ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದ್ದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರ ಬಿದ್ದಿದೆ.
ಲಂಡನ್ ನ ದಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 191 ರನ್ ಅಲ್ಪ ಮೊತ್ತಕ್ಕೆ ಸರ್ವಪತನ ಕಂಡಿತು. ಈ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಜಯ ಸಾಧಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಸಿಂಗಲ್ ಕದಿಯಲು ಹೋಗಿ ರನ್‌ಔಟ್
ದಕ್ಷಿಣ ಆಫ್ರಿಕಾ 140 ರನ್ ಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆಗ ಕ್ರಿಸ್ ನಲ್ಲಿದ್ದ ತಂಡದ ನಾಯಕ ಎಬಿಡಿ ವಿಲಿಯರ್ಸ್ 16 ರನ್ ಪೇರಿಸಿದ್ದಾಗ ಸಿಂಗಲ್ ರನ್ ತೆಗೆದುಕೊಳ್ಳುವ ಭರದಲ್ಲಿ ರನ್ ಔಟ್ ಆದರು. ಅವರ ಹಿಂದೆಯೇ ಸಿಂಗಲ್ ರನ್ ಕದಿಯಲು ಹೋಗಿ 1 ರನ್ ಗೆ ಮಿಲ್ಲರ್ ರನ್ ಔಟ್ ಆದರು. ಬಳಿಕ ಇಮ್ರಾನ್ ತಾಹೀರ್ ಸಹ 1 ರನ್ ಪೇರಿಸಿದ್ದಾಗ ರನ್ ಔಟ್ ಗೆ ಬಲಿಯಾದರು.
51 ರನ್ ಗಳಿಗೆ 8 ವಿಕೆಟ್ ಪತನ
ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಹಾಶೀಂ ಆಮ್ಲಾ ಮತ್ತು ಡಿ ಕಾಕ್ 70 ರನ್ ಗಳ ಜತೆಯಾಟದೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ಡುಪ್ಲೇಸಿಸ್ ಸಹ 36 ರನ್ ಸಿಡಿಸಿದರು ಆದರೆ ಆ ನಂತರ ಬಂದ ಆಟಗಾರರು ಹೆಚ್ಚು ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಕೇವಲ 51 ರನ್ ಗಳಿಗೆ 8 ವಿಕೆಟ್ ಪತನಗೊಳ್ಳುವ ಮೂಲಕ 191 ರನ್ ಗಳಿಗೆ ಆಲೌಟ್ ಆಯಿತು.
ಕಳಪೆ ಫೀಲ್ಡಿಂಗ್
ದಕ್ಷಿಣ ಆಫ್ರಿಕಾ ಆಟಗಾರರು ಉತ್ತಮವಾಗಿ ಫೀಲ್ಡಿಂಗ್ ಮಾಡುವಲ್ಲಿ ವಿಫಲರಾದರು. ವಿರಾಟ್ ಕೊಹ್ಲಿ ಅವರ ಎರಡು ಕ್ಯಾಚ್ ಗಳನ್ನು ಕೈಚೆಲ್ಲಿದರು. ಇನ್ನು ಶಿಖರ್ ಧವನ್ ಅವರನ್ನು ಮೂರನೇ ಓವರ್ ನಲ್ಲಿ ರನ್ ಔಟ್ ಮಾಡಬಹುದಿತ್ತು. ಆದರೆ ಅಲ್ಲು ದಕ್ಷಿಣ ಆಫ್ರಿಕಾದ ಆಟಗಾರರು ರನ್ ಮಾಡುವಲ್ಲಿ ವಿಫಲರಾದರು.
ವಿಕೆಟ್ ಪಡೆಯುವಲ್ಲಿ ವಿಫಲರಾದ ಖ್ಯಾತ ಬೌಲರ್ ಗಳು
ದಕ್ಷಿಣ ಆಫ್ರಿಕಾ ತಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದರು. ಖ್ಯಾತ ಆಟಗಾರರು ಟೀಂ ಇಂಡಿಯಾ ಆಟಗಾರರ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇದು ತಂಡದ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದೆ. ರಬಡ, ಮೋರಿಸ್ ಮತ್ತು ಇಮ್ರಾನ್ ತಾಹೀರ್ ವಿಕೆಟ್ ಕೀಳುವಲ್ಲಿ ವಿಫಲರಾದರು.