ಅಂಕಣಗಳು

ಸಸ್ಯ ಸಂಪತ್ತು ಎಂಬ ಅದ್ಭುತ ಲೋಕ

Published On :

ಕಳೆದ ವಾರ ನಿಮಗೆ ಔಷಧೀಯ ಸಸ್ಯಗಳ ಬಗ್ಗೆ ತಿಳಿಸುತ್ತಿದ್ದೆ. ಪತ್ರಿಕೆಯ ಓದುಗರಾದ ಪೂರ್ಣ ಚಂದ್ರ ಅವರು ಔಷಧೀಯ ಸಸ್ಯಗಳ ಬೀಜ ಅಥವಾ ಸಸಿ ಎಲ್ಲಿ ದೊರಕುತ್ತವೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದಾರೆ. ಪ್ರತಿ ತಾಲೂಕಿನಲ್ಲಿಯೂ ಮುಖ್ಯವಾದ ಸ್ಥಳಗಳಲ್ಲಿ ಸಾಮಾನ್ಯವಾಗಿ ಸಸಿಗಳನ್ನು ನೆಡುವ ಸಮಯ ಅಂದರೆ ಜುಲೈ ತಿಂಗಳ ನಂತರ.  ಅರಣ್ಯ ಇಲಾಖೆಯವರು ಬೀಜಗಳ ವಿತರಣೆಯನ್ನು ಮಾಡುತ್ತಾರೆ. ಅಲ್ಲದೆ ಅರಣ್ಯ ಇಲಾಖೆಯ ನರ್ಸರಿಗಳಲ್ಲಿಯೂ ಸಹ ಬೀಜ ಅಥವಾ ಸಸಿಗಳು ದೊರೆಯುತ್ತವೆ. ಅರಣ್ಯ ಇಲಾಖೆಯಲ್ಲಿರುವ ಸಸ್ಯಗಳ ದಾಸ್ತಾನು ಸರಕುಗಳ ಬಗ್ಗೆ ಮಾಹಿತಿ http://stg3.kar.nic.in/forest_enursery ಜಾಲತಾಣದಲ್ಲಿ ಸಿಗುತ್ತದೆ. ಆ ತಾಣವನ್ನು aranya.gov.in ಮೂಲಕ ತಲುಪಬಹುದು. ಅಲ್ಲದೆ ಅರಣ್ಯ ಇಲಾಖೆಯವರು ಕೃಷಿ ಅರಣ್ಯ ಪ್ರೋತ್ಸಾಹಯೋಜನೆಯ ಅಡಿಯಲ್ಲಿ ಮೂರು ವರ್ಷಗಳವರೆಗೂ ಆರೋಗ್ಯಯುತವಾಗಿ ಬೆಳೆದ ಸಸ್ಯಗಳಿಗೆ- ಸಸ್ಯವೊಂದಕ್ಕೆ ರು. ನಲವತ್ತೈದು ಪ್ರೋತ್ಸಾಹಧನವನ್ನೂ ರೈತರಿಗೆ ನೀಡುತ್ತಾರೆ. ಅದರ ಬಗ್ಗೆ ಮಾಹಿತಿಯನ್ನು  https://www.facebook.com/karnatakaforest ತಾಣದಲ್ಲಿ ಪಡೆಯಬಹುದು. ಈಗ ನಿಮಗೆ ಕೆಲವು ಅದ್ಭುತ ಸಸ್ಯಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಈ ಕೆಳಕಂಡ ಸಸ್ಯಗಳನ್ನು ಅಡುಗೆಗೆ ಹಾಗೂ ತಿನ್ನಲು ಬಳಸಲಾಗುತ್ತದೆ.
ರಾಮಫಲ: ಈ ಹಣ್ಣು ಸೀತಾಫಲಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿದ್ದು, ಎಳೆಗೆಂಪು ಬಣ್ಣ ಹೊಂದಿರುತ್ತದೆ.
ದಾಲ್ಚಿನ್ನಿ: ಇದರ ತೊಗಟೆಯನ್ನು ಹಾಗೂ ಎಲೆಯನ್ನು ಅಡುಗೆಗೆ ರುಚಿಕೊಡಲು ಹಾಗೂ ಔಷಧಿಗಳಲ್ಲಿ ಬಳಸುತ್ತಾರೆ. ಇದರತೊಗಟೆ, ಎಲೆ, ಬೇರುಗಳಿಂದ ಬರುವ ಎಣ್ಣೆಯನ್ನು ಲವಂಗದ ಎಣ್ಣೆಯಂತೆ ಔಷಧಿಯಲ್ಲಿ ಬಳಸುವುದುಂಟು.  
ಕಬಳಿಗಿಡ: ಇದರ ಹಣ್ಣು ರುಚಿಕರವಾಗಿರುತ್ತದೆ. ಉಪ್ಪಿನಕಾಯಿ ಮತ್ತು ಚಟ್ನಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತೊಗಟೆ ಎಲೆ ಹಾಗೂ ಹಣ್ಣುಗಳು ಔಷಧಿಗಳಲ್ಲಿ ಬಳಕೆಯಾಗುತ್ತದೆ. ಬೇಲಿಗೆ ಇದನ್ನು ಬೆಳೆಸಬಹುದು. ಇದರ ದಾರವು ನಯವಾಗಿದ್ದು ಸಣ್ಣ ಕಣರಚನೆಯಿಂದ ಕೂಡಿ ಚರಕಿಯಂತ್ರದಲ್ಲಿ ಕಡಿತ ಮಾಡಲು ಯೋಗ್ಯವಾಗಿರುತ್ತದೆ.
ನಿಂಬೆ: ಇದು ಅಡುಗೆಗೆ, ಉಪ್ಪಿನಕಾಯಿ ಇತ್ಯಾದಿಗಳಿಗೆ ದಿನನಿತ್ಯ ಬಳಕೆಯಾಗುತ್ತದೆ. ಕಸಿ ಮಾಡಿ ಇದರ ಕೆಲವು ಇನ್ನಿತರ ತಳಿಗಳನ್ನು ಅಭಿವೃದ್ಧಿ ಮಾಡಲಾಗಿದೆ.
ಗೇರು/ಕಾಡುಗೇರು: ಹಣ್ಣು, ಸಂಪುಟ ಸೇವನೆಗೆ ಯೋಗ್ಯ.
ಈ ಕೆಳಕಂಡ ಸಸ್ಯಗಳನ್ನು ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸಲು ಅನೇಕ ರೀತಿಗಳಲ್ಲಿ ಬಳಸಲಾಗುತ್ತದೆ.
ಕಂಟಾಲಾ: ಇದರ ಕಟ್ಟಿಗೆಯಿಂದ ಉತ್ತಮ ಗುಣಮಟ್ಟದ ನಾರು ಸಿಗುತ್ತದೆ ಹಾಗೂ ಕಾಗದ ತಯಾರಿಕೆಯಲ್ಲೂ ಬಳಕೆಯಾಗುತ್ತದೆ.  
ಸಿಸಿಲಾನ: ಇದರ ಎಲೆಗಳಿಂದ ನಾರನ್ನು ತೆಗೆಯಬಹುದು ಹಾಗೂ ಇದನ್ನು ಕಾಗದ ತಯಾರಿಕೆಗೂ ಉಪಯೋಗಿಸುತ್ತಾರೆ.  
ಹೆಬ್ಬಿದಿರು: ಗೃಹ ನಿರ್ಮಾಣ, ಬುಟ್ಟಿ, ಚಾಪೆ, ಬೇಲಿ, ಕಾಗದ ತಯಾರಿಕೆ ಇತ್ಯಾದಿ. ಕಾಡಾನೆಗಳಿಗೆ ಇದರ ಸೊಪ್ಪು ಇಷ್ಟವಾದ ಮೇವು.
ಕಿತ್ತೆನಾರು: ಇದರಿಂದ ನಾರನ್ನು ತಯಾರಿಸಲಾಗುತ್ತದೆ.  
ಗುಗ್ಗುಳಧೂಪ: ಇದರ ಕಟ್ಟಿಗೆ ಹಲಗೆಗಳಿಗೆ, ಬಾವಿ ಕೆಲಸಗಳಿಗೆ ಉಪಯುಕ್ತ. ಹೆಚ್ಚಾಗಿ ಬೆಂಕಿಪೊಟ್ಟಣ ಕೈಗಾರಿಕೆಯಲ್ಲಿ ಬಳಸಲ್ಪಡುತ್ತದೆ. ಪದರ ಹಲಗೆ ಮತ್ತು ಕಾಗದ ತಯಾರಿಕೆಗೂ ಬಳಸಬಹುದು. ತೊಗಟೆ ಕೆತ್ತಿದಾಗ ಬರುವ ರಾಳವು ಸುವಾಸನೆಯಿಂದಿದ್ದು ಧೂಪವಾಗಿ ಬಳಸಲ್ಪಡುತ್ತದೆ. ಔಷಧೀಯ ಗುಣಗಳನ್ನೂ ಹೊಂದಿದೆ.
ರಂಗುಮಾಲೆ: ಇದರ ಬೀಜದ ಮೇಲಿನ ಸಿಪ್ಪೆಯಿಂದ ಉಜ್ವಲ ಕೇಸರಿ ಹಳದಿ ಬಣ್ಣ ಸಿಗುತ್ತದೆ. ರೇಷ್ಮೆ ಬಟ್ಟೆಗಳಿಗೆ ಬಣ್ಣ ಕೊಡಲು ಇದನ್ನು ಬಳಸಲಾಗುತ್ತದೆ.  
ಮುತ್ತುಗ: ಇದರ ಕಟ್ಟಿಗೆ ನೀರಿನಲ್ಲಿ ಹೆಚ್ಚು ಬಾಳಿಕೆ ಬರುವುದರಿಂದ ಇದನ್ನು ಬಾವಿ ಕೆಲಸಗಳಿಗೆ ಉಪಯೋಗಿಸುತ್ತಾರೆ.  ತೊಗಟೆಯನ್ನು ಕೆತ್ತಿದಾಗ ಸ್ರವಿಸುವ ಕೆಂಪನೆಯ ಅಂಟು ಔಷದೀಯ ಗುಣಗಳನ್ನು ಹೊಂದಿದ್ದು ವಾಣಿಜ್ಯ ರಂಗದಲ್ಲಿ ಬೆಂಗಾಲ್ ಕಿನೋ ಎಂದು ಕರೆಯಲಾಗುತ್ತದೆ. ಎಲೆಗಳನ್ನು ಒಂದಕ್ಕೊಂದು ಸೇರಿಸಿ ಹೆಚಿ,್ಚ ಊಟಕ್ಕೆ ಬಳಸಲಾಗುತ್ತದೆ. ಕೆಲವೆಡೆ ಇದರ ಎಲೆಗಳನ್ನು ಎಮ್ಮೆಗಳಿಗೆ ಮೇವಾಗಿ ಬಳಸುವುದೂ ಉಂಟು.
ಬೇವಿನ ಮರ: ಬೇವಿನ ತೊಗಟೆಯಿಂದ ಒರಟು ನಾರು ದೊರಕುವುದು. ಹೂ ಮತ್ತು ಬೇವನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೀಜವು ಜಂತುನಾಶಕ ಗುಣಗಳನ್ನು ಹಿಂದಿದ್ದು, ಕುದುರೆಗಳಿಗೆ ರೋಗ ಪರಿಹಾರಕ್ಕೆ ಪಶು ವೈದ್ಯರು ಇದನ್ನು ಬಳಸುತ್ತಾರೆ.
ಪದರಪಾಚಾಲಿ: ಇದನ್ನು ವೀಣೆ, ತಂಬೂರಿ ಮುಂತಾದ ಸಂಗೀತ ಉಪಕರಣಗಳನ್ನು ತಯಾರಿಸಲು ಬಳಸುತ್ತಾರೆ.  ಸಂಸ್ಕರಿಸಿದ ದಾರುವನ್ನು ರೈಲ್ವೆ ಸ್ಲೀಪರುಗಳಿಗೂ ಉಪಯೋಗಿಸುತ್ತಾರೆ ಹಾಗೂ ಬೆಂಕಿ ಪೆಟ್ಟಿಗೆ ಹಾಗೂ ಕಾಗದ ತಯಾರಿಕೆಗೂ ಉಪಯೋಗಿಸಲಾಗುತ್ತದೆ.
ಗುಲ್ಮಹರ: ನಾಟಾ ಡಿಪೋಗಳಲ್ಲಿ ನೆರಳಿಗೆ ಹಾಗೂ ಅಲಂಕಾರಕ್ಕಾಗಿ ಬೆಳಸಲಾಗುತ್ತದೆ.  
ನೆಲ್ಲಿ: ಇದರ ಕಟ್ಟಗೆ ನೀರಿನಲ್ಲಿ ಹೆಚ್ಚು ಬಾಳಿಕೆ ಬರುವುದರಿಂದ ಬಾವಿ ಕೆಲಸಗಳಿಗೆ ಹಾಗೂ ಸಣ್ಣ ಮನೆಗಳು ಹಾಗೂ ಹೆಚ್ಚು ಮೌಲ್ಯವಲ್ಲದ ಪೀಠೋಪಕರಣಗಳಿಗೆ ಬಳಸಲಾಗುತ್ತದೆ. ಇದರ ದಾರುವು ನೀರನ್ನು ಶುದ್ಧೀಕರಿಸುತ್ತದೆಂಬ ನಂಬಿಕೆಯಿರುವುದರಿಂದ, ಇದರ ಚಕ್ಕೆಗಳನ್ನು ಬಾವಿ ಹಾಗೂ ನೀರಿನ ಕೊಳಗಳಲ್ಲಿ ಎರಚುವ ವಾಡಿಕೆಯಿದೆ.
ಹಾಲವಾಣ: ಈ ಕಟ್ಟಿಗೆಯ ದಾರುವು ಹಗುರವಾಗಿದ್ದು, ಮುಖವಾಡ, ಡೋಲು ಹಾಗೂ ಮಕ್ಕಳ ಆಟದ ಸಾಮಾನುಗಳನ್ನು ತಯಾರು ಮಾಡಲು ಉಪಯೋಗಿಸುತ್ತಾರೆ. ಕಾಂಡ ಕಡ್ಡಿಗಳಿಂದ ಸುಲಭವಾಗಿ ಬೆಳೆಸಬಹುದು.  
ಸೀಮೆ ಹುಣಿಸೆ: ಕಟ್ಟಿಗೆಯಿಂದ ಒಳ್ಳೆಯ ಸೌದೆ ಬರುತ್ತದೆ. ಬೀಜದಿಂದ ಉಪಯುಕ್ತ ಎಣ್ಣೆ ತೆಗೆಯುತ್ತಾರೆ.  
ನೀಲಗಿರಿ: ಕಾಗದ ತಯಾರಿಕೆ ಹಾಗೂ ಸೌದೆಗಾಗಿ ಉಪಯೋಗಿಸುತ್ತಾರೆ. ಔಷಧೀಯ ಗುಣಗಳನ್ನು ಹೊಂದಿದೆ.
ಆಲ: ಇದರ ಕಟ್ಟಿಗೆಯನ್ನು ಬಾವಿ ಕೆಲಸಗಳಿಗೆ ಉಪಯೋಗಿಸುತ್ತಾರೆ ಹಾಗೂ ಇದರ ಸಸ್ಯಕ್ಷೀರ ಹಾಗೂ ಬೇರನ್ನು ಔಷಧಿಯಾಗಿ ಬಳಸುತ್ತಾರೆ. ಸಾಕಾನೆಗಳಿಗೆ ಇದರ ಎಲೆಗಳು ಮೇವು.  
ಶಿವನೆ: ಈ ಮರದ ಕಟ್ಟಿಗೆಯು ಮೃದು, ಹಗುರ, ಸಮಾನ ಕಣರಚನೆ ಹೊಂದಿರುವುದು. ಸೀಳಿಕೆ, ಸುರುಟುವಿಕೆಗಳಿರುವುದಿಲ್ಲ. ಹಲಗೆ ಬಿತ್ತಿ ಫಲಕ, ಪೆಟ್ಟಿಗೆ, ಬಾಚಣಿಗೆ ಪೀಠೋಪಕರಣ ಇನ್ನೂ ಅನೇಕ ಮರಗೆಲಸಗಳಿಗೆ ಯೋಗ್ಯ.
 ಉತ್ತಮ ದರ್ಜೆಯ ಹಲಗೆಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಕೃತಕ ಅಂಗಾಂಗಗಳ ತಯಾರಿಕೆಗೂ ಇದರ ಉಪಯುಕ್ತತೆ ಸಾಧ್ಯ.  
ತಡಸಲು: ಇದರ ಕಟ್ಟಿಗೆ ದಾರುವು ನಾರುಮಯವಾಗಿದ್ದು, ಸ್ಥಿತಿ ಸ್ಥಾಪಕತೆ ಹೊಂದಿದ್ದು, ಗಾಡಿಯ ಮೂಕಿ, ನೊಗ, ತೊಲೆಗಳಿಗೆ ಹಾಗೂ ಮಂಚದ ಚೌಕಟ್ಟುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ತೊಗಟೆಯಿಂದ ಬರುವ ನಾರು ಹಗ್ಗ ತಯಾರಿಕೆಗೆ ಉಪಯೋಗಿಸುತ್ತಾರೆ.  
ಸೂಬಾಬುಲ್: ಇದರ ಎಲೆಗಳು ದನ-ಕರುಗಳಿಗೆ ಒಳ್ಳೆಯ ಆಹಾರವಾಗಿದೆ.
ಕಾಡು ಹರಳು: ಇದರ ಬೀಜದಿಂದ ಬರುವಎಣ್ಣೆ ಬಹಳ ಅಪಾಯಕಾರಿ. ಈ ಎಣ್ಣೆಯನ್ನು ಉರಿಸಲು ಬಳಸುವುದುಂಟು, ದನಕರುಗಳು ಇದನ್ನು ತಿನ್ನದಿರುವುದರಿಂದ ಇದನ್ನು ಬೇಲಿಯಾಗಿ ಬೆಳೆಸಬಹುದು.
ಕಂಚುಪ್ರಾಂತಿ: ಇದನ್ನು ಕಾಗದಕ್ಕೆ ಗಂಜಿಕೊಡಲು ಹಾಗೂ ಮುದ್ರೆ ತೆಗೆದುಕೊಳ್ಳವುದಕ್ಕೂ ಉಪಯೋಗಿಸ ಬಹುದು. ಇದನ್ನು ಫರಂಗಿ ಹುಣ್ಣಿಗೆ ಔಷಧಿಯಾಗಿ ಬಳಸುತ್ತಾರೆ.
ನುಗ್ಗೆ ಮರ: ಇದು ಕಾಗದ ತಯಾರಿಕೆಗೆ ಹಾಗೂ ಸಣ್ಣ ಆಟದ ಸಾಮಾನುಗಳನ್ನು ತಯಾರಿಸಲು ಉಪಯೋಗಿಸಲ್ಪಡುತ್ತದೆ. ಹೂ, ಕಾಯಿ ಹಾಗೂ ಬೇರನ್ನು ತಿನ್ನಲು ಬಳಸಲಾಗುತ್ತದೆ. ಬೀಜಗಳಿಂದ ಉತ್ತಮ ಗುಣದ ಎಣ್ಣೆ ತೆಗೆದು ಅದನ್ನು ಗಡಿಯಾರಗಳ ನುಣುಪು ಚಲನೆಗೆ ಬಳಸಲು ಯೋಗ್ಯವಾಗಿರುತ್ತದೆ.   
ಈಚಲ ಮರ: ಕೆಳಸಾಲಿನ ಎಲೆಗಳ ಬುಡದಲ್ಲಿ ಕಾಂಡಕ್ಕೆ ಕಚ್ಚು ಹಾಕಿ, ಮಡಕೆಕಟ್ಟಿ ಬರುವ ಇದರ ಸಸ್ಯರಸ ಬೆಲ್ಲ ತಯಾರಿಕೆಯ ವೇಳೆ ಹಾಗೂ ಹೆಂಡವಾಗಿ ಬಳಸಲ್ಪಡುತ್ತದೆ. ಹುಳಿ ಬಾರದ ರಸವನ್ನು ನೀರಾ ಎಂದು ಕರೆಯುತ್ತಾರೆ.  ಇದರ ಎಲೆಗಳಿಂದ ಚಾಪೆ, ಬುಟ್ಟಿ, ಧಾರಕಗಳನ್ನು ಹೆಣೆಯಲಾಗುತ್ತದೆ. ಗುಡಿಸಿಲಿನ ಮೇಲೆ ಹೊದಿಸಲು ಬಳಸುತ್ತಾರೆ.  ಚಾರುವಿನಿಂದ ಗೂಟಗಳನ್ನು ಮಾಡಬಹುದು.
ಹೊಂಗೆ: ಇದರ ದಾರುವು ಗಡುಸಾಗಿದ್ದು ಸೌದೆಗೆ ಬಳಸಲಾಗುತ್ತದೆ. ಇದರ ಬೀಜದಿಂದ ಬರುವ ಎಣ್ಣೆ ಔಷಧಿಗೆ ಹಾಗೂ ದೀಪ ಉರಿಸಲು ಬರುತ್ತದೆ. ಇದರ ಬೀಜದ ಹಿಂಡಿ, ಎಲೆಗಳು, ಹೂಗಳು ಉತೃಷ್ಟ ಗೊಬ್ಬರವನ್ನು ಒದಗಿಸುತ್ತವೆ.
ಶ್ರೀಗಂಧ: ಇದರ ದಾರುವು ತನ್ನ ಸುವಾಸನೆಗೆ ವಿಶ್ವವಿಖ್ಯಾತವಾಗಿದೆ. ಇದನ್ನು ಅನೇಕ ಕುಶಲ ಕೆಲಸಗಳಿಗೆ ಬಳಸಲಾಗುತ್ತದೆ. ಇದರ ಚೇಗಿನಿಂದ ಬರುವ ಎಣ್ಣೆ ಪರಿಮಳ ದ್ರವ್ಯಗಳು, ಸಾಬೂನು ಹಾಗೂ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.