

ಕೋಲ್ಕತಾ: ಪ್ರಭಾವಿ ಬೌಲಿಂಗ್ ಮತ್ತು ಬ್ಯಾಟಿಂಗ್ ನ ಸಹಾಯದಿಂದಾಗಿ ಸಂಘಟಿತ ಹೋರಾಟ ನಡೆಸಿದ ಭಾರತ ತಂಡ ಪಾಕಿಸ್ತಾನದ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಈಡನ್ ಗಾರ್ಡನ್ ಮೈದಾನದಲ್ಲಿ ದಾಖಲೆ ಬರೆದಿದೆ.
ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 119 ರನ್ ಗಳ ಗುರಿಯನ್ನು ಕೇವಲ 15.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿಮುಟ್ಟಿತು. ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕಿಸ್ತಾನ ನೀಡಿದ 118 ರನ್ ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನುಹತ್ತಿದ ಭಾರತ ತಂಡ, ಆರಂಭದಲ್ಲಿಯೇ ಭರ್ಜರಿಯಾಗಿ ಆಡುವ ಮುನ್ಸೂಚನೆ ನೀಡಿದ್ದ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಆಘಾತ ಮರೆಯಾಗುವ ಮುನ್ನವೇ ಶಿಖರ್ ಧವನ್ ಕೂಡ ಸಮಿ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಬಂದ ಸುರೇಶ್ ರೈನಾ ಕೂಡ ಒಂದೇ ಎಸೆತಕ್ಕೇ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಶೆ ಮೂಡಿಸಿದರು. ಬಳಿಕ ಜೊತೆಗೂಡಿದ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಜೋಡಿ ಭಾರತವನ್ನು ಗೆಲುವಿನತ್ತ ಸಾಗಿಸಿದರು.
ನಿಧಾನವಾಗಿ ಒಂದೊಂದೇ ರನ್ ಕದಿಯುತ್ತಿದ್ದ ಈ ಜೋಡಿ ಬಳಿಕ ಅಗತ್ಯಬಿದ್ದಾಗ ಭರ್ಜರಿ ಹೊಡೆತಗಳನ್ನು ಸಿಡಿಸುವ ಮೂಲಕ ಭಾರತದ ರನ್ ವೇಗವನ್ನು ಹೆಚ್ಚಿಸಿದರು. ತಂಡದ ಮೊತ್ತ 84 ರನ್ ಗಳಾಗಿದ್ದಾಗ 24 ರನ್ ಗಳಿಸಿದ್ದ ಯುವರಾಜ್ ಸಿಂಗ್ ವಹಾಬ್ ರಿಯಾಜ್ ಬೌಲಿಂಗ್ ನಲ್ಲಿ ಸಮಿಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಕೊಹ್ಲಿ ಜೊತೆಗೂಡಿದ ಧೋನಿ 13 ರನ್ ಗಳಿಸಿದರು. ಈ ನಡುವೆ ಕೊಹ್ಲಿ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಭಾರತ ತಂಡ 15.5 ಓವರ್ ಗಳಲ್ಲಿ 119 ರನ್ ಗಳಿಸುವ ಮೂಲಕ ಪಾಕಿಸ್ತಾನದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಪಾಕಿಸ್ತಾನದ ಪರ ಸಮಿ 2 ವಿಕೆಟ್ ಕಬಳಿಸಿದರೆ, ಮಹಮದ್ ಆಮೀರ್ ಮತ್ತು ವಹಾಬ್ ರಿಯಾಜ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡ ನಿಗದಿತ 18 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಆರಂಭದಿಂದಲೇ ಪಾಕಿಸ್ತಾನದ ಬ್ಯಾಟ್ಸಮನ್ ಗಳ ಮೇಲೆ ಒತ್ತಡ ಹೇರಿದರು. ಮಳೆಯಿಂದಾಗಿ ನೆಂದಿದ್ದ ಪಿಚ್ ನಲ್ಲಿ ಸ್ಪಿನ್ನರ್ ಗಳ ಎಸೆತಗಳು ಸಾಕಷ್ಟು ತಿರುವು ಪಡೆಯುತ್ತಿತ್ತು. ಹೀಗಾಗಿ ಪಾಕಿಸ್ತಾನ ತಂಡ ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಗುವ ಮೂಲಕ ನಿಗದಿತ 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118ರನ್ ಗಳನ್ನು ಗಳಿಸಿತು.
ಪಾಕಿಸ್ತಾನ ಪರ ಬ್ಯಾಟಿಂಗ್ ಆರಂಭಿಸಿದ ಶರ್ಜೀಲ್ ಖಾನ್ (17 ರನ್), ಅಹಮದ್ ಶೆಹಜಾದ್ (25 ರನ್) ರಕ್ಷಣಾತ್ಮಕ ಆಟದ ಮೊರೆ ಹೋಗುವ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರಾದರೂ, ಈಹಂತದಲ್ಲಿ ಬೌಲಿಂಗ್ ಗೆ ಇಳಿದ ಸುರೇಶ್ ರೈನಾ ಶರ್ಜೀಲ್ ಖಾನ್ ಅವರ ವಿಕೆಟ್ ಪಡೆದರು. ಆ ಬಳಿಕ ನಾಯಕ ಆಫ್ರಿದಿ ಅವರೊಂದಿಗೆ ಕ್ರೀಸ್ ನಲ್ಲಿ ಆಡುತ್ತಿದ್ದ ಅಹಮದ್ ಶೆಹಜಾದ್ ಕೂಡ ಹೆಚ್ಚು ಕ್ರೀಸ್ ನಲ್ಲಿ ನಿಲ್ಲದೇ ಬುಮ್ರಾಹ್ ಬೌಲಿಂಗ್ ನಲ್ಲಿ ಔಟಾದರು. ನಾಯಕ ಶಾಹಿದ್ ಅಫ್ರಿದಿ ಪಾಕಿಸ್ತಾನದ ಬ್ಯಾಟಿಂಗ್ ಗೆ ವೇಗ ನೀಡುವ ಪ್ರಯತ್ನ ಮಾಡಿದರಾದರೂ 8 ರನ್ ಗಳಿಸಿ ಪಾಂಡ್ಯಾ ಬೌಲಿಂಗ್ ನಲ್ಲಿ ಔಟ್ ಆದರು. ನಂತರ ಕ್ರೀಸ್ ಗೆ ಬಂದ ಉಮರ್ ಅಕ್ಮಲ್ ಮತ್ತು ಶೊಯೆಬ್ ಮಲ್ಲಿಕ್ ಜೋಡಿ ಪಾಕಿಸ್ತಾನದ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು.
16 ಎಸೆತಗಳನ್ನು ಎದುರಿಸಿದ ಉಮರ್ ಅಕ್ಮಲ್ 22 ರನ್ ಸಿಡಿಸಿ ಔಟಾದರೆ, 16 ಎಸೆತಗಳನ್ನು ಎದುರಿಸಿದ ಮಲ್ಲಿಕ್ 22 ರನ್ ಸಿಡಿಸಿ ನೆಹ್ರಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಸರ್ಫರಾಜ್ ಅಹಮದ್ (ಅಜೇಯ 8 ರನ್) ಮತ್ತು ಮಹಮದ್ ಹಫೀಜ್ (ಅಜೇಯ 5 ರನ್) ಅಂತಿಮ ಓವರ್ ನಲ್ಲಿ ಒಂದಷ್ಟು ರನ್ ಗಳನ್ನು ಕಲೆಹಾಕುವ ಮೂಲಕ ಪಾಕಿಸ್ತಾನದ ಮೊತ್ತವನ್ನು 118ರನ್ ಗಳಿಗೆ ಏರಿಸಿದರು. ಭಾರತದ ಪರ ಬುಮ್ರಾಹ್, ಸುರೇಶ್ ರೈನಾ, ಆಶೀಶ್ ನೆಹ್ರಾ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯಾ ತಲಾ ಒಂದು ವಿಕೆಟ್ ಗಳಿಸಿದರು.