

ನವದೆಹಲಿ: ಭಾರತೀಯ ಕ್ರಿಕೆಟ್ ರಂಗದ ದಂತಕಥೆಯೊಬ್ಬರ ವೃತ್ತಿಪರ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಆಟವೆಂದು ಪರಿಗಣಿಸಲಾಗುವ 1975ರ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ಇಂದಿಗೆ 43 ವರ್ಷ...
ಬಹುಶಃ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ 1975ರ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಮರೆಯಲು ಸಾಧ್ಯವಿಲ್ಲ. ಅಂದಿನ ಕಾಲಕ್ಕೆ ಭಾರತ ತಂಡದ ಸ್ಟಾರ್ ಬ್ಯಾಟ್ಸಮನ್ ಒಬ್ಬರು ತೋರಿದ ಅತ್ಯಂತ ಕಳಪೆ ಪ್ರದರ್ಶನದಿಂದಾಗಿ ಭಾರತ ಸೋಲನ್ನು ಅನುಭವಿಸಿತ್ತು. ಹೌದು.. ಭಾರತ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಪ್ರದರ್ಶನವೆಂದೇ ಕುಖ್ಯಾತಿ ಪಡೆದ 1975 ಜೂನ್ 7ರಂದು ನಡೆದ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯವಾಗಿ ಇಂದಿಗೆ ಬರೊಬ್ಬರಿ 43 ವರ್ಷ.
ಅಂದಿನ ಪಂದ್ಯವನ್ನು ಭಾರತ ಬರೊಬ್ಬರಿ 202 ರನ್ ಗಳ ಅಂತರದಿಂದ ಹೀನಾಯವಾಗಿ ಸೋತಿತ್ತು. ಪಂದ್ಯ ಸೋತಿದ್ದು ಪ್ರಶ್ನೆಯಲ್ಲ ಆದರೆ ಆ ಪಂದ್ಯವನ್ನು ಸೋತ ಪರಿ ಮಾತ್ರ ಇಂದಿಗೂ ಕ್ರಿಕೆಟ್ ಪ್ರೇಮಿಗಳು ಮರೆಯುವುದಿಲ್ಲ. ಆಂದು ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ನಿಗದಿತ 60 ಓವರ್ ಗಳಲ್ಲಿ ಇಂಗ್ಲೆಂಡ್ 334 ರನ್ ಗಳ ಸವಾಲಿನ ಮೊತ್ತ ಪೇರಿಸಿತು. ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸಮನ್ ಡಿಎಲ್ ಅಮಿಸ್ಸ್ ಆಕರ್ಷಕ ಶತಕ ಕೂಡ ಸಿಡಿಸಿದ್ದರು.
ಬ್ಯಾಟಿಂಗ್ ಗೆ ನೆರವಾಗಬಲ್ಲ ಲಾರ್ಡ್ಸ್ ಅಂಗಳದಲ್ಲಿ 335 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 60 ಓವರ್ ಗಳಲ್ಲಿ ಗಳಿಸಿದ್ದು ಕೇವಲ 132 ರನ್ ಗಳನ್ನಷ್ಟೇ.. ಬಹುಶಃ ಭಾರತ ತಂಡ ಆಲ್ ಔಟ್ ಆಗಿರಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ಅಂದಿನ ಪಂದ್ಯದಲ್ಲಿ ಭಾರತ ಕಳೆದುಕೊಂಡಿದ್ದು ಕೇವಲ ಮೂರೇ ವಿಕೆಟ್.. ಹೀಗಿದ್ದೂ ಭಾರತ ಅಷ್ಟು ಕಡಿಮೆ ಮೊತ್ತ ಪೇರಿಸಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ದಿ ಗ್ರೇಟ್ ಲೆಜೆಂಡ್ ಸುನಿಲ್ ಗವಾಸ್ಕರ್....ಹೌದು ಅಂದಿನ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸಮನ್ ಆಗಿದ್ದ ಸುನಿಲ್ ಗವಾಸ್ಕರ್ ತಮ್ಮ ಜೀವಮಾನದ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಆ ಪಂದ್ಯದಲ್ಲಿ ಬರೊಬ್ಬರಿ 174 ಎಸೆತಗಳನ್ನು ಎದುರಿಸಿದ ಗವಾಸ್ಕರ್ ಗಳಿಸಿದ್ದು ಕೇವಲ 36 ರನ್ ಅದೂ ಕೂಡ ಅಜೇಯರಾಗಿ..ಪಂದ್ಯದ ಅಂತಿಮ ಕ್ಷಣದವರೆಗೂ ಕ್ರೀಸ್ ನಲ್ಲಿದ್ದ ಗವಾಸ್ಕರ್ 174 ಎಸೆತಗಳನ್ನು ಆಡಿ 36 ರನ್ ಗಳಿಸಿದ್ದರು. ಈ ಪೈಕಿ ಬರೊಬ್ಬರಿ 138 ಎಸೆತಗಳನ್ನು ಸುಮ್ಮನೆ ವ್ಯರ್ಥವಾಗಿ ಬಿಟ್ಟಿದ್ದರು. ಇಡೀ ತಮ್ಮ ಇನ್ನಿಂಗ್ಸ್ ನಲ್ಲಿ ಗವಾಸ್ಕರ್ ಗಳಿಸಿದ್ದು ಏಕೈಕ ಬೌಂಡರಿ.. ಗವಾಸ್ಕರ್ 20.68 ಸ್ಟ್ರೇಕ್ ರೇಟ್ ನಲ್ಲಿ ರನ್ ಗಳಿಕೆ ಮಾಡಿದ್ದರು. ಇನ್ನು ಅದೇ ಪಂದ್ಯದಲ್ಲಿ 34 ಎಸೆತಗಳನ್ನು ಎದುರಿಸಿದ್ದ ಸೋಲ್ಕರ್ 8 ರನ್ ಗಳಿಸಿ ಔಟ್ ಆಗಿದ್ದರೆ, 46 ಎಸೆತಗಳನ್ನು ಎದುರಿಸಿದ್ದ ಗಾಯಕ್ವಾಡ್ 22 ರನ್ ಗಳಿಸಿ ನಿರ್ಗಮಿಸಿದ್ದರು. ಇನ್ನು ಮತ್ತೋರ್ವ ದಂತ ಕಥೆ ಜಿಆರ್ ವಿಶ್ವನಾಥ್ ಅವರು 59 ಎಸೆತಗಳಲ್ಲಿ 37 ರನ್ ಗಳಿಸಿ ಔಟ್ ಆಗಿದ್ದರು.
ಅಂದಿನ ಪಂದ್ಯವನ್ನು ಭಾರತ ಬರೊಬ್ಬರಿ 202 ರನ್ ಗಳ ಅಂತರದಿಂದ ಸೋತಿತ್ತು. ಈ ಪಂದ್ಯದ ಬಳಿಕ ಗವಾಸ್ಕರ್ ವ್ಯಾಪಕ ಟೀಕೆ ಎದುರಿಸಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಗವಾಸ್ಕರ್ ಕೂಡ ಸ್ಪಷ್ಟನೆ ನೀಡಿದ್ದಾರಾದರೂ, ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯ ಅಚ್ಚಳಿಯದೇ ಹಾಗೇ ಉಳಿದಿದೆ.