ಅಂಕಣಗಳು

ಭಾಷೆಯ ಉಳಿವಿಗೆ ಅಭ್ಯಾಸ ಮುಖ್ಯ

Published On :

ಕನ್ನಡ ಭಾಷೆಗೆ ಸುಧೀರ್ಘವಾದ ಪರಂಪರೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಯಾವ ಪ್ರಮಾಣದಲ್ಲಿ ಸತ್ವಯುತವಾಗಿ ಬೇಳೆಯಬೇಕಿತ್ತೋ ಆ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಇದಕ್ಕೆ ನೇರ ಕಾರಣಗಳು ಎರಡು, ಒಂದನೆಯದು ಕನ್ನಡಿಗರಲ್ಲಿ ಹೆಚ್ಚುತ್ತಿರುವ ಆಂಗ್ಲ ಭಾಷಾ ವ್ಯಾಮೋಹ, ಎರಡನೆಯದು ಕನ್ನಡ ಭಾಷೆಯ ಬಗ್ಗೆ ಶಿಥಿಲವಾದ ಅಭಿಮಾನ. ಇವೆರಡೂ ಮೆಲ್ನೋಟಕ್ಕೆ ಗೊಚರವಾಗುವ ಸತ್ಯಗಳು.
ಒಂದು ವಿಷಯವನ್ನು ಗಮನಿಸಬೇಕು ಅದೆಂದರೆ ಕನ್ನಡ ಉಳಿಯಲಿಕ್ಕೆ ಹೋರಾಟ ಬೇಕು ಎನ್ನುವುದೇನೋ ಸರಿ. ಆದರೆ ನಿಜಕ್ಕೂ ಬೇಕಿರುವುದು ಕನ್ನಡ ಭಾಷೆಯನ್ನು ಅಭ್ಯಸಿಸುವ ಪ್ರವೃತ್ತಿಯ ಬೆಳವಣಿಗೆ. ಕೇವಲ ಅಭಿಮಾನದಿಂದ ಕನ್ನಡ ಬೆಳೆಯಲಾರದು. ಆಡಂಬರದಿಂದ ಮಾಡುವ ಸಾಹಿತ್ಯ ಸಮ್ಮೇಳನಗಳಿಂದಲೂ, ಕನ್ನಡ ಹೆಚ್ಚಿನಂಶ ಬೆಳೆಯಲಾರದು. ಪ್ರಯತ್ನವಿಲ್ಲದೆ ಈ ಜಗತ್ತಿನಲ್ಲಿ ಏನನ್ನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಡವಿಯಲ್ಲಿ ಓಡಾಡದೆ ಸುಮ್ಮನೆ ಮಲಗಿದ ಸಿಂಹದ ಬಾಯಲ್ಲಿ ಯಾವ ಪ್ರಾಣಿಯೂ ತಾನಾಗಿ ಬಂದು ಬಿಳುವುದಿಲ್ಲ. ಆದ್ದರಿಂದ ಕನ್ನಡವನ್ನು ಹೆಚ್ಚು-ಹೆಚ್ಚು ಜನರು ಓದುವಂತೆ, ಕನ್ನಡದಲ್ಲಿ ಬರೆಯುವಂತೆ ಮಾಡಲಿಕ್ಕೆ ಒಂದು ಆಡಂಬರ ರಹಿತ, ಪ್ರಚಾರ ರಹಿತ ಪ್ರಕ್ರಿಯೆ ಆರಂಭವಾಗಬೇಕು. ಅಂದಾಗ ಕನ್ನಡವನ್ನು ಮೂಲ ಹಂತದಿಂದಲೇ ಮೇಲೆತ್ತಲಿಕ್ಕೆ ಸಾಧ್ಯ.
  ಇಂದು ಕನ್ನಡದ ವಿಷಯದಲ್ಲಿ ಎರಡು ಆತಂಕಕಾರಿ ಬೆಳವಣಿಗೆಗಳು ಕಂಡುಬರುತ್ತಿವೆ. ಅದೆಂದರೆ ಕನ್ನಡದ ಅಂಕಿಗಳು ನಾಮಾವಶೇಷವಾಗುವ ಹಂತದಲ್ಲಿ ಇರುವುದು. ಆ ಅಂಕಿಗಳನ್ನು ಉಳಿಸಬೇಕಿದ್ದರೆ ಕನ್ನಡಿಗರು ಕನ್ನಡದ ಅಂಕಿಗಳನ್ನೇ ಉಪಯೋಗಿಸಬೇಕು. ಕನ್ನಡ ಪುಸ್ತಕಗಳಲ್ಲಿ ಪುಟವನ್ನು ನಮೂದಿಸುವಾಗ ಕನ್ನಡ ಅಂಕಿಗಳನ್ನು ಹಾಕಬೇಕು. ಗಣಿತ ಪುಸ್ತಕದಲ್ಲಿ ಕನ್ನಡ ಅಂಕಿಗಳನ್ನೇ ಉಪಯೋಗಿಸಬೇಕು. ಇಂದು ಹೆಚ್ಚಿನ ಯುವಕರಿಗೆ ಕನ್ನಡ ಅಂಕಿಯನ್ನು ಬರೆಯಲಿಕ್ಕೆ ಬರುವುದಿಲ್ಲ ಎನ್ನುವುದು ಆಶ್ಚರ್ಯವಾದರೂ ಸತ್ಯ. ಎರಡನೆಯದು ಪತ್ರ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು.
ಇಂದಿನ ದಿನದಲ್ಲಿ ಶುದ್ದ ಕನ್ನಡ ಏನಾದರೂ ಉಳಿದಿದ್ದರೆ ಅದು ಗ್ರಾಮೀಣ ಭಾಗದಲ್ಲಿ ಎನ್ನುವುದನ್ನು ಮರೆಯಬಾರದು. ಇದಕ್ಕೆ ಕಾರಣ ಗ್ರಾಮೀಣ ಭಾಗದಲ್ಲಿ ಆಂಗ್ಲ ಭಾಷೆ ಶಕ್ತಿಯುತವಾಗಿ ಆಕ್ರಮಿಸಿಲ್ಲ. ಅಲ್ಲಿ ಮನೆ-ಮನಗಳು ಕನ್ನಡದಲ್ಲಿಯೇ ಇವೆ. ಬೆಂಗಳೂರಿನಂತಹ ನಗರದಲ್ಲಿ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾತನಾಡುವ ಕನ್ನಡ ಯಾರಿಗೂ ಅರ್ಥವಾಗುವುದಿಲ್ಲ. ಕಾರಣ ಅವರ ಕನ್ನಡ ಭಾಷೆಯನ್ನು ಉಚ್ಚರಿಸುವ ಶೈಲಿ ಹಾಗೂ ಕನ್ನಡ ಭಾಷೆಯಲ್ಲಿ ವಿಪರೀತವಾಗಿ ಸೇರಿಕೊಳ್ಳುವ ಆಂಗ್ಲ ಶಬ್ದಗಳು. ಮಾತಿನ ಮಧ್ಯದಲ್ಲಿ ಆ.... ಹೂ..... ಎಂದು ಪದಗಳಿಗಾಗಿ ತಡಕಾಡುವ ಶೋಚನೀಯವಾದ ಸ್ಥಿತಿ. ಅಸ್ಖಲಿತವಾದ ಕನ್ನಡ ಇಂದು ನಮ್ಮ ಯಕ್ಷಗಾನದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ.
 ಪ್ರಾಥಮಿಕ ಶಾಲಾ ಮಟ್ಟದಿಂದಲೇ ಕನ್ನಡ ವ್ಯಾಕರಣವನ್ನು ವಿದ್ಯಾರ್ಥಿಗಳಿಗೆ ಚೆನ್ನಾಗಿ ಕಲಿಸಬೇಕು. ಶಬ್ದ ಧಾರಿದ್ರ್ಯವು ಇರದಂತೆ ನೋಡಿಕೊಳ್ಳಲು ಪ್ರೌಢಶಾಲಾ ಮಟ್ಟದಲ್ಲಿ ಅಮರಕೋಶ ಮೊದಲಾದ ನಿಘಂಟುಗಳಿಂದ ಕೆಲ ಭಾಗವನ್ನು ಪಠ್ಯವನ್ನಾಗಿಸಬೇಕು. ಇದರ ಸಂಗಡ ಕನ್ನಡ ಭಾಷೆ ಪುಷ್ಟವಾಗಿ ಬೆಳೆಯಲಿಕ್ಕೆ ಹಳೆಗನ್ನಡದ ಕಾವ್ಯ ನಾಟಕಗಳನ್ನು ಪಠ್ಯವಾಗಿ ಇಡಬೇಕು. ಅವುಗಳು ಅರ್ಥವಾಗುವುದಿಲ್ಲ ಎನ್ನುವ ನೆಪವೊಡ್ಡಿ ಕೈಬಿಡಬಾರದು. ಪಾಲಕರಲ್ಲಿ ಕನ್ನಡದ ಅಭಿಮಾನ ಜಾಗೃತವಾಗಿದ್ದರೆ ಮನೆಯಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಿ ಕನ್ನಡದ ಅಭ್ಯಾಸ ಬೆಳೆಯಲಿಕ್ಕೆ ಅನುಕೂಲವಾಗುತ್ತದೆ. ದೊಡ್ಡ ದೊಡ್ಡ ಪಟ್ಟಣ ಪ್ರದೇಶದಲ್ಲಿ ಪ್ರತಿ ಮನೆಯವರೂ ಒಂದು ಕನ್ನಡ ದೈನಿಕವನ್ನಾದರೂ ತರಿಸಿಕೊಳ್ಳಬೇಕು. ಒಟ್ಟಿನಲ್ಲಿ ಅಭ್ಯಾಸ ಮಾಡದೆ ಕನ್ನಡ ಬೆಳೆಯಲಿಕ್ಕೆ ಸಾಧ್ಯವೇ ಇಲ್ಲ. ಕನ್ನಡದ ಬಗ್ಗೆ ಹೋರಾಟ ಬೇಕೆ ಬೇಕು. ಆದರೆ ಹೋರಾಟ ಒಂದೇ ಸಾಲದು ಪ್ರತಿಯೊಬ್ಬರೂ ಅದನ್ನು ಪ್ರೀತಿಯಿಂದ ಅಭ್ಯಾಸ ಮಾಡಿದಾಗ ಮಾತ್ರ ಹೋರಾಟದ ಅವಶ್ಯಕತೆಯಿಲ್ಲದೆಯೇ ಅದು ಉಳಿಯುತ್ತದೆ, ಬೆಳೆಯುತ್ತದೆ.

-ಪ್ರೊ. ವಿಷ್ಣು ಜೋಷಿ, ಕುಮಟಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.