ಕ್ರಿಕೆಟ್

ಪ್ರತೀ ಸಾಧನೆ ಬಳಿಕ ಧ್ರುವ್ ಜುರೆಲ್ ಸಲ್ಯೂಟ್ ಮಾಡೋದ್ಯಾಕೆ? ಕಾರ್ಗಿಲ್ ಯುದ್ಧದ ಸೈನಿಕ, ತಂದೆಯ ತ್ಯಾಗದ ಹಿಂದಿದೆ ಭಾವುಕ ಕಥೆ!

ಪ್ರತೀ ಸಾಧನೆ ಬಳಿಕ ಧ್ರುವ್ ಜುರೆಲ್ ಸಲ್ಯೂಟ್ ಮಾಡೋದ್ಯಾಕೆ? ಕಾರ್ಗಿಲ್ ಯುದ್ಧದ ಸೈನಿಕ, ತಂದೆಯ ತ್ಯಾಗದ ಹಿಂದಿದೆ ಭಾವುಕ ಕಥೆ!
ಧ್ರುವ್ ಜುರೆಲ್ ಸಲ್ಯೂಟ್
Published On :

ಕ್ರೈಸ್ಟ್‌ಚರ್ಚ್: ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಮೈದಾನದಲ್ಲಿ ವಿಶೇಷ ಸಾಧನೆ ಮಾಡಿದಾಗಲೆಲ್ಲಾ ಅಲ್ಲಿ ಕುಳಿತಿರುವ ತಮ್ಮ ತಂದೆಯತ್ತ ತಿರುಗಿ ಸಲ್ಯೂಟ್ ಮಾಡುತ್ತಾರೆ.

ಅವರ ಈ ನಡೆ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇರುತ್ತದೆ. ಆದರೆ ಈ ಸಲ್ಯೂಟ್ ಹಿಂದೆ ತಂದೆಯ ತ್ಯಾಗ, ದೇಶಪ್ರೇಮ ಮತ್ತು ಮಗನ ಮೇಲಿನ ಅಪಾರ ಪ್ರೀತಿಯ ಭಾವುಕ ಕಥೆಯೊಂದಿದೆ.

ಇಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 170 ಎಸೆತಗಳಲ್ಲಿ 88 ರನ್ ಗಳಿಸಿದ ಜುರೆಲ್, ತಂಡದ ಕುಸಿತದ ನಡುವೆಯೂ ಏಕಾಂಗಿ ಹೋರಾಟ ನಡೆಸಿದರು.

ಈ ಮೂಲಕ ಭಾರತದ ಬ್ಯಾಟಿಂಗ್ ನ ಬೆನ್ನೆಲುಬಾಗಿ ನಿಂತರು. ಮಾತ್ರವಲ್ಲದೇ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಸಲ್ಯೂಟ್ ಹಿಂದೆ ಸೈನಿಕನ ಕಥೆ

ಧ್ರುವ್ ಜುರೆಲ್ ಅವರ ತಂದೆ ನೇಮ್ ಚಂದ್ ಜುರೆಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ. 1999ರ ಕಾರ್ಗಿಲ್ ಯುದ್ಧದಲ್ಲಿ 8ನೇ ಜಾಟ್ ರೆಜಿಮೆಂಟ್‌ನ ಸದಸ್ಯರಾಗಿ ಅವರು ದೇಶಕ್ಕಾಗಿ ಹೋರಾಡಿದ್ದರು. ಯುದ್ಧದ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು, ಕುಟುಂಬದಿಂದ ದೂರವಿದ್ದ ನೋವು ಮತ್ತು ದೇಶಕ್ಕಾಗಿ ಮಾಡಿದ ತ್ಯಾಗ ಇಂದಿಗೂ ಅವರ ನೆನಪಿನಲ್ಲಿವೆ.

ಯುದ್ಧಕ್ಕೆ ತೆರಳುವ ಮುನ್ನ ಪತ್ನಿಗೆ ಬರೆದಿದ್ದ ಪತ್ರ!

1999ರಲ್ಲಿ ಕಾರ್ಗಿಲ್ ಯುದ್ಧಕ್ಕೆ ತೆರಳುವ ಮುನ್ನ ನೇಮ್ ಚಂದ್ ತಮ್ಮ ಪತ್ನಿಗೆ ಒಂದು ಪತ್ರ ಬರೆದಿದ್ದರು. ಯುದ್ಧದಲ್ಲಿ ತಮಗೆ ಏನಾದರೂ ಸಂಭವಿಸಿದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಗೆ ನಿರ್ವಹಿಸಬೇಕು ಎಂಬುದನ್ನು ಆ ಪತ್ರದಲ್ಲಿ ವಿವರಿಸಿದ್ದರು. ತಮ್ಮ ಉಳಿತಾಯದ ಹಣ, ಫಿಕ್ಸೆಡ್ ಡೆಪಾಸಿಟ್‌ಗಳ ವಿವರಗಳನ್ನು ಬರೆದಿಟ್ಟಿದ್ದ ಅವರು, ಅಗತ್ಯ ಬಿದ್ದರೆ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನೂ ತಿಳಿಸಿದ್ದರು.

"ಯುದ್ಧ ಆರಂಭವಾದಾಗ ನಾನು ಪತ್ನಿಗೆ ಪತ್ರ ಬರೆದಿದ್ದೆ. ನನ್ನ ಉಳಿತಾಯದ ಹಣ, ಫಿಕ್ಸೆಡ್ ಡೆಪಾಸಿಟ್‌ಗಳ ವಿವರಗಳನ್ನು ತಿಳಿಸಿದ್ದೆ. ನನಗೆ ಏನಾದರೂ ಆದರೆ ಹಣವನ್ನು ಹೇಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದನ್ನೂ ಬರೆದಿದ್ದೆ. ಆ ಹಣವನ್ನು ಬುದ್ಧಿವಂತಿಕೆಯಿಂದ ಬಳಸುವಂತೆ ಹೇಳಿದ್ದೆ" ಎಂದು ನೇಮ್ ಚಂದ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಾರ್ಗಿಲ್ ಯುದ್ಧದ ಬಳಿಕ ಅವರ ರೆಜಿಮೆಂಟ್ ಪರ್ವತ ಪ್ರದೇಶದಿಂದ ಕೆಳಗಿಳಿದ ಕ್ಷಣವೂ ಅವರಿಗೆ ಇಂದಿಗೂ ನೆನಪಿದೆ.

ಪತ್ರದಲ್ಲೇನಿದೆ?

"ನಾವು ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡಿದ್ದೆವು. ಯುದ್ಧ ಮುಗಿದ ಬಳಿಕ ಪರ್ವತಗಳಿಂದ ಕೆಳಗಿಳಿದ ಮೊದಲ ರೆಜಿಮೆಂಟ್ ನಮ್ಮದಾಗಿತ್ತು. ಗೆಲುವಿನ ಬಳಿಕ ಸಮತಟ್ಟಾದ ಪ್ರದೇಶಕ್ಕೆ ಬಂದಾಗ ಆ ಅನುಭವವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿರಲಿಲ್ಲ" ಎಂದು ಅವರು ಹೇಳಿದ್ದಾರೆ.

ಜುಲೈ 26ರಂದು ವಿಜಯ ದಿವಸ್ ಆಚರಿಸಲಾಯಿತು. ಮರುದಿನ ಅಂದರೆ ಜುಲೈ 27ರಂದು ತಮ್ಮ ರೆಜಿಮೆಂಟ್ ಪರ್ವತಗಳಿಂದ ಕೆಳಗಿಳಿದಿತ್ತು ಎಂದು ಅವರು ಸ್ಮರಿಸಿದ್ದಾರೆ. 2008ರಲ್ಲಿ ನೇಮ್ ಚಂದ್ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದರು.

ಕಾರ್ಗಿಲ್‌ನಿಂದ ಕ್ರಿಕೆಟ್ ಮೈದಾನದವರೆಗೆ ತಂದೆಯ ಹೆಮ್ಮೆ

ಕಾರ್ಗಿಲ್ ಯುದ್ಧ ನಡೆದಾಗ ಧ್ರುವ್ ಇನ್ನೂ ಜನಿಸಿರಲಿಲ್ಲ. ಆಗ ಕುಟುಂಬದಲ್ಲಿ ಮಗಳಿದ್ದಳು. ಯುದ್ಧದ ಮುಂಚೂಣಿಯಲ್ಲಿರುವ ಕುಟುಂಬದ ಸದಸ್ಯನಿಗಾಗಿ ಕಾಯುವ ಆತಂಕವನ್ನು ಮನೆಯವರು ಅನುಭವಿಸಿದ್ದರು. ಇಂದು ಅದೇ ತಂದೆ ಮತ್ತೊಂದು ರೀತಿಯ ಹೋರಾಟವನ್ನು ಕಣ್ಣಾರೆ ನೋಡುತ್ತಿದ್ದಾರೆ. ದೇಶದ ಪರವಾಗಿ ಕ್ರಿಕೆಟ್ ಮೈದಾನದಲ್ಲಿ ಹೋರಾಡುತ್ತಿರುವ ಮಗನ ಸಾಧನೆಯನ್ನು ಹೆಮ್ಮೆಯಿಂದ ವೀಕ್ಷಿಸುತ್ತಿದ್ದಾರೆ.

ಧ್ರುವ್ ಆರಂಭದಲ್ಲಿ ಓದಿನಲ್ಲೂ ಉತ್ತಮವಾಗಿದ್ದರು. ಆದರೆ ಕ್ರಿಕೆಟ್ ಮೇಲಿನ ಆಸಕ್ತಿ ಹೆಚ್ಚಾದಂತೆ ಓದಿಗಿಂತ ಆಟಕ್ಕೆ ಹೆಚ್ಚು ಆದ್ಯತೆ ನೀಡತೊಡಗಿದರು. "ಆರಂಭದಲ್ಲಿ ಧ್ರುವ್ ಓದಿನಲ್ಲಿ ತುಂಬಾ ಚುರುಕಾಗಿದ್ದ. ಆದರೆ ಕ್ರಿಕೆಟ್ ಆತನ ಮೊದಲ ಆದ್ಯತೆಯಾದ ಬಳಿಕ ಓದು ಸ್ವಲ್ಪ ಹಿಂದೆ ಬಿತ್ತು. ಹೇಗೋ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾದ" ಎಂದು ನೇಮ್ ಚಂದ್ ಹೇಳಿದ್ದಾರೆ.

ಮಗನ ಕ್ರಿಕೆಟ್ ಕನಸಿಗೆ ಅಡ್ಡಿಯಾಗದ ತಂದೆ

ಧ್ರುವ್ ಕ್ರಿಕೆಟ್ ಆಯ್ಕೆ ಮಾಡಿಕೊಂಡ ಬಳಿಕ ಅವರ ಆಸೆಗೆ ತಂದೆ ಎಂದಿಗೂ ಅಡ್ಡಿಯಾಗಲಿಲ್ಲ. ಬ್ಯಾಟ್, ಕ್ರಿಕೆಟ್ ಶೂಗಳು ಅಥವಾ ಇತರ ಉಪಕರಣಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲವಂತೆ. "ಧ್ರುವ್ ಕ್ರಿಕೆಟ್ ಆಡಲು ಆರಂಭಿಸಿದ ಮೇಲೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದೇನೆ. ಬ್ಯಾಟ್ ಆಗಿರಲಿ, ಶೂಗಳಾಗಿರಲಿ ಅಥವಾ ಬೇರೆ ಯಾವುದೇ ಕ್ರಿಕೆಟ್ ಉಪಕರಣಗಳಾಗಿರಲಿ, ಗುಣಮಟ್ಟದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ" ಎಂದು ಅವರು ತಿಳಿಸಿದ್ದಾರೆ.

ಇದೀಗ ಮಗನ ಕ್ರಿಕೆಟ್ ಪಂದ್ಯ ವೀಕ್ಷಿಸಲು ನೇಮ್ ಚಂದ್ ತಮ್ಮ ಪತ್ನಿಯೊಂದಿಗೆ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. "ನಾವು ಮೊದಲ ಬಾರಿಗೆ ವಿದೇಶಕ್ಕೆ ಬಂದಿದ್ದೇವೆ. ಧ್ರುವ್ ಬಂದು ಪಂದ್ಯ ವೀಕ್ಷಿಸುವಂತೆ ಆಹ್ವಾನಿಸಿದ. ಸರಣಿ ಮುಗಿದ ಬಳಿಕ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೇ ಎಂಬುದನ್ನು ಅವನೇ ನಿರ್ಧರಿಸುತ್ತಾನೆ. ಅವನು ಹೆಚ್ಚು ಮಾತನಾಡುವುದಿಲ್ಲ, ನಾವೂ ಹೆಚ್ಚು ಪ್ರಶ್ನೆ ಕೇಳುವುದಿಲ್ಲ" ಎಂದು ನಗುತ್ತಾ ಹೇಳಿದ್ದಾರೆ.

ಧ್ರುವ್ ಚೊಚ್ಚಲ ಪಂದ್ಯವಾಡಿದಾಗಲೂ ತಂದೆ ದೇವಸ್ಥಾನದಲ್ಲಿ!

ಧ್ರುವ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ದಿನವೂ ತಂದೆ-ಮಗನ ನಡುವೆ ವಿಶೇಷ ಪ್ರಸಂಗ ನಡೆದಿತ್ತು. ಧ್ರುವ್ ತನ್ನ ಚೊಚ್ಚಲ ಪಂದ್ಯ ವೀಕ್ಷಿಸಲು ತಂದೆಯನ್ನು ಆಹ್ವಾನಿಸಿದ್ದರೂ ನೇಮ್ ಚಂದ್ ತೆರಳಿರಲಿಲ್ಲ. ಅವರು ವೃಂದಾವನದ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

"ಧ್ರುವ್ ಪದಾರ್ಪಣೆ ಮಾಡುತ್ತಿದ್ದಾಗ ನಾನು ಬಂಕೆ ಬಿಹಾರಿ ದರ್ಶನಕ್ಕೆ ಹೋಗಿದ್ದೆ. ಪಂದ್ಯ ವೀಕ್ಷಿಸಲು ಬರುವಂತೆ ಅವನು ಕರೆದಿದ್ದ. ಆದರೆ ನಾನು ನಿರಾಕರಿಸಿದೆ. ನಾವು ಠಾಕೂರ್ ಜಿಯ ಭಕ್ತರು" ಎಂದು ಅವರು ಹೇಳಿದ್ದಾರೆ.

ನೇಮ್ ಚಂದ್ ಅವರಿಗೆ ಧಾರ್ಮಿಕ ನಂಬಿಕೆ ಮತ್ತು ಕುಟುಂಬದ ಮೌಲ್ಯಗಳು ಬಹಳ ಮುಖ್ಯ. ತಮ್ಮ ಭಾವನೆಗಳನ್ನು ಹೆಚ್ಚು ವ್ಯಕ್ತಪಡಿಸದಿದ್ದರೂ ಮಗನ ಸಾಧನೆಯ ಬಗ್ಗೆ ಅವರಿಗೆ ಅಪಾರ ಹೆಮ್ಮೆಯಿದೆ. ಕಾರ್ಗಿಲ್‌ನ ಪರ್ವತಗಳಲ್ಲಿ ದೇಶದ ಗಡಿಯನ್ನು ಕಾಯುತ್ತಿದ್ದ ಯೋಧ ಇಂದು ಕ್ರಿಕೆಟ್ ಮೈದಾನದಲ್ಲಿ ದೇಶಕ್ಕಾಗಿ ಆಡುತ್ತಿರುವ ಮಗನನ್ನು ಹೆಮ್ಮೆಯಿಂದ ನೋಡುತ್ತಿದ್ದಾರೆ.

ಧ್ರುವ್ ಪ್ರತಿ ಬಾರಿ ಸಾಧನೆ ಮಾಡಿದಾಗ ತಂದೆಯತ್ತ ತಿರುಗಿ ಮಾಡುವ ಸಲ್ಯೂಟ್ ಕೇವಲ ಗೌರವದ ಸಂಕೇತವಲ್ಲ; ಅದು ದೇಶಕ್ಕಾಗಿ ಹೋರಾಡಿದ ತಂದೆಯ ತ್ಯಾಗಕ್ಕೆ ಮಗ ಸಲ್ಲಿಸುವ ಪ್ರೀತಿಯ ನಮನವೂ ಹೌದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.