ಇನ್ನೂ 2 ದಿನ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಎರಡು ದಿನಗಳಿಂದ ಹಿಂಗಾರು ಹಿಗ್ಗಾಮುಗ್ಗ ಸುರಿದಿದ್ದು, ಉತ್ತರ ಕರ್ನಾಟಕದಲ್ಲಿ ಸಾಕು ಎನ್ನುವಷ್ಟು ಆರ್ಭಟಿಸಿದೆ.
ಅಷ್ಟೇ ಅಲ್ಲ, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆಯಿದ್ದು, ಇದರಿಂದ ಅಭಾವ ಪ್ರದೇಶಗಳ ಕೊರತೆ ನೀಗಲಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ರಾಜ್ಯದ ಎಲ್ಲೆಡೆ ನಿರಂತರ ಮಳೆಯಾಗಿದೆ. ಇದರೊಂದಿಗೆ ಪ್ರಬಲ ಹಿಂಗಾರು ಅಬ್ಬರಿಸಿದ ಪರಿಣಾಮ ರಾಜ್ಯಾದ್ಯಂತ ಭಾರಿ ಮಳೆಯಾಗಿದೆ.
ಅದರಲ್ಲೂ ಉತ್ತರ ಕರ್ನಾಟಕದ ಕೊಪ್ಪಳ, ದಾವಣಗೆರೆ, ಬಳ್ಳಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಹಾಮಳೆ ಸುರಿದಿದೆ. ಕುಷ್ಠಗಿಯಲ್ಲಿ 10 ಸೆ.ಮೀ, ಸಂತೆಬೆನ್ನೂರಿನಲ್ಲಿ 9.ಸೆ.ಮೀ, ಬೆಳಗಾವಿ, ಚಿತ್ರದುರ್ಗ, ಉಡುಪಿ ಜಿಲ್ಲೆಗಳಲ್ಲಿ ತಲಾ 7 ಸೆ.ಮೀ ಮಳೆಯಾಗಿದೆ. ಹೊನ್ನಾವರ ಮತ್ತು ದಕ್ಷಿಣ ಕನ್ನಡ , ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.
ಮಳೆ ನಿರೀಕ್ಷಿಸುವ ಪ್ರದೇಶಗಳಾದ ಚಿಕ್ಕ ಬಳ್ಳಾಪುರ, ಬೆಂಗಳೂರು ನಗರ, ಚಾಮರಾಜನಗರ ತಲಾ 5 ಸೆ.ಮೀ ಮಳೆ ಸುರಿದಿದೆ. ಹಿಡಕಲ್, ಇಳಕಲ್ , ಹಗರಿಬೊಮ್ಮನಹಳ್ಳಿ ಪ್ರದೇಶದಲ್ಲಿ ತಲಾ 8.ಸೆ.ಮೀ ಮಳೆಯಾಗಿ ಆ ಭಾಗದ ಜವರಲ್ಲಿ ಸಂತಸ ತಂದಿದೆ.
ಇನ್ನೂ ಒಂದು ತಿಂಗಳು ಮಳೆ: ರಾಜ್ಯದಲ್ಲಿ ಅಕ್ಟೋಬರ್ 18ರಿಂದ ಆರಂಭವಾದ ಹಿಂಗಾರು ಉತ್ತರ ಕರ್ನಾಟಕದ ಅಲ್ಲಲ್ಲಿ ಮಳೆ ಸುರಿಸಿತು. ಅದರಲ್ಲೂ ಕೊಪ್ಪಳ, ಉತ್ತರ ಕನ್ನಡ ಹಾಗೂ ಬಾಗಲಕೋಟೆಯಲ್ಲಿ ಭಾರಿ ಮಳೆಯಾಗಿದ್ದು, ಮಳೆ ಬರವನ್ನು ತಣಿಸಿದೆ. ಹಿಂಗಾರು ಮಾರುತಗಳು ಈಶಾನ್ಯ ದಿಕ್ಕಿನಿಂದ ಬೀಸುವುದರಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಮಳೆಯಾಗಿದೆ. ಹಾಗೆಯೇ ಉತ್ತರ ಕರ್ನಾಟಕದ ಕೆಲವು ಭಾಗ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ ಇನ್ನೂ ಎರಡು ತಿಂಗಳವರೆಗೂ ಹಿಂಗಾರು ಮಳೆ ಅಲ್ಲಲ್ಲಿ ಬೀಳುವ ಸಾಧ್ಯತೆ ಇದ್ದು, ನವೆಂಬರ್‌ನಲ್ಲಿ ಹೆಚ್ಚು ಮಳೆಯಾಗಲಿದೆ. ನಂತರ ಮಾರುತಗಳ ಪ್ರಭಾವ ಕಡಿಮೆಯಾಗಿ ಹಿಂಗಾರು ಅಂತ್ಯವಾಗಲಿದೆ. ಬಳಿಕ ಚಳಿ ಆರಂಭವಾಗಲಿದೆ.
ಬಂದಿದೆ ನಿಲೋಫರ್
ನಿಲೋಫರ್ - ಇದು ಭಾನುವಾರ ತಲೆ ಎತ್ತಿರುವ ಹೊಸ ಚಂಡಮಾರುತ. ಅಂದಹಾಗೆ ಇದು ಪಾಕಿಸ್ತಾನದ ಪ್ರಬಲ ಚಂಡಮಾರುತ. ಇದರ ಪರಿಣಾಮ ಭಾರತದ ಮೇಲೂ ಉಂಟಾಗಲಿದ್ದು, ಅದರಲ್ಲೂ ಗುಜರಾತ್‌ನಲ್ಲಿ ತನ್ನದೇ ಆಟ ತೋರಿಸಲಿದೆ. ಅರಬ್ಬೀ ಸಮುದ್ರದ ವಾಯವ್ಯದಲ್ಲಿ ಉತ್ಪತ್ತಯಾಗಿರುವ ಇದು ವಾಯವ್ಯ ದಿಕ್ಕಿಗೆ ಚಲಿಸಲಿದೆ. ಎರಡು ದಿನಗಳ ನಂತರ ತನ್ನ ಪಥ ಬದಲಿಸುವ ನಿಲೋಫರ್ ನಿಧಾನವಾಗಿ ಗುಜರಾತ್‌ನ ಉತ್ತರಭಾಗದಲ್ಲಿ ಅಲೆಯಲಿದೆ. ಅಲ್ಲಿಂದ ಮೂರು ದಿನಗಳಲ್ಲಿ ಪಾಕಿಸ್ತಾನದ ಕರಾವಳಿಯಲ್ಲಿ ಸಂಚರಿಸಿ ಭಾರಿ ಮಳೆ ಉಂಟು ಮಾಡಲಿದೆ. ಹೀಗಾಗಿ ಇದು ಪಾಕಿಸ್ತಾನಕ್ಕೆ ಸೇರಿದ ಚಂಡಮಾರುತವಾಗಿದ್ದು, ಇದಕ್ಕೆ ಪಾಕ್ ತಜ್ಞರು ನಿಲೋಫರ್ ಎಂದು ಹೆಸರಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


