪಿಸುವಲ್ಲಿ ಈಗ ಕರ್ನಾಟಕದಲ್ಲಿರುವ ಕಮಿಷನ್ ಸ್ವರೂಪದಿಂದಾಗಿ ಅಷ್ಟೊಂದು ಸರಿಯಾಗಿ ಕೆಲಸಮಾಡಲಾಗುತ್ತಿಲ್ಲ. ಕೆಲವು ರಾಜ್ಯಗಳಲ್ಲಿ(ಹರಿಯಾಣ, ಗುಜರಾತ್ ಇನ್ನು ಕೆಲವು) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ವೇದ್ಯ. ಹರಿಯಾಣದ ಮಾದರಿ ಗಮನಿಸಬೇಕಾದದ್ದು ಮತ್ತು ಅನುಕರಣೀಯ.
ನಾನು ಇಲ್ಲಿ ಕೊಟ್ಟಿರುವ ಸಲಹೆಗಳು ಸಂಪೂರ್ಣವಲ್ಲ. ಕೆಲವಷ್ಟೇ ಅಂಶಗಳನ್ನು ಉದಾಹರಣೆಗಳಾಗಿ ಕೊಡಲಾಗಿದೆ. ಬಡ ರೈತ ಬಡ-ಅನ್ನದಾತ, ಬಡತನದ ರೇಖೆ ಕೆಳಗಿರುವ ಕೃಷಿಕರು ಹೀಗೆ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಒಂದು ಪ್ರತ್ಯೇಕ ವರ್ಗವಾಗಿ ಬೇರ್ಪಡಿಸಿ ಪದೇ ಪದೆ ಪ್ರಸ್ತಾಪಿಸುತ್ತಿರುವುದು ತಪ್ಪು ಎಂದು ಹೇಳಲಾಗದಾದರೂ, ತಪ್ಪಿಸಬಹುದು ಎಂಬುದು ನನ್ನ ಅನಿಸಿಕೆ. ಸವಲತ್ತುಗಳನ್ನು ಕಲ್ಪಿಸಿಕೊಡುತ್ತಿರುವಾಗ ಬಡ ರೈತ ಎಂಬ ಪದ ಬಳಕೆಯಾದಷ್ಟು  ಬಡ ಡಾಕ್ಟರು, ಬಡ ವರ್ತಕ, ಬಡ ವ್ಯಾಪಾರಿ, ಬಡ ಕೈಗಾರಿಕೋದ್ಯಮಿ, ಬಡ ರಾಜಕಾರಣಿ ಇಂತಹ ಪದಗಳು ಬಳಕೆಗೆ ಬರುವುದು ಗಮನಕ್ಕಂತು ಬಂದಿಲ್ಲ. ಪರ್ಯಾಯ ಪದಗಳಿಗೆ ಅತ್ಯಂತ ಸಂಪದ್ಭರಿತ ಭಾಷೆ ಕನ್ನಡದಲ್ಲಿ ಕೊರತೆಯಿಲ್ಲ. ಆರ್ಥಿಕ ಪರಿಸ್ಥಿತಿಯೊಂದರಿಂದಲೇ ಕುಬೇರ ಬಡವಾ ಎನ್ನುವ ಯುಗ ಮುಗಿದಿದೆ ಎಂಬುದು ನನ್ನ ಅನಿಸಿಕೆ.

-ಪ್ರೊ. ಎಂ. ಮಹದೇವಪ್ಪ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.