

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 7 ರನ್ ಗಳ ವಿರೋಚಿತ ಗೆಲುವು ದಾಖಲಿಸಿದ್ದು, ಈ ಪಂದ್ಯದಲ್ಲಿ ಅಕ್ಸರ್ ಪಟೇಲ್ ಮತ್ತು ಶಿವಂ ದುಬೆ ಹಿಡಿದ ಅದ್ಭುತ ಕ್ಯಾಚ್ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 253 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 246 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್ಗಳ ಜಯ ಸಾಧಿಸಿತು.
ನಿರ್ಣಾಯಕ ಘಟದಲ್ಲಿ ಅದ್ಭುತ ಕ್ಯಾಚ್ ಹಿಡಿದ ಅಕ್ಸರ್ ಪಟೇಲ್
ಇನ್ನು 254 ರನ್ ಬೃಹತ್ ಮೊತ್ತ ಬೆನ್ನು ಹತ್ತಿದ್ದ ಇಂಗ್ಲೆಂಡ್ ಜೇಕಬ್ ಬೆಥೆಲ್ ಶತಕ (105 ರನ್), ವಿಲ್ ಜ್ಯಾಕ್ಸ್ (35 ರನ್) ಮತ್ತು ಜಾಸ್ ಬಟ್ಲರ್ (25 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗೆಲುವಿನತ್ತ ದಾಪುಗಾಲಿರಿಸಿತ್ತು.
ಆದರೆ ಈ ಹಂತದಲ್ಲಿ ಅಕ್ಸರ್ ಪಟೇಲ್ ಮತ್ತು ಶಿವಂ ದುಬೆ ಹಿಡಿದ ಅದ್ಭುತ ರಿಲೇ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಆ ಒಂದು ಕ್ಷಣವೇ ಇಂಗ್ಲೆಂಡ್‌ನ ಭರ್ಜರಿ ಜೊತೆಯಾಟಕ್ಕೆ ಬ್ರೇಕ್ ಹಾಕಿ ಭಾರತಕ್ಕೆ ರೋಚಕ ಗೆಲುವಿನ ದಾರಿ ತೆರೆಯಿತು.
ರಿಲೇ ಕ್ಯಾಚ್ ಗೆ ವಿಕೆಟ್ ಕೈಚೆಲ್ಲಿದ ವಿಲ್ ಜ್ಯಾಕ್ಸ್
ಒಂದು ಹಂತದಲ್ಲಿ ಜೇಕಬ್ ಬೆಥೆಲ್ ಮತ್ತು ವಿಲ್ ಜ್ಯಾಕ್ಸ್ ಭಾರತೀಯ ಬೌಲಿಂಗ್ ಅನ್ನು ಛಿದ್ರ ಮಾಡುತ್ತಿದ್ದರು. ಈ ಜೋಡಿ ಕೇವಲ 39 ಎಸೆತಗಳಲ್ಲಿ ಬರೊಬ್ಬರಿ 77 ರನ್ ಚಚ್ಚಿತ್ತು. ಈ ಹಂತದಲ್ಲಿ ಭಾರತಕ್ಕೆ ಕಮ್ ಬ್ಯಾಕ್ ಮಾಡಲು ವಿಕೆಟ್ ಅನಿವಾರ್ಯವಾಗಿತ್ತು.
ಇದೇ ಹಂತದಲ್ಲೇ ಅರ್ಶ್ ದೀಪ್ ಸಿಂಗ್ 14ನೇ ಓವರ್ ವೇಳೆ ಸತತ ವೈಡ್ ಮಾಡಿ ಒತ್ತಡ ಹೇರಿಕೊಂಡಿದ್ದರು. ಆದರೆ 14ನೇ ಓವರ್ ಅಂತಿಮ ಎಸೆತದಲ್ಲಿ ವಿಲ್ ಜ್ಯಾಕ್ಸ್ ವಿಕೆಟ್ ಪಡೆದು ಭಾರತಕ್ಕೆ ದೊಡ್ಡ ನಿರಾಳತೆ ತಂದರು.
ಅದ್ಭುತ ರಿಲೇ ಕ್ಯಾಚ್
ಅರ್ಶ್ ದೀಪ್ ಸಿಂಗ್ 14ನೇ ಓವರ್ ನ ಅಂತಿಮ ಎಸೆತದಲ್ಲಿ ವಿಲ್ ಜ್ಯಾಕ್ಸ್ ವಿಕೆಟ್ ಪಡೆದರು. ಆರ್ಶ್ ದೀಪ್ ಎಸೆದ ವೈಟ್ ಲೋ ಫುಲ್ ಟಾಸ್ ಎಸೆತವನ್ನು ಸಿಕ್ಸರ್ ಗೆ ಅಟ್ಟಲು ಹೋದ ವಿಲ್ ಜ್ಯಾಕ್ಸ್ ಡೀಪ್ ಎಕ್ಸ್ಟ್ರಾ ಕವರ್ ನತ್ತ ಬಲವಾಗಿ ಭಾರಿಸಿದರು. ಈ ವೇಳೆ ಗಾಳಿಯಲ್ಲಿ ಹಾರಿದ ಚೆಂಡು ನೇರವಾಗಿ ಬೌಂಡರಿ ಗೆರೆ ಮೇಲೆ ಹಾರಿ ಹೋಗುತ್ತಿತ್ತು.
ಈ ವೇಳೆ ಅಕ್ಸರ್ ಪಟೇಲ್ ಮತ್ತು ಶಿವಂ ದುಬೆ ಇಬ್ಬರೂ ಚೆಂಡಿನತ್ತ ಓಡಿ ಬಂದರು. ಅಷ್ಟು ಹೊತ್ತಿಗೆ ಬೌಂಡರಿ ಲೈನ್ ಬಳಿ ವೇಗವಾಗಿ ಓಡಿ ಬಂದ ಅಕ್ಸರ್ ಪಟೇಲ್ ಆ ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ ಬೌಂಡರಿ ಲೈನ್ ನಿಯಂತ್ರಣ ಸಿಗದೇ ಇನ್ನೇನು ಕೆಳ ಬೇಳಬೇಕು ಎನ್ನುವಾಗ ಚೆಂಡನ್ನು ಪಕ್ಕದಲ್ಲೇ ಇದ್ದ ಶಿವಂದುಬೆಗೆ ಎಸೆದು ಬೌಂಡರಿ ಲೈನ್ ಮೇಲೆ ಬಿದ್ದರು.
ಮೈದಾನದ ಒಳಗೆ ಇದ್ದ ಶಿವಂ ದುಬೆ ಕ್ಯಾಚ್ ಪಡೆದ ಹಿನ್ನಯಲ್ಲಿ ವಿಲ್ ಜ್ಯಾಕ್ಸ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಬೇಕಾಯಿತು. ಮಾತ್ರವಲ್ಲದೇ ಬೆಥೆಲ್ ಜೊತೆಗಿನ ಅದ್ಭುತ ಜೊತೆಯಾಟಕ್ಕೂ ಇದರಿಂದ ತೆರೆ ಬಿತ್ತು.
ಅದ್ಭುತ ಕ್ಯಾಚ್ ನೋಡಿ ದಂಗಾದ ಕೋಚ್ Gautam Gambhir
ಇನ್ನು ಈ ಅದ್ಭುತ ಕ್ಯಾಚ್ ನೋಡಿದ ಕೋಚ್ ಗೌತಮ್ ಗಂಭೀರ್ ಕೂಡ ಕೆಲಕ್ಷಣಗಳ ಕಾಲ ದಂಗಾಗಿದ್ದರು. ಪೆವಿಲಿಯನ್ ನಲ್ಲಿ ಕುಳಿತಿದ್ದ ಗಂಭೀರ್ ವಿಲ್ ಜ್ಯಾಕ್ಸ್ ಭಾರಿಸಿದ ಹೊಡೆತ ಸಿಕ್ಸರ್ ಎಂದು ಭಾವಿಸಿದ್ದರು. ಆದರೆ ಬೌಂಡರಿ ಲೈನ್ ಬಳಿ ಅಕ್ಸರ್ ಪಟೇಲ್ ಕ್ಯಾಚ್ ಪಡೆದ ಬೆನ್ನಲ್ಲೇ ಎದ್ದು ನಿಂತು ಅಚ್ಚರಿಯೊಂದಿಗೆ ಎಂದಿನಂತೆ ತಮ್ಮ ಆಕ್ರೋಶ ಭರಿತ ಸಂಭ್ರಮಾಚರಣೆ ಮಾಡಿದರು.
Advertisement