ಜಿಲ್ಲಾ ಸುದ್ದಿ

ಮಟನ್ ಮೆಲ್ಲುವವರ ಆಸೆ ಭಂಗ!

ಮಟನ್ ಮೆಲ್ಲುವವರ ಆಸೆ ಭಂಗ!
Published On :

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಆ.25:
ತಿಂಗಳು ಪೂರ್ತಿ ಶ್ರಾವಣ ಮಾಡಿದ್ದಾಯಿತು ಇನ್ನೇನು ಮಂಗಳವಾರ ಹೊಟ್ಟೆ ಬಿರಿಯುವ ಹಾಗೆ ಕುರಿ ಮಾಂಸ ತಿಂದರಾಯಿತು ಎಂದುಕೊಂಡವರ ಆಸೆ ಭಂಗವಾಗಲಿದೆ.

ಕುರಿ ಮಾಂಸ ಮಾರಾಟಗಾರರು ಮಂಗಳವಾರದಿಂದ ಮಾಂಸದಂಗಡಿ ಬಂದ್ ಮಾಡುತ್ತಿರುವುದೇ ಇದಕ್ಕೆ ಕಾರಣ.

ವಧಾಲಯ ಟೆಂಡರ್ ನೀಡುವುದರಲ್ಲಿ ಪಾಲಿಕೆ ನಡೆದುಕೊಂಡ ರೀತಿಯಿಂದ ಬೇಸತ್ತ ಹುಬ್ಬಳ್ಳಿ ಮಟನ್ ಮಾರಾಟಗಾರರ ಸಂಘದ ಸದಸ್ಯರು ಮಂಗಳವಾರದಿಂದ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.

ಹುಬ್ಬಳ್ಳಿ ನಗರ ವ್ಯಾಪ್ತಿಯ ವಾರ್ಡ್ ನಂ.49ರಲ್ಲಿ ಪಾಲಿಕೆಗೆ ಸೇರಿದ ವಧಾಲಯವಿದೆ. ಈ ವಧಾಲಯವನ್ನು ಟೆಂಡರ್ ಮೂಲಕ ನೀಡಲಾಗುವ ಪದ್ಧತಿಯನ್ನು ಪಾಲಿಕೆ ಮೂರು ವರ್ಷಗಳ ಹಿಂದೆ ಜಾರಿಗೆ ತಂದಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಟೆಂಡರ್ ಕರೆಯುವುದಾಗಿ ತಿಳಿಸಿತ್ತು. ಈ ಪ್ರಕಾರ ಪಾಲಿಕೆ ಅ.1ರಂದು ಪತ್ರಿಕೆಯೊಂದರಲ್ಲಿ ಟೆಂಡರ್ ಪ್ರಕಟಣೆ ಪ್ರಕಟಿಸಿದೆ. ಆದರೆ ಟೆಂಡರ್ ನೋಟೀಸ್ ಹಂಚುವುದಾಗಲಿ, ಹಚ್ಚುವುದಾಗಲಿ ಮಾಡಲೇ ಇಲ್ಲ. ಈ ಹಿಂದೆ ಟೆಂಡರ್ ಪಡೆದಿದ್ದ ಹುಬ್ಬಳ್ಳಿ ಮಟನ್ ಮಾರಾಟಗಾರರ ಸಂಘದ ಗಮನಕ್ಕೆ ಬಾರಲೇ ಇಲ್ಲ.

ಏತನ್ಮಧ್ಯೇ ಟೆಂಡರ್ ಆದರ್ಶ ಎಂಟರ್‌ಪ್ರೈಸಿಸ್ ಎಂಬ ಸಂಸ್ಥೆಯ ಪಾಲಾಗಿದೆ. ಪಾಲಿಕೆಯ ನಿಯಮದಂತೆ ಕುಲಕಸುಬಾಗಿ ಮಟನ್ ಮಾರುತ್ತಾ ಬಂದ ಹುಬ್ಬಳ್ಳಿ ಮಟನ್ ಮಾರಾಟಗಾರರ ಸಂಘದವರು ವಂಚಿತರಾಗಿದ್ದಾರೆ.

ಪಾಲಿಕೆ ನಿರ್ಲಕ್ಷ್ಯದಿಂದ ತಮಗೆ ಸಿಗಬೇಕಾದ ಟೆಂಡರ್ ಅನ್ಯರ ಪಾಲಾಗಿದೆ ಎನ್ನುವುದು ಹುಬ್ಬಳ್ಳಿ ಮಟನ್ ಮಾರಾಟಗಾರರ ಸಂಘದವರ ಆರೋಪ.

ಸಾಲದ್ದಕ್ಕೆ ಕುರಿಯೊಂದನ್ನು ವಧಿಸಲು ರು.10 ಪಡೆಯಬೇಕೆಂಬ ನಿಯಮವಿದ್ದರೂ ಹೊಸದಾಗಿ ಟೆಂಡರ್ ಪಡೆದವರು ಅಕ್ರಮವಾಗಿ ರು.20 ಆಕರಿಸುತ್ತಿದ್ದಾರೆ. ಬೆಳಗ್ಗೆ 5.30ರ ಹೊತ್ತಿಗಾಗಲೇ ವಧಾಲಯ ತೆರೆಯಬೇಕು. ಆದರೀಗ ವಧಾಲಯ 7 ಗಂಟೆಯ ಬಳಿಕ ತೆರೆಯಲಾಗುತ್ತಿದೆ. ಇದರೀಂದಾಗಿ ಮಟನ್ ಮಾರಾಟಗಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಸಂಘದ ಸದಸ್ಯರು ಆರೋಪಿಸುತ್ತಾರೆ.

200ಕುರಿ ಕಟ್
ಹುಬ್ಬಳ್ಳಿಯಲ್ಲಿ ನಿತ್ಯ 200ರಿಂದ 300 ಕುರಿಗಳನ್ನು ಕತ್ತರಿಸಲಾಗುತ್ತದೆ. ಭಾನುವಾರ, ಬುಧವಾರ ಈ ಸಂಖ್ಯೆ 500 ದಾಟುತ್ತದೆ. ನಗರದಲ್ಲಿ ನಾಲ್ಕು ಮಟನ್ ಮಾರುಕಟ್ಟೆಗಳಿದ್ದರೆ, 80ಕ್ಕೂ ಹೆಚ್ಚು ಮಟನ್ ಮಾರಾಟ ಅಂಗಡಿಗಳಿವೆ.

ಪ್ರತಿಭಟನೆ ಹಾದಿ

ಪಾಲಿಕೆ ನಡಾವಳಿಯಿಂದ ಬೇಸತ್ತ ಹುಬ್ಬಲ್ಳಿ ಮಟನ್ ಮಾರಾಟಗಾರರ ಸಂಘದ ಸದಸ್ಯರು ಮರು ಟೆಂಡರ್ ಕರೆಯುವವರೆಗೆ ಮಟನ್ ಮಾರಾಟ ಬಂದ್ ಮಾಡಿ ಪ್ರತಿಭಟಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಎಲ್ಲ ಅಂಗಡಿಗಳಿಗೆ ಮಂಗಳವಾರದಿಂದ ಬೀಗ್ ಬೀಳಲಿದೆ. ಬಿಕ್ಕಟ್ಟು ಪರಿಹಾರವಾಗುವವರೆಗೆ ಮಟನ್ ಪ್ರಿಯರು ವಂಚಿತರಾಗಲಿದ್ದಾರೆ. ಅದರಲ್ಲೂ ಇಡಿ ಶ್ರಾವಣ ಮಾಸದಲ್ಲಿ ಮಟನ್ ಚಪ್ಪಸಿದರೆ ಶ್ರಾವಣ ಮುಗಿಯುವದನ್ನೇ ಕಾಯುತ್ತ ಕುಳಿತವರ ತಳಮಟ ಯಾರಿಗೂ ಬೇಡವೆನ್ನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.