ನವದೆಹಲಿ: ಡಿಆರ್ಎಸ್ ವಿವಾದಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಯಾವುದೇ ಶಿಸ್ತುಕ್ರಮ ಕೈಗೊಳ್ಳದಕ್ಕೆ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.
ಸ್ಮಿತ್ ಮಾಡಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಮುಂದಿನ ರಾಂಚಿ ಪಂದ್ಯದಲ್ಲಿ ಡಿಆರ್ಎಸ್ ಗೆ ಅಪೀಲ್ ಮಾಡುವ ಮುನ್ನ ಪೆವಿಲಿಯನ್ ಕಡೆ ತಿರುಗಿದರೆ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೆ ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.
ಕ್ರಿಕೆಟ್ ಗೆ ಹೋಲಿಸಿದರೆ ಎಲ್ಲಾ ದೇಶದ ಕ್ರಿಕೆಟ್ ತಂಡಗಳನ್ನು ಒಂದೇ ರೀತಿ ಕಾಣಬೇಕು. ಒಂದು ದೇಶಕ್ಕೆ ಅನುಕೂಲವಾಗುವಂತೆ ಮತ್ತೊಂದು ಅನಾನುಕೂಲವಾಗುವಂತೆ ನಡೆದುಕೊಳ್ಳಬಾರದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಡಿಆರ್ಎಸ್ ಮನವಿಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಪ್ರಧಾನ ಕಾರ್ಯದರ್ಶಿ ಡೇವಿಡ್ ರಿಚರ್ಡ್ಸನ್ ಅವರು ಸ್ಟೀವ್ ಸ್ಮಿತ್ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಎಲ್ಬಿಡಬ್ಲ್ಯೂ ಆಗಿದ್ದ ಸ್ಟೀವ್ ಸ್ಮಿತ್ ಡಿಆರ್ಎಸ್ ಮನವಿಗೂ ಮುನ್ನ ಪೆವಿಲಿಯನ್ ನಲ್ಲಿದ್ದ ಸಹ ಆಟಗಾರರತ್ತ ನೋಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಮೈದಾನದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.