

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ಮುಂಬೈಗೆ ಬೆಂಗಳೂರು ತಂಡ 163 ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಪಡೆ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಗಳಿಸಿದೆ. ಆರ್ ಸಿಬಿಯ ಸ್ಫೋಟಕ ಬ್ಯಾಟ್ಸಮನ್ ಎಬಿಡಿವಿಲಿಯರ್ಸ್(43 ರನ್) ಹಾಗೂ ನೇಗಿ (35 ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದಾಗಿ ಆರ್ ಸಿಬಿ 150 ರನ್ ಗಳ ಗಡಿ ದಾಟಿದೆ. ಈ ಹಿಂದಿನ ಸೋಲುಗಳ ಕಹಿ ನೆನಪಲ್ಲೇ ಇಂದು ಆರ್ ಸಿಬಿ ಕಣಕ್ಕಿಳಿದಿದ್ದು, ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಈ ಪಂದ್ಯದಲ್ಲಿ ಆರಂಭಿಕರಾಗಿ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದು ವಿಶೇಷವಾಗಿದ್ದು, ಅವರು 20 ರನ್ ಸಿಡಿಸಿ ಮೆಕ್ ನಘನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮುಂಬೈ ಪರವಾಗಿ ಮೆಕ್ ಲೀನಘನ್ 3 ವಿಕೆಟ್ ಪಡೆದರೆ, ಪಾಂಡ್ಯ 2 ಮತ್ತು ಶರ್ಮಾ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.