ಉದಾಹರಣೆ ನೋಡಿ ಫ್ಲಿಪ್ ಕಾರ್ಟ್ ಹತ್ತು ಪುಸ್ತಕವನ್ನ ಒಂದಕ್ಕೆ ನೂರರಂತೆ ಮಾರಿದರೆ ಒಟ್ಟು ಮೊತ್ತ ಸಾವಿರವಾಯಿತು, ಹೀಗೆ ಮಾರಿದ ಎಲ್ಲಾ ವಸ್ತುಗಳ ಬೆಲೆಯನ್ನ ಒಟ್ಟುಗೂಡಿಸಿ ಅದನ್ನ ಆ ಸಂಸ್ಥೆಯ ಮೌಲ್ಯ ಎನ್ನಲಾಗಿದೆ. ಜೊತೆಗೆ ಇಲ್ಲಿ ರನ್ ರೇಟ್ ಅಂದರೆ ಮುಂಬರುವ ವರ್ಷಗಳಲ್ಲಿ ಈ ಸಂಸ್ಥೆ ಇನ್ನೆಷ್ಟು ಉತ್ಪನ್ನಗಳನ್ನ ಮಾರಬಹದು? ಎನ್ನುವುದನ್ನ ಕೂಡ ಅಂದಾಜಿಸಿ ಹಣದುಬ್ಬರವನ್ನ ಕೂಡ ಪರಿಗಣಿಸಿ ಮೌಲ್ಯವನ್ನ ನಿರ್ಧರಿಸಲಾಗುತ್ತದೆ. ವಿಧಾನ ಯಾವುದೇ ಇರಲಿ ಕೊಳ್ಳುವ ಸಂಸ್ಥೆಗೆ ಮುಂಬರುವ ದಿನಗಳಲ್ಲಿ ತಾವು ಕೊಳ್ಳುತ್ತಿರುವ ಸಂಸ್ಥೆ ಲಾಭ ನೀಡುತ್ತದೆ ಎನ್ನುವ ಅಗಾಧ ನಂಬಿಕೆ, ಅಥವಾ ಕೊಂಡ ಮೇಲೆ ಆ ಸಂಸ್ಥೆಯನ್ನ ನೆಡೆಸಲು ಅವರ ಬಳಿ ಇರುವ ಅತ್ಯಂತ ನಿಖರ ಬಿಸಿನೆಸ್ ಪ್ಲಾನ್ ಮಾತ್ರವೇ ಕೇಳಿದಷ್ಟು ಹಣ ಕೊಟ್ಟು ಕೊಳ್ಳಲು ಪ್ರೇರೇಪಿಸುವ ಅಂಶ. ವಾಲ್ ಮಾರ್ಟ್ ಭಾರತದ ನೆಲದಲ್ಲಿ ಭದ್ರವಾಗಿ ನೆಲೆಯೂರಲು ಫ್ಲಿಪ್ ಕಾರ್ಟ್ ಒಂದು ದಾರಿ, ಆ ದಾರಿಯಲ್ಲಿ ಮುಂದಿನ ಪ್ರಯಾಣ ಹೇಗಿರುತ್ತದೆ? ಫ್ಲಿಪ್ ಕಾರ್ಟ್ ಗೆ ತೆತ್ತ ಹಣ ಸರಿಯೇ? ಇದಕ್ಕೆ ಕಾಲವೇ ಉತ್ತರ ಹೇಳಲಿದೆ.