ಅಂಕಣಗಳು

ಇದು ಅಜಿತ್ ದೋವಲ್ ಸಮಯ!

ಇದು ಅಜಿತ್ ದೋವಲ್ ಸಮಯ!
Published On :

ಅಜಿತ್ ದೋವಲ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.  ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ 69 ವರ್ಷದ ದೋವಲ್‌ರ ಹೆಸರು ಎನ್‌ಎಸ್‌ಎ ಸ್ಥಾನಕ್ಕಾಗಿ ಸುತ್ತುಹೊಡೆಯತೊಡಗಿತ್ತು. 2005ರಲ್ಲಿ ಆ ಹುದ್ದೆಗೆ ಎಷ್ಟೋ ಆಕಾಂಕ್ಷಿಗಳಿದ್ದರಾದರೂ, ಅಜಿತ್ ದೋವಲ್‌ರ ಇತಿಹಾಸವನ್ನು ಅರಿತ ಪ್ರಧಾನಿಗಳು ಅವರನ್ನೇ ಆಯ್ಕೆ ಮಾಡಿದ್ದಾರೆ.

1989. ಪ್ರತ್ಯೇಕತಾವಾದದ ಕೂಗು ಕಾಶ್ಮೀರ ಕಣಿವೆಯಲ್ಲಿ ಜೋರಾಗಿ ಪ್ರತಿಧ್ವನಿಸುತ್ತಿದ್ದ ಸಮಯವದು. ಪ್ರತ್ಯೇಕ ರಾಷ್ಟ್ರಕ್ಕಾಗಿ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್‌ನ ಮಿಲಿಟೆಂಟ್‌ಗಳು ಹಿಂಸೆಗಿಳಿದಿದ್ದರೆ, ಆ ರಾಜ್ಯವನ್ನು ಪಾಕಿಸ್ತಾನದ ಭಾಗವಾಗಿಸಬೇಕು ಎಂಬ ಐಎಸ್‌ಐನ ಆಸೆಗೆ ಅನುಗುಣವಾಗಿ ಹಿಜ್ಬುಲ್ ಮುಜಾಹಿದ್ದೀನ್‌ನ ಉಗ್ರರು ಕೋವಿ ಹಿಡಿದು ಕ್ರೌರ್ಯಕ್ಕಿಳಿದಿದ್ದರು. ಕಾಶ್ಮೀರದ ಮುಸಲ್ಮಾನ ಯುವಕರು ಮತಾಂಧರಾಗಿಯೋ ಅಥವಾ ಮತಾಂಧರ ಭಯಕ್ಕೋ ಈ ಎರಡು ಸಂಘಟನೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆಗೆ ಬಿದ್ದಿದ್ದರು. ಎತ್ತ ಹೋದರೂ ನೆತ್ತರೇ! ಆದರೆ ತಪ್ಪಿಸಿಕೊಳ್ಳುವಂತಿರಲಿಲ್ಲ. ಹಿಜ್ಬುಲ್ ಉಗ್ರರ ಕಾಟ ತಾಳಲಾರದೆ ಇಂಥ ಅನಿವಾರ್ಯತೆಗೆ ಸಿಲುಕಿ ಪ್ರತ್ಯೇಕತಾವಾದಿಗಳೊಂದಿಗೆ ಗುರುತಿಸಿಕೊಂಡವರಲ್ಲಿ ಕುಕಾ ಪರೇ ಕೂಡ ಒಬ್ಬ. ಕುಕಾ ಕಾಶ್ಮೀರದ ಆ ಸಮಯದ ಖ್ಯಾತ ಗಜಲ್ ಗಾಯಕ!
ಆತ ಜೆಕೆಎಲ್‌ಎಫ್ ಸೇರುತ್ತಿದ್ದಂತೆಯೇ ವ್ಯಗ್ರಗೊಂಡ ಹಿಜ್ಬುಲ್, ಕುಕಾ ಪರೆಯ ಆಪ್ತರನ್ನೆಲ್ಲ ಕೊಲ್ಲಲು ಶುರುವಿಟ್ಟುಕೊಂಡಿತು. ಇದರಿಂದಾಗಿ ಉಗ್ರವಾದ ಕುಕಾ ಜೆಕೆಎಲ್‌ಎಫ್‌ಗೆ ಇನ್ನಷ್ಟು ಹತ್ತಿರವಾಗುತ್ತಾ ಸಾಗಿದ. ಹಾಡು ಗುನುಗಬೇಕಾದ ಆತನ ಗಂಟಲಿನಿಂದ ಬರೀ ಪ್ರತ್ಯೇಕತಾವಾದದ ಕೂಗೇ ಕೇಳಿಸತೊಡಗಿತು. ಆ ಕೂಗು ಗುಪ್ತಚರ ದಳದ ಅಂದಿನ ಮುಖ್ಯಸ್ಥ ಅಜಿತ್ ದೋವಲ್ ಅವರ ಕಿವಿಗೂ ತಲುಪಿತು!
ಚುರುಕುಮತಿಯ ಅಜಿತ್ ಕೂಡಲೇ ಕೆಲಸಕ್ಕೆ ಧುಮುಕಿ ಕುಕಾನ ಹಿನ್ನೆಲೆಯನ್ನು ಕಲೆಹಾಕತೊಡಗಿದರು. ಈ ವ್ಯಕ್ತಿಯನ್ನು ಸುಲಭವಾಗಿ ಸರಿದಾರಿಗೆ ತರಬಹುದು ಎಂದು ಯಾವಾಗ ಅವರಿಗೆ ಅನಿಸಿತೋ, ಆತನನ್ನು ಸಂಪರ್ಕಿಸಿ ತಮ್ಮೊಂದಿಗೆ ಕೆಲಸ ಮಾಡಿದರೆ ಆತನ ಕುಟುಂಬಕ್ಕೆ ರಕ್ಷಣೆ ಒದಗಿಸುವುದಾಗಿ ಭರವಸೆ ಕೊಟ್ಟರು.
ಅದಾಗಲೇ ಈ ಎಲ್ಲಾ ತಿಕ್ಕಾಟಗಳಿಂದಾಗಿ ಹೈರಾಣಾಗಿದ್ದ ಕುಕಾನಿಗೆ ಭಾರತದ ಬಗೆಗಿನ ಪೂರ್ವಗ್ರಹಗಳೂ ತುಸು ದೂರವಾಗಿದ್ದವು. ಕಾಶ್ಮೀರಿಗಳನ್ನು ನಿಜವಾಗಿಯೂ ಹಾಳು ಮಾಡುತ್ತಿರುವುದು ಹಿಜ್ಬುಲ್ ಮತ್ತು ಜೆಕೆಎಲ್‌ಎಫ್‌ನಂಥ ಸಂಘಟನೆಗಳೇ ಎನ್ನುವುದನ್ನು ಆತನಿಗೆ ಮನದಟ್ಟು ಮಾಡುವಲ್ಲಿ ಅಜಿತ್ ಯಶಸ್ವಿಯಾಗಿಬಿಟ್ಟರು. ಯಾವ ವ್ಯಕ್ತಿ ಭಾರತೀಯರ ವಿರುದ್ಧ ಹೋರಾಡುತ್ತಿದ್ದನೋ, ಆತನೇ ಭಾರತದ ಪರವಾಗಿ ನಿಂತು ಸೇನೆಗೆ ಗುಪ್ತ ಮಾಹಿತಿಗಳನ್ನು ಒದಗಿಸುತ್ತಾ ಉಗ್ರರ ಸದ್ದಡಗಿಸತೊಡಗಿದ! ಮುಂದೆ ಕುಕಾ ರಾಜಕಾರಣಿಯಾಗಿ, ಕೊನೆಗೆ ಅದೇ ಉಗ್ರರ ಗುಂಡಿಗೆ ಬಲಿಯಾದನಾದರೂ, ಅಷ್ಟರಲ್ಲಾಗಲೇ ಅಜಿತ್ ದೋವಲ್ ಇಂಥ ಎಷ್ಟೋ ಕುಕಾ ಪರೇರನ್ನು ತಯಾರು ಮಾಡಿಬಿಟ್ಟಿದ್ದರು! ಪಾಕಿಸ್ತಾನ ತತ್ತರಿಸಿ ಹೋಗಿದ್ದೇ ಆಗ. ಏಕೆಂದರೆ ಅಜಿತ್ ದೋವಲ್ ಕಾಶ್ಮೀರಕ್ಕೆ ಬರುವುದಕ್ಕೆ ಮುನ್ನ ಭೂಗತರಾಗಿ ಆರು ವರ್ಷಗಳು ಇಸ್ಲಾಮಾಬಾದ್‌ನಲ್ಲಿ ಬೇಹುಗಾರಿಕೆ ನಡೆಸಿ ಪಾಕಿಸ್ತಾನವನ್ನು ಮಂಗ ಮಾಡಿದ್ದರು.   
ಭಾರತದ ಇದುವರೆಗಿನ ಅತ್ಯುತ್ತಮ ಸ್ಪೈ ಮಾಸ್ಟರ್‌ಗಳ್ಯಾರು ಎಂಬ ಪ್ರಶ್ನೆಗೆ ಮೊದಲು ತುಟಿಗೆ ಬರುವುದೇ ಅಜಿತ್ ದೋವಲ್ ಎಂಬ ಹೆಸರು.  
ಕಾಶ್ಮೀರದಲ್ಲಿ ತಮ್ಮ ಕೈಚಳಕ ತೋರಿಸುವ ಎಷ್ಟೋ ವರ್ಷಗಳಿಗೂ ಹಿಂದೆಯೇ ಗುಪ್ತಚರ ದಳದ ರಹಸ್ಯ ಜಗತ್ತಿನಲ್ಲಿ ದಂತಕಥೆಯಾಗಿಹೋಗಿದ್ದರು ಅಜಿತ್. 1984ರ ಸಮಯದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿಗಳಂತೆಯೇ "ಭಾರತವನ್ನು ನಾಶ ಮಾಡೇ ತೀರುತ್ತೇವೆಂದು" ಮಿಜೋರಾಂನ ಭೂಗತ ಸಂಘಟನೆ ಮಿಜೋ ನ್ಯಾಶನಲ್ ಫ್ರಂಟ್ ತಯಾರಾಗಿ ನಿಂತಿತ್ತು. ಆ ಸಮಯದಲ್ಲಿ ಗುಪ್ತಚರ ದಳದ ಸಾಮಾನ್ಯ ಅಧಿಕಾರಿಯಾಗಿದ್ದ ಅಜಿತ್ ಜೀವಗಟ್ಟಿ ಹಿಡಿದುಕೊಂಡು ಆ ಸಂಘಟನೆಯಲ್ಲಿ ತೂರಿಕೊಂಡುಬಿಟ್ಟರು! ವರ್ಷಗಳ ಕಾಲ ಒದ್ದಾಡಿ ಅದರ ಮುಖ್ಯ ಕಮಾಂಡರ್‌ಗಳೊಂದಿಗೆ ದೋಸ್ತಿ ಮಾಡಿಕೊಂಡು ಅವರನ್ನೆಲ್ಲ ಎಮ್‌ಎನ್‌ಎಫ್‌ನ ವಿರುದ್ಧವೇ ಎತ್ತಿಕಟ್ಟಿದರು. 1985ರಲ್ಲಿ ಆರು ಕಮಾಂಡರ್‌ಗಳನ್ನು ತಮ್ಮ ಪರವಾಗಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿಬಿಟ್ಟರು. 1986ರ ವೇಳೆಗೆ ಎಮ್‌ಎನ್‌ಎಫ್‌ನ ಬೆನ್ನುಲುಬೇ ಮುರಿದು ಬಿತ್ತು. ಅದರ ನಾಯಕ ಲಾಲ್‌ಡೆಂಗಾನನ್ನು ಮಾತುಕತೆಗೆ ಕರೆದ ಅಜಿತ್ ಭಾರತದೊಂದಿಗೆ ಒಪ್ಪಂದಕ್ಕೆ ಬರಲೇಬೇಕಾದ ಅನಿವಾರ್ಯಕ್ಕೆ ಆತನನ್ನು ತಳ್ಳಿದರು. 20 ವರ್ಷಗಳಿಂದ ಎಷ್ಟೇ ತಿಣುಕಾಡಿದರೂ ಸಾಧ್ಯವಾಗದ ಕೆಲಸವನ್ನು ಅಜಿತ್ ಕೇವಲ ಎರಡು ವರ್ಷದಲ್ಲಿ ಮಾಡಿ ಮುಗಿಸಿದ್ದರು. ಎಮ್‌ಎನ್‌ಎಫ್ ಭಾರತಕ್ಕೆ ಶರಣಾಗಿ ಐತಿಹಾಸಿಕ ಮಿಜೋ ಒಪ್ಪಂದಕ್ಕೆ ಸಹಿ ಹಾಕಿತು.
ಅಪಾಯಗಳನ್ನು ಎದುರುಹಾಕಿಕೊಳ್ಳುವ ಅವರ ಕ್ಷಮತೆಗೆ, ತುಡಿತಕ್ಕೆ ಅಮೃತಸರದ ಸ್ವರ್ಣಮಂದಿರವೂ ಸಾಕ್ಷಿಯಾಗಿದೆ.  ಸ್ವರ್ಣಮಂದಿರದ ಆವರಣದಲ್ಲಿ ಉಗ್ರವಾದಿಗಳು ತೂರಿಕೊಂಡಿದ್ದ ಸಮಯವದು. ಅವರನ್ನೆಲ್ಲ ಹೊರಹಾಕುವುದು ಹೇಗೆ ಎಂದು ಸೇನೆಗೆ ತಲೆಬಿಸಿಯಾಗಿದ್ದಾಗ, ಅದಕ್ಕೆ ಕಂಡದ್ದು ಅಜಿತ್ ದೋವಲ್. 'ಇದಕ್ಕಾಗೇ ಕಾಯುತ್ತಿದ್ದೆ' ಎನ್ನುವಂತೆ ಕೂಡಲೇ ಕಾರ್ಯಪ್ರವೃತ್ತರಾದ ಅವರು ಪಾಕಿಸ್ತಾನಿ ಏಜೆಂಟ್‌ನ ವೇಷ ಧರಿಸಿ ಸ್ವರ್ಣಮಂದಿರದಲ್ಲಿ ತೂರಿಬಿಟ್ಟರು! ಆಗ ಪಂಜಾಬಿ ಉಗ್ರರು ಪಾಕಿಸ್ತಾನದ ಪರವೇ ಇದ್ದರು. ಹೀಗಾಗಿ ಅವರೊಂದಿಗೆ ಬೆರೆತು, ಅವರು ಯಾವಾಗ ಏನೇನು ಮಾಡಲಿದ್ದಾರೆ, ಎಲ್ಲಿ ಅವಿತುಕೊಳ್ಳುತ್ತಾರೆ, ಎಷ್ಟು ಜನರಿದ್ದಾರೆ ಎನ್ನುವ ಇಂಚಿಂಚು ಮಾಹಿತಿಯನ್ನು ಸೇನೆಗೆ ರವಾನಿಸಿದರು ಅಜಿತ್. ಆಪರೇಷನ್ ಬ್ಲಾಕ್ ಥಂಡರ್ ನಡೆಯಿತು. ಛದ್ಮವೇಷದಲ್ಲಿದ್ದ ಭಾರತೀಯ ಮತ್ತೊಮ್ಮೆ ಗೆಲುವಿನ ನಗೆ ಬೀರಿದ! ಈ ಸಾಹಸಕ್ಕಾಗಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ 'ಕೀರ್ತಿ ಚರ್ಕ'ವೂ ದೊರೆಯಿತು.  ಇದಷ್ಟೇ ಅಲ್ಲದೆ, 1991ರಲ್ಲಿ ರೊಮೇನಿಯನ್ ರಾಯಭಾರಿ ಲಿವಿಯು ರಾಡು ಅವರನ್ನು  ಖಾಲಿಸ್ತಾನ ಲಿಬರೇಷನ್ ಫ್ರಂಟ್ ಅಪಹರಿಸಿದ್ದಾಗ, ಅವರನ್ನು ಪಾರು ಮಾಡುವಲ್ಲಿ ತಂತ್ರ ರಚಿಸಿದ್ದು ಇವರೇ... 1999ರಲ್ಲಿ ಕಾಂದಹಾರ್ ವಿಮಾನ ಅಪಹರಣದ ಘಟನೆಯಲ್ಲಿ ಸಂಧಾನ ತಂಡದಲ್ಲಿ ಹಿನ್ನೆಲೆಯಲ್ಲಿದ್ದುಕೊಂಡು ಕೆಲಸ ಮಾಡಿದ್ದು ಕೂಡ ಇವರೇ...
ನನನ
ಈಗ ಇದೇ ಅಜಿತ್ ದೋವಲ್ ಮೋದಿ ಸರ್ಕಾರದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ! ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ 69 ವರ್ಷದ ದೋವಲ್‌ರ ಹೆಸರು ಎನ್‌ಎಸ್‌ಎ ಸ್ಥಾನಕ್ಕಾಗಿ ಸುತ್ತುಹೊಡೆಯತೊಡಗಿತ್ತು. 2005ರಲ್ಲಿ ಆ ಹುದ್ದೆಗೆ ಎಷ್ಟೋ ಆಕಾಂಕ್ಷಿಗಳಿದ್ದರಾದರೂ, ಅಜಿತ್ ದೋವಲ್‌ರ ಇತಿಹಾಸವನ್ನು ಅರಿತ ಪ್ರಧಾನಿಗಳು ಅವರನ್ನೇ ಆಯ್ಕೆ ಮಾಡಿದ್ದಾರೆ. ಎನ್‌ಎಸ್‌ಎ ಆಗಿ ನೇಮಕವಾಗುವುದಕ್ಕೂ ಮುನ್ನ ದೋವಲ್ ರಾಷ್ಟ್ರೀಯ ಭದ್ರತೆಯ ರೂಪುರೇಷೆಯ ಅಧ್ಯಯನಕ್ಕಾಗಿ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಷನ್ ಸ್ಥಾಪಿಸಿ ಅದನ್ನು ಮುನ್ನಡೆಸುತ್ತಿದ್ದರು.
ಮೊನ್ನೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಮೋದಿ ಎಚ್ಚರಿಕೆಯ ಮಾತುಗಳನ್ನಾಡಿ ಕಳುಹಿಸಿರುವುದರ ಹಿಂದೆಯೂ ದೋವಲ್ ಅವರ ಸಲಹೆ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಭಾರತದ ಉಗ್ರವಿರೋಧಿ ಮತ್ತು ಮಾವೋಯಿಸ್ಟ್ ವಿರೋಧಿ ರಣತಂತ್ರಕ್ಕೆ ದೋವಲ್ ಭದ್ರ ರೂಪ ಕೊಡಲಿದ್ದಾರೆ ಎಂದು ಮೋದಿ ಆಶಿಸುತ್ತಿದ್ದಾರೆ. ಎಮ್.ಕೆ. ನಾರಾಯಣ್ ನಂತರ ಗುಪ್ತಚರ ದಳದ ಹಿನ್ನೆಲೆಯಿಂದ ಬಂದ ಎರಡನೇ ಭದ್ರತಾ ಸಲಹೆಗಾರ ದೋವಲ್. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿದ್ದ ಬ್ರಜೇಶ್ ಮಿಶ್ರಾ, ಮನಮೋಹನ್ ಸಿಂಗ್ ಅವಧಿಯಲ್ಲಿದ್ದ ಜೆ.ಎನ್. ದೀಕ್ಷಿತ್, ಶ್ಯಾಮ್ ಶರಣ್ ಮತ್ತು ಎಸ್‌ಎಸ್ ಮೆನನ್‌ರೆಲ್ಲ ವಿದೇಶಾಂಗ ವ್ಯವಹಾರದ ಹಿನ್ನೆಲೆ ಹೊಂದಿದ್ದವರಷ್ಟೇ!
ಹಾಗಾಗೇ ದೋವಲ್ ಮತ್ತು ಮೋದಿ ಜೋಡಿಯಿಂದಾಗಿ ಭಾರತದ ಭದ್ರತಾ ವ್ಯವಸ್ಥೆ ಹೊಸ ರೂಪ ಹೊತ್ತು ನಿಲ್ಲಲಿದೆ ಎನ್ನುವ ಭರವಸೆಯಂತೂ ಹುಟ್ಟುತ್ತಿದೆ. ಇನ್ನೊಂದೆಡೆ ಪಾಕಿಸ್ತಾನ ಮತ್ತು ಅದರಲ್ಲೂ ಮುಖ್ಯವಾಗಿ ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್ ಮತ್ತು ಸಯೀದ್ ಸಲಾಹುದ್ದೀನ್‌ರಂಥ ಪಾತಕಿಗಳಿಗಂತೂ ಈ ನೇಮಕಾತಿ ಪತರಗುಟ್ಟುವಂತೆ ಮಾಡಿರುವುದು ಸುಳ್ಳಲ್ಲ. ಈ ಕಾರಣಕ್ಕಾಗೇ ಹಫೀಜ್ ಸಯೀದ್ ಭಾರತದ ವಿರುದ್ಧ ಜೋರಾಗಿ 'ಜಿಹಾದ್‌' ಕೂಗಿ ಗಂಟಲು ಕೆಡಿಸಿಕೊಂಡಿದ್ದಾನೆ. ಇಂಥ ಕಾರಣಕ್ಕಾಗೇ ದಾವೂದ್ ಇಬ್ರಾಹಿಂ ಪಾಕಿಸ್ತಾನದಿಂದ ದುಬೈಗೆ ಪಲಾಯನ ಮಾಡಿದ್ದಾನೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದೆಡೆಗೆ ಭಾರತದ ನಿಲುವು ಹೇಗಿರಲಿದೆ ಎನ್ನುವುದರ ಮಿಣುಕು ನೋಟವನ್ನು ಈ ನೇಮಕಾತಿ ನೀಡುತ್ತಿದೆ. ಈ ಕುರಿತು ಫಸ್ಟ್‌ಪೋಸ್ಟ್ ಜಾಲತಾಣದಲ್ಲಿ ಬರೆಯುತ್ತಾ ರಕ್ಷಣಾ ಪರಿಣತ ರಾಜೀವ್ ಶರ್ಮಾ ಏನು ಹೇಳುತ್ತಾರೆಂದರೆ: "ಮುಂದಿನ ದಿನಗಳಲ್ಲಿ ನಮ್ಮ ಮಾಧ್ಯಮಗಳಲ್ಲಿ ಪಾಕಿಸ್ತಾನ ಕೇಂದ್ರಿತ ಸುದ್ದಿಗಳು ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಎಂದಿನಂತೆ ಅವು ರಾಜತಾಂತ್ರಿಕ ಒನಪು ಒಯ್ಯಾರಗಳ ಸುದ್ದಿಯಾಗಿರುವುದಿಲ್ಲ. ಬದಲಾಗಿ 'ಬ್ರೇಕಿಂಗ್ ನ್ಯೂಸ್‌' ಕ್ಯಾಟಗರಿಯಲ್ಲಿ ಕಾಣಿಸಿಕೊಳ್ಳಬಹುದು! ನನಗೆ ದೋವಲ್‌ರೊಂದಿಗೆ ಅನೇಕ ವರ್ಷಗಳ ಒಡನಾಟವಿದೆ, ಹಾಗಾಗೇ ಅತ್ಯಂತ ಗಟ್ಟಿ ನಂಬಿಕೆಯಿಂದ ನಾನು ಹೇಳಬಲ್ಲೆ, "ಭಾರತದ ಇದುವರೆಗಿನ ಎನ್‌ಎಸ್‌ಎಗಳಲ್ಲಿ ಅತ್ಯುತ್ಕೃಷ್ಟ ವ್ಯಕ್ತಿ ದೋವಲ್. ನಾನೇಕೆ ಈ ಮಾತು ಹೇಳುತ್ತಿದ್ದೇನೆಂದರೆ, ಅವರು ಆರು ವರ್ಷಗಳ ಕಾಲ ಪಾಕಿಸ್ತಾನದಂಥ ಕ್ರೂರ ರಾಷ್ಟ್ರದಲ್ಲಿದ್ದು ಕಹುತಾ ಪರಮಾಣು ಘಟಕದ ಇಂಚಿಂಚು ಮಾಹಿತಿಯನ್ನು ಕಾಲಕಾಲಕ್ಕೆ ಭಾರತಕ್ಕೆ ಕಳುಹಿಸಿದರಲ್ಲ, ಅದೇನು ಸಾಮಾನ್ಯ ಸಾಹಸವೇ? ಆ ಸಾಹಸದ ಹಿಂದೆ ದೇಶಭಕ್ತಿಯ ಭಾರೀ ಸೆಳವಿದೆ. ಮ್ಯಾನ್ ಆಫ್ ಆ್ಯಕ್ಷನ್ ಎನ್ನುತ್ತಾರಲ್ಲ ಆ ಕೆಟಗರಿಗೆ ಸೇರುವ ವ್ಯಕ್ತಿಯೀತ. ಆಪರೇಷನ್‌ಗಳನ್ನು ರೂಪಿಸುವುದು, ಚಾಕಚಕ್ಯತೆಯಿಂದ ಅವಗಳನ್ನು ಯಶಸ್ವಿಗೊಳಿಸುವುದು ಈತನಿಗೆ ರಕ್ತಗತವಾಗಿ ಹೋಗಿದೆ. ಇದು ನಿಜಕ್ಕೂ ಭಾರತಕ್ಕೆ ಕುತೂಹಲಕರ ಸಮಯ. ಇದು ಹೊಸ ಕಾರ್ಯತಂತ್ರದ ಸಮಯ. ಇದು ಅಜಿತ್ ದೊವಲ್ ಸಮಯ!"

-ರಾಘವೇಂದ್ರ ಆಚಾರ್ಯ   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.