

ಕೋಲ್ಕತಾ: ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ 5ವಿಕೆಟ್ ನಷ್ಟಕ್ಕೆ 118ರನ್ ಗಳಿಸಿದ್ದು, ಭಾರತಕ್ಕೆ ಗೆಲ್ಲಲು 119ರನ್ ಗಳ ಸವಾಲು ನೀಡಿದೆ.
ಮಳೆಯಿಂದಾಗಿ 18 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಇನ್ನಿಂಗ್ಸ್ ಆರಂಭದಿಂದಲೂ ರಕ್ಷಣಾತ್ಮಕ ಆಟದ ಮೊರೆ ಹೋಯಿತು. ಮಳೆಯಿಂದಾಗಿ ನೆಂದಿದ್ದ ಪಿಚ್ ನಲ್ಲಿ ಸ್ಪಿನ್ನರ್ ಗಳ ಬಾಲ್ ಗಳು ಸಾಕಷ್ಟು ತಿರುವು
ಪಡೆಯುತ್ತಿತ್ತು. ಹೀಗಾಗಿ ಪಾಕಿಸ್ತಾನ ತಂಡ ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಗುವ ಮೂಲಕ ನಿಗದಿತ 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118ರನ್ ಗಳನ್ನು ಗಳಿಸಿತು.
ಪಾಕಿಸ್ತಾನ ಪರ ಬ್ಯಾಟಿಂಗ್ ಆರಂಭಿಸಿದ ಶರ್ಜೀಲ್ ಖಾನ್ (17 ರನ್), ಅಹಮದ್ ಶೆಹಜಾದ್ (25 ರನ್) ರಕ್ಷಣಾತ್ಮಕ ಆಟ ಮೊರೆ ಹೋಗುವ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರಾದರೂ, ಈಹಂತದಲ್ಲಿ ಬೌಲಿಂಗ್ ಗೆ ಇಳಿದ ಸುರೇಶ್ ರೈನಾ ಶರ್ಜೀಲ್ ಖಾನ್ ಅವರ ವಿಕೆಟ್ ಪಡೆದರು. ಆ ಬಳಿಕ ನಾಯಕ ಆಫ್ರಿದಿ ಅವರೊಂದಿಗೆ ಕ್ರೀಸ್ ನಲ್ಲಿ ಆಡುತ್ತಿದ್ದ ಅಹಮದ್ ಶೆಹಜಾದ್ ಕೂಡ ಹೆಚ್ಚು ಕ್ರೀಸ್ ನಲ್ಲಿ ನಿಲ್ಲದೇ ಬುಮ್ರಾಹ್ ಬೌಲಿಂಗ್ ನಲ್ಲಿ ಔಟಾದರು. ನಾಯಕ ಶಾಹಿದ್ ಅಫ್ರಿದಿ ಪಾಕಿಸ್ತಾನದ ಬ್ಯಾಟಿಂಗ್ ಗೆ ವೇಗ ನೀಡುವ ಪ್ರಯತ್ನ ಮಾಡಿದರಾದರೂ 8 ರನ್ ಗಳಿಸಿ ಪಾಂಡ್ಯಾ ಬೌಲಿಂಗ್ ನಲ್ಲಿ ಔಟ್ ಆದರು. ನಂತರ ಕ್ರೀಸ್ ಗೆ ಬಂದ ಉಮರ್ ಅಕ್ಮಲ್ ಮತ್ತು ಶೊಯೆಬ್ ಮಲ್ಲಿಕ್ ಜೋಡಿ ಪಾಕಿಸ್ತಾನದ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು.
16 ಎಸೆತಗಳನ್ನು ಎದುರಿಸಿದ ಉಮರ್ ಅಕ್ಮಲ್ 22 ರನ್ ಸಿಡಿಸಿ ಔಟಾದರೆ, 16 ಎಸೆತಗಳನ್ನು ಎದುರಿಸಿದ 22 ರನ್ ಸಿಡಿಸಿ ನೆಹ್ರಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಸರ್ಫರಾಜ್ ಅಹಮದ್ (ಅಜೇಯ 8 ರನ್) ಮತ್ತು ಮಹಮದ್ ಹಫೀಜ್ (ಅಜೇಯ 5 ರನ್) ಅಂತಿಮ ಓವರ್ ನಲ್ಲಿ ಒಂದಷ್ಟು ರನ್ ಗಳನ್ನು ಕಲೆಹಾಕುವ ಮೂಲಕ ಪಾಕಿಸ್ತಾನದ ಮೊತ್ತವನ್ನು 118ರನ್ ಗಳಿಗೆ ಏರಿಸಿದರು. ಆ ಮೂಲಕ ನಿಗದಿತ 18 ಓವರ್ ಗಳಲ್ಲಿ ಪಾಕಿಸ್ತಾನ ತಂಡ 5 ವಿಕೆಟ್ ನಷ್ಟಕ್ಕೆ 118 ರನ್ ಪೇರಿಸಿ, ಭಾರತಕ್ಕೆ ಗೆಲ್ಲಲು 119 ರನ್ ಗಳ ಸಾಧಾರಣ ಗುರಿ ನೀಡಿದೆ.
ಭಾರತದ ಪರ ಬುಮ್ರಾಹ್, ಸುರೇಶ್ ರೈನಾ, ಆಶೀಶ್ ನೆಹ್ರಾ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯಾ ತಲಾ ಒಂದು ವಿಕೆಟ್ ಗಳಿಸಿದರು.