

ನವದೆಹಲಿ: ಭಾರಿ ನಿರೀಕ್ಷೆ ಹುಟ್ಟಿಸಿರುವ ಮತ್ತು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವಂತೆ ಮಾಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.
ಖಾಸಗಿ ಪತ್ರಿಕೆಯೊಂದು ವರದಿ ಮಾಡಿರುವಂತೆ ದೇಶದ ಖ್ಯಾತ ಜ್ಯೋತಿಷಿಗಳು ಈ ಬಗ್ಗೆ ಭವಿಷ್ಯ ನಡಿದಿದ್ದು, ಇಂದಿನ ಫೈನಲ್ ಪಂದ್ಯದಲ್ಲಿ ಭಾರತವೇ ಗೆಲುವು ಸಾಧಿಸಲಿದೆಯಂತೆ. ಅಂಕಿ ಅಂಶಗಳು ಮತ್ತು ಪಿಚ್ ರಿಪೋರ್ಟ್ ಅನ್ವಯ ಓವಲ್ ಪಿಚ್ ಬ್ಯಾಟಿಂಗ್ ನೆರವಾಗಲಿದ್ದು, ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಭಾರತ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇದೇ ಅಭಿಪ್ರಾಯವನ್ನು ಬೇರೊಂದು ಧಾಟಿಯಲ್ಲಿ ಜ್ಯೋತಿಷಿಗಳು ವ್ಯಕ್ತಪಡಿಸಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಅವರ ಜಾತಕದ ಅನ್ಪಯ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ. ಅದು ಮಾತ್ರವಲ್ಲದೇ ಕೋಚ್ ಅನಿಲ್ ಕುಂಬ್ಳೆ ಅವರ ಜಾತಕ ಕೂಡ ಗೆಲುವಿನ ಮುನ್ಸೂಚನೆ ನೀಡುತ್ತಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ.
ಧೋನಿ ಹಾಗೂ ಕುಂಬ್ಳೆ ಜಾತಕದಲ್ಲಿ ಶುಕ್ರ ಬಲಿಷ್ಟನಾಗಿದ್ದು, ಕುಂಬ್ಳೆ ಜಾತಕದಲ್ಲಿ ಮಂಗಳನೂ ಶುಭಕಾರಕನಾಗಿದ್ದಾನೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸಲಿದೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಯಾವ ಜ್ಯೋತಿಷಿ ಏನೇ ಹೇಳಿದರೂ, ಇಂದಿನ ಪಂದ್ಯದಲ್ಲಿ ಯಾವ ತಂಡ ಉತ್ತಮವಾಗಿ ಆಡುತ್ತದೆಯೇ ಆ ತಂಡ ಮಾತ್ರ ಗೆಲುವು ಸಾಧಿಸಲಿದೆ. ಉತ್ತಮ ಪ್ರದರ್ಶನದೊಂದಿಗೆ ಅದೃಷ್ಟ ಕೂಡ ಮುಖ್ಯ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.