

ಲಂಡನ್: ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಕ್ರಿಕೆಟ್ ರಂಗದ ಬದ್ಧ ವೈರಿಗಳ ಕದನಕ್ಕೆ ಐಸಿಸಿ ಜಾಗತಿಕ ವೇದಿಕೆ ಕಲ್ಪಿಸಿರುವುದು ಮಾತ್ರವಲ್ಲದೇ ಈ ಬಗ್ಗೆ ವ್ಯಾಪಕ ಪ್ರಚಾರಕ್ಕೂ ಕೂಡ ಚಾಲನೆ ನೀಡಿದೆ.
ನಿನ್ನೆ ಲಂಡನ್ ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 9 ವಿಕೆಟ್ ಗಳ ಅಂತರದಿಂದ ಭಾರತ ಮಣಿಸಿ ಫೈನಲ್ ಗೇರುತ್ತಿದ್ದಂತೆಯೇ ಇತ್ತ ಐಸಿಸಿ ತನ್ನ ಫೈನಲ್ ಪಂದ್ಯದ ಪ್ರೋಮೋವನ್ನು ತಯಾರಿಸಿಟ್ಟುಕೊಂಡಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕದನ ರೋಚಕ ಕ್ಷಣಗಳು ಹಾಗೂ ಉಭಯ ದೇಶಗಳ ಕ್ರೀಡಾಭಿಮಾನಿಗಳ ಸಂಭ್ರಮವನ್ನೊಳಗೊಂಡ ಪ್ರೋಮೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾನುವಾರದ ಪಂದ್ಯಕ್ಕೆ ಈಗಿನಿಂದಲೇ ಬಿಸಿ ಏರಿಸಿತೊಡಗಿದೆ.
ಇದೇ ಮೊದಲ ಬಾರಿಗೆ ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಫೈನಲ್ ಗೇರಿದ್ದು, ಭಾರತ ತಂಡ ನಾಲ್ಕನೇ ಬಾರಿಗೆ ಫೈನಲ್ ಹಂತ ಪ್ರವೇಶಿಸಿದೆ. ಹಾಲಿ ಚಾಂಪಿಯನ್ ಕೂಡ ಆಗಿರುವ ಭಾರತಕ್ಕೆ ಪಾಕಿಸ್ತಾನ ಕಠಿಣ ಸವಾಲು ನೀಡುವ ಸಾಧ್ಯತೆ ಇದೆ. ಇನ್ನು ಉಭಯ ತಂಡಗಳು ಈಗಾಗಲೇ ಸರಣಿಯಲ್ಲಿ ಒಮ್ಮೆ ಮುಖಾಮುಖಿಯಾಗಿದ್ದು, ಪಾಕಿಸ್ತಾನ ತಂಡ ಆ ಪಂದ್ಯದಲ್ಲಿ ಸೋತಿದೆ. ಆಂತೆಯೇ ಪಾಕಿಸ್ತಾನ ಐಸಿಸಿ ಆಯೋಜಿಸಿರುವ ಪ್ರಮುಖ ಟೂರ್ನಿಗಳಲ್ಲಿ ಭಾರತ ತಂಡವನ್ನು ಸೋಲಿಸಿಲ್ಲ ಎಂಬ ಕಳಂಕವನ್ನೂ ಕೂಡ ಹೊತ್ತಿದೆ.
ಈ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಫೈನಲ್ ಪಂದ್ಯ ಸೇಡಿನ ಪಂದ್ಯವಾಗಿದ್ದು, ತನ್ನ ಮೇಲಿನ ಕಳಂಕವನ್ನು ತೊಳೆಯುವ ಸಲುವಾಗಿ ಮತ್ತು ಮೊದಲ ಪಂದ್ಯದ ಸೋಲಿನ ಸೇಡನ್ನು ಈ ಪಂದ್ಯದ ಮೂಲಕ ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಅಂತೆಯೇ ಭಾರತ ಕೂಡ ತನ್ನ ದಾಖಲೆ ಮುಂದುವರೆಸಲು ಮತ್ತು ತನ್ನ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೊರಾಟ ನಡೆಸಲಿದೆ.
ಈ ಹಿಂದೆ ಇದೇ ಐಸಿಸಿ ಟಿ20 ವಿಶ್ವಕಪ್ ವೇಳೆ ಹೆಚ್ಚಿನ ಪ್ರಚಾರಕ್ಕಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿಗೆ ಸೇರಿಸಿತ್ತು. ಈ ಬಗ್ಗೆ ಐಸಿಸಿ ಮುಖ್ಯಸ್ಥರನ್ನು ಕೇಳಿದ್ದಾಗ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಆಡುವುದರಿಂದ ಟೂರ್ನಿಗೆ ಹೆಚ್ಚು ಪ್ರಚಾರ ದೊರೆಯುತ್ತದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Pakistan