

ಮೊಹಾಲಿ: ಕಳಪೆ ಫಾರ್ಮ್ ನಿಂದಾಗಿ ಬಳಲುತ್ತಿದ್ದ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡಲು ನಾನು ಮತ್ತು ನಾಯಕ ಧೋನಿ ವಿರೋಧಿಸಿದ್ದೆವು ಎಂದು ಮಾಜಿ ಕ್ರಿಕೆಟಿಗೆ ವೀರೆಂದ್ರ ಸೆಹ್ವಾಗ್ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊಹಾಲಿಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ವೇಳೆ ಹಿಂದಿ ವಾಹಿನಿಯ ವೀಕ್ಷಕ ವಿವರಣೆಗಾರರಾಗಿ ಮಾತನಾಡುತ್ತಿದ್ದ ಸೆಹ್ವಾಗ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿ ವೇಳೆ ಕೆಟ್ಟ ನಿರ್ವಹಣೆ ತೋರಿದ್ದರು. ಮೆಲ್ಬೋರ್ನ್ (11, 0 ರನ್) ಹಾಗೂ ಸಿಡ್ನಿ ಟೆಸ್ಟ್ (23, 9 ರನ್) ಅಂತ್ಯಕ್ಕೆ ಕೊಹ್ಲಿ 10.75 ಸರಾಸರಿಯಲ್ಲಿ ರನ್ ಪೇರಿಸಿದ್ದರು. ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಕೊಹ್ಲಿ ಅವರನ್ನು ತಂಡದ ಕೈಬಿಡಲು ಆಯ್ಕೆಗಾರರು ನಿರ್ಧರಿಸಿದ್ದರು. ಪರ್ತ್ ಟೆಸ್ಟ್ ನಲ್ಲಿ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ಅವಕಾಶ ನೀಡಲು ಮುಂದಾಗಿದ್ದರು.
ಆದರೆ ಇದಕ್ಕೆ ಅಂದಿನ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಉಪನಾಯಕನಾಗಿದ್ದ ನಾನು ವಿರೋಧಿಸಿದ್ದೆವು. ಕೊಹ್ಲಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದೆವು. ಆದರೆ ಪರ್ತ್ ಟೆಸ್ಟ್ ನಲ್ಲಿ ಕೊಹ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದ ಟೆಸ್ಟ್ ನಲ್ಲಿ ಕೊಹ್ಲಿ 44 ಹಾಗೂ 75 ರನ್ ಸಿಡಿಸಿದ್ದರು. ಅಂತೆಯೇ ಅಡಿಲೇಡ್ ನಲ್ಲೂ ಅದೇ ಪ್ರದರ್ಶನ ಮುಂದುವರೆಸಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದರು.