

ಆ್ಯಂಟಿಗುವಾ: ಆ್ಯಂಟಿಗುವಾದಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಬಲಿಷ್ಟ ಭಾರತ ತಂಡವನ್ನು ವೆಸ್ಟ್ ಇಂಡೀಸ್ ಪಡೆ 11 ರನ್ ಗಳಿಂದ ರೋಚಕವಾಗಿ ಮಣಿಸಿದೆ.
ವೆಸ್ಟ್ ಇಂಡೀಸ್ ನೀಡಿದ್ದ 190 ರನ್ ಗಳ ಗುರಿಯನ್ನು ಬೆನ್ನುಹತ್ತಿದ ವಿರಾಟ್ ಕೊಹ್ಲಿ ಪಡೆ 49.4 ಓವರ್ ಗಳಲ್ಲಿ 178 ರನ್ ಗಳಿಸಿ ತನ್ನಲ್ಲಾ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಸೊಲೊಪ್ಪಿಕೊಂಡಿತು. ಆರಂಭಿಕ ಆಟಗಾರ ಶಿಖರ್ ಧವನ್ (60 ರನ್) ಮತ್ತು ಧೋನಿ (54 ರನ್) ಅವರನ್ನು ಹೊರತು ಪಡಿಸಿದರೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸಮನ್ ಗಳ ವೈಫಲ್ಯವೇ ಭಾರತ ತಂಡದ ಸೋಲಿಗೆ ಕಾರಣವಾಯಿತು. ತಂಡದ ಆರು ಮಂದಿ ಆಟಗಾರರು ಎರಡಂಕಿ ಕೂಡ ದಾಟದೇ ಇದ್ದದ್ದು ತಂಡದ ಕಳಪೆ ಬ್ಯಾಟಿಂಗ್ ಗೆ ಹಿಡಿದ ಕನ್ನಡಿಯಾಗಿದೆ.
ಅತ್ತ ಅಲ್ಪ ಮೊತ್ತವನ್ನು ಗುರಿಯಾಗಿ ನೀಡಿದ್ದರೂ ಬೌಲಿಂಗ್ ನಲ್ಲಿ ಕರಾರುವಕ್ಕಾದ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ಪರ ಹೋಲ್ಡರ್ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಇನ್ನುಳಿದಂತೆ ಜೋಸೆಫ್ 2, ವಿಲಿಯಮ್ಸ್, ಬಿಶೂ ಮತ್ತು ನರ್ಸ್ ತಲಾ ಒಂದು ವಿಕೆಟ್ ಪಡೆದರು.
ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 11ರನ್ ಗಳ ರೋಚಕ ಜಯ ಸಾಧಿಸಿತು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 2 ಪಂದ್ಯಗಳನ್ನು ಗೆದ್ದಿದ್ದು, ಇನ್ನುಳಿದಿರುವ ಏಕೈಕ ಪಂದ್ಯವನ್ನು ಗೆದ್ದರೆ ಭಾರತಕ್ಕೆ ಸರಣಿ ಕೈವಶವಾಗಲಿದೆ. ವಿಂಡೀಸ್ ಗೆದ್ದರೆ ಸರಣಿ ಸಮಬಲವಾಗಲಿದೆ.