ಮೊನಾಕೊ: 2019ರ ವಿಶ್ವಕಪ್ ಪಂದ್ಯಾವಳಿಯ ನಂತರ ತಮ್ಮ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಯುವರಾಜ್ ಸಿಂಗ್ ಟೀಂ ಇಂಡಯಾ ಪರ 2017ರ ಜೂನ್ ತಿಂಗಳಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. ಆನಂತರ ಯುವರಾಜ್ ಸಿಂಗ್ ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ 2018ರ ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಈ ಬಾರಿಯ ಐಪಿಎಲ್ ನಲ್ಲಿ ಮಿಂಚುವ ವಿಶ್ವಾಸವಿದೆ. ಇದರಿಂದ 2019ರ ವಿಶ್ವಕಪ್ ನಲ್ಲಿ ಆಡುವ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಯುವರಾಜ್ ಸಿಂಗ್ 2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದರು. ಆನಂತರ ಕ್ಯಾನ್ಸರ್ ನಿಂದ ಬಳಲಿದ ಬಳಿಕ ಅವರು ಫಾರ್ಮ್ ಕಳೆದುಕೊಂಡಿದ್ದರು.
ನನ್ನ ಕ್ರಿಕೆಟ್ ವೃತ್ತಿ ಜೀವನದ ಆರಂಭದ 6 ರಿಂದ 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು.
ಬಳಿಕ ಕ್ಯಾನ್ಸರ್ ನಿಂದ ಗುಣಮುಖನಾದೆ, ಆದರೆ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.