ಜಿಲ್ಲಾ ಸುದ್ದಿ

ಗುಜರಾತ್ ಮಾದರಿ ಇಲ್ಲಿ ಗೌಣ

ಗುಜರಾತ್ ಮಾದರಿ ಇಲ್ಲಿ ಗೌಣ
Published On :

ಬೆಂಗಳೂರು:  ಬಿಜೆಪಿ ನಾಯಕರಿಗೆ ಭಾಷಣ ಮಾಡಲು ಗುಜರಾತ್ ಮಾದರಿ ಬೇಕು. ಕಾಂಗ್ರೆಸ್ ಮುಖಂಡರಿಗೆ ಆ ಹೆಸರು ಕೇಳಿದರೆ ವಾಕರಿಕೆ ಬರುತ್ತದೆ. ಒಟ್ಟಿನಲ್ಲಿ ಒಳ್ಳೆಯದನ್ನು ಅನುಷ್ಠಾನ ಮಾಡಲು ಯಾರಿಗೂ ಮನಸ್ಸಿರುವುದಿಲ್ಲ.
ಕಳೆದೈದು ವರ್ಷದಲ್ಲಿ ಬಿಜೆಪಿ ನಾಯಕರು ಬಾಯೆತ್ತಿದರೆ ' ಗುಜರಾತ್ ಮಾದರಿ ಎನ್ನುತ್ತಾರೆ. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಕಸ ಗಲಾಟೆ ತಾರಕಕ್ಕೂ ಏರಿದೆ. ಆದರೆ ಗುಜರಾತ್ ಮಾದರಿ ಮಾತನಾಡುವವರಿಗೆ ಅಲ್ಲಿಯ ನಗರ ಪಾಲಿಕೆಗಳಲ್ಲಿ ಕಸ ವಿಲೇವಾರಿಗೆ ತೆಗೆದುಕೊಂಡ ಕ್ರಮಗಳು ಕಾಣಿಸಲೇ ಇಲ್ಲ. ಜೆ-ನರ್ಮ್ ಯೋಜನೆಯ ಅನುದಾನವನ್ನು ಬಸ್ ಖರೀದಿಸಲು ಹಾಗೂ ಬಸ್ ನಿಲ್ದಾಣ ಕಟ್ಟುವುದರ ಜತೆಗೆ ತ್ಯಾಜ್ಯ ನಿರ್ವಹಣೆಗೆ ಹೇಗೆ ಬಳಸಿಕೊಳ್ಳಬಹುದು ಎಂದು ಅಹ್ಮದಾಬಾದ್, ಸೂರತ್ ಹಾಗೂ ರಾಜ್‌ಕೋಟ್ ಪಾಲಿಕೆಗಳು ತೋರಿಸಿಕೊಟ್ಟವೆ. ಈ ಪಾಲಿಕೆಗಳಲ್ಲಿ ಮಾಡಿದ್ದೆಲ್ಲವೂ ಸರಿಯಾಗಿದೆ ಅಥವಾ ಮಾದರಿ ಎನ್ನುವಂತಿದೆ ಎಂದಲ್ಲ. ಆದರೆ ಕಸ ವಿಲೇವಾರಿ ಬಗ್ಗೆ ಚಾಣಾಕ್ಷ ಕ್ರಮಗಳನ್ನು ತೆಗೆದುಕೊಂಡೆವೆ.
 ಜೆ-ನರ್ಮ್ ಯೋಜನೆಗೆ ಅನುದಾನ ಲಭ್ಯವಾದಾಗಲೆಲ್ಲ ಈ ಮೂರು ಪಾಲಿಕೆಗಳ ನೀಲ ನಕ್ಷೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದವು. ಹಣ ಪಡೆಯುವುದರ ಜತೆಗೆ ಕಸ ಸಂಗ್ರಹಣೆಯಿಂದ ಹಿಡಿದು ನಿರ್ವಹಣೆಯವರೆಗೂ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡಿವೆ. ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಕೂಡ ಇದೇ ನರ್ಮ್ ಹಣ ಬಳಸಿಕೊಳ್ಳಲಾಗಿದೆ. ಜತೆಗೆ ತಂತ್ರಜ್ಞಾನದ ಲಾಭವನ್ನು ಪಡೆಯಲಾಗುತ್ತಿದೆ.
ಅಂದ ಹಾಗೆ ಬೆಂಗಳೂರಿನ ಬಿಜೆಪಿ ಕಾರ್ಪೋರೇಟರ್‌ಗಳು ಈ ಮೂರು ಪಾಲಿಕೆಗಳಿಗೆ ಒಂದು ವರ್ಷದ ಹಿಂದೆಯೇ ಭೇಟಿ ನೀಡಿ ಬಂದಿದ್ದಾರೆ. ಆದರೆ ಫಳ ಮಾತ್ರ ಶೂನ್ಯ.
ಕಸ ಸಂಗ್ರಹದಲ್ಲಿ ಯಶಸ್ವಿ: ಬೆಂಗಳೂರಿನಲ್ಲಿ ಕಸ ಸಂಗ್ರಹಣೆಯ ದೊಡ್ಡ ಸಮಸ್ಯೆ. ಪೌರ ಕಾರ್ಮಿಕರು ಮನೆ-ಮನೆಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಪ್ರಮಾಣ ಕೇವಲ ಶೇ.40ರಷ್ಟಿದೆ. ಉಳಿದ ಕಸ ಲಿಟರ್ ಸ್ಪಾಟ್‌ನಲ್ಲಿರುತ್ತವೆ. ಇದರ ಪರಿಣಾಮವಾಗಿಯೇ 10 ಸಾವರಕ್ಕೂ ಅಧಿಕ ಲಿಟರ್ ಸ್ಪಾಟ್‌ಗಳು ರಾಜಧಾನಿಯಲ್ಲಿದೆ. ಆದರೆ ಅಹ್ಮದಾಬಾದ್, ಸೂರತ್ ಹಾಗೂ ರಾಜ್‌ಕೋಟ್‌ನಲ್ಲಿ ಕಸ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಸ ಸಂಗ್ರಹಕ್ಕೆ ಪ್ರತಿ ಪಾಲಿಕೆಯಲ್ಲೂ ಜನರ ದಿನಚರಿ ಆಧರಿಸಿ ಸಮಯ ನಿಗದಿ ಮಾಡಲಾಗಿದೆ. ಮನೆಯ ಕಸವನ್ನು ಬೆಳಿಗ್ಗೆ 4 ರಿಂದ 5 ಗಂಟೆಗಳ ಕಾಲ ಸಂಗ್ರಹಿಸಿದರೆ ವಾಣಿಜ್ಯ ಕಟ್ಟಡಗಳ ಬಳಿಯ ಕಸವನ್ನು ಮಧ್ಯಾಹ್ನದ ನಂತರ ಸಂಗ್ರಹಿಸುತ್ತಾರೆ. ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸುವುದಿಲ್ಲ. ಅಹ್ಮದಾಬಾದ್‌ನಲ್ಲಿ ಪ್ರತಿದಿನ 4 ಸಾವಿರ ಮೆಟ್ರಿಕ್ ಟನ್ ಕಸ ಉತ್ಪಾದನೆಯಾದರೆ, ಇದನ್ನು ಸಂಗ್ರಹಿಸಲು ಸುಮಾರು 600 ಟಾಟಾಎಸ್‌ಗಳನ್ನು ಬಳಸಲಾಗುತ್ತಿದೆ. ಇಷ್ಟಾದ ಮೇಲೂ ಲಿಟರ್ ಸ್ಪಾಟ್‌ಗಳು ಕಂಡುಬಂದಲ್ಲಿ ಕೂಡಲೇ ಶುದ್ದಿಗೊಳಿಸಲಾಗುತ್ತದೆ.
ಜನರು ಕಂಡ ಕಂಡಲ್ಲಿ ಕಸ ಎಸೆಯಬಾರದು ಎಂಬ ಉದ್ದೇಶದಿಂದ ಮೊಬೈಲ್ ಕೋರ್ಟ್ ಆರಂಭಿಸಲಾಗಿದೆ. ಕಸ ಎಸೆದಿರುವುದು ಅಥವಾ ಪಾಲಿಕೆಯ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದ ಕೂಡಲೇ ವಾಹನದಲ್ಲಿಯೇ ದಂಡ ಹಾಕಿ ರಶೀದಿ ಕೊಡುತ್ತಾರೆ. ಸಾರ್ವಜನಿಕರು ಕೋರ್ಟ್‌ಗೆ ಅಲೆಯಬೇಕಾಗಿಲ್ಲ. ಹಾಗೂ ಅಲ್ಲಿ ಭ್ರಷ್ಟಾಚಾರದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಆಂದ ಹಾಗೆ ಕಳೆ 5ವರ್ಷದಿಂದ ಅಹ್ಮದಾಬಾದ್‌ವೊಂದರಲ್ಲಿಯೇ 6 ಕೋಟಿಗೂ ಅಧಿಕ ದಂಡ ವಸೂಲಿಯಾಗಿದೆ.
ಮತ್ತೊಂದು ವಿಶೇಷವೆಂದರೆ ಈ ಮೂರು ಪಾಲಿಕೆಗಳಲ್ಲಿ ಕಸ ವಿಂಗಡಿಸಿ ಕೊಡಿ ಎಂದು ಜನರ ತಲೆ ತಿನ್ನುವುದಿಲ್ಲ. ಬದಲಾಗಿ ಕಸ ಸಂಗ್ರಹ ಮಾಡುವ ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನ ಮಾಡಲಾಗಿದೆ. ಆ ಪ್ರಕಾರ ಎಲ್ಲ ಗುತ್ತಿಗೆದಾರರು ಮನೆಯಿಂದ ಸಂಗ್ರಹಿಸುವ ತ್ಯಾಜ್ಯ, ವಾಣಿಜ್ಯ ತ್ಯಾಜ್ಯ, ಹೋಟೆಲ್ ತ್ಯಾಜ್ಯ ಹಾಗೂ ಸತ್ತ ಪ್ರಾಣಿಗಳನ್ನು ಪ್ರತ್ಯೇಕವಾಗಿ ಸಾಗಿಸಬೇಕು. ಇದಲ್ಲದೇ ಇವನ್ನು ಅಂತಿಮವಾಗಿ ವಿಲೇವಾರಿ ಮಾಡಲು ಕೂಡ ಪ್ರತ್ಯೇಕ ಗುರುತಿಸಲಾಗಿದೆ.

ರಾಜೀವ್‌ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.