ಮಾಧ್ಯಮದವರ ಮೇಲೆ ಹಲ್ಲೆ

ಬೀದರ್: ಹಸುಗಳ ಎಲುಬುಗಳಿಂದ ಡಾಲ್ಡಾ, ಪೌಡರ್ ಮತ್ತಿತರ ವಸ್ತುಗಳ ತಯಾರಿಕೆ ಮಾಡುತ್ತಿದ್ದಾರೆನ್ನಲಾದ ಅಕ್ರಮ ಅಡ್ಡೆಗಳ ಕುರಿತು ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಅವರ ಬಳಿಯಿದ್ದ ಕ್ಯಾಮೆರಾ, ಮೊಬೈಲ್ಗಳನ್ನು ಸುಟ್ಟು ಹಾಕಿ ಎಲ್ಲ ವಸ್ತುಗಳನ್ನು ಕಸಿದುಕೊಳ್ಳಲಾಗಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ಚಿಟಗುಪ್ಪ ಸಮೀಪದ ಅಕ್ರಮ ಕಸಾಯಿ ಅಡ್ಡೆಯ ಬಗ್ಗೆ ಭಾನುವಾರ ವರದಿ ಮಾಡಲು ತೆರಳಿದ್ದ ಸುವರ್ಣ ನ್ಯೂಸ್ ಕ್ಯಾಮೆರಾಮನ್ ಹಣಮಂತರಾವ್, ಬಿಟಿವಿ ವರದಿಗಾರ ಸಹದೇವ್ ಮತ್ತು ಕ್ಯಾಮರಾಮನ್ ಸಾಬೀರ್ ಹಾಗೂ ರಾಜ್ ಟಿವಿ ವರದಿಗಾರ ಉದಯ ಜೀರ್ಗೆ ಹಲ್ಲೆಗೊಳಗಾದವರು.
ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಿಟಗುಪ್ಪದಿಂದ ಒಂದು ಕಿಮೀ ದೂರದಲ್ಲೇ ಅಕ್ರಮ ಚಟುವಟಿಕೆ ನಡೆಯುತ್ತಿರುವುದನ್ನು ಅರಿತು ಅಲ್ಲಿಗೆ ತೆರಳಿದ್ದ ಮಾಧ್ಯಮದವರ ಕಣ್ಣಿಗೆ ದನಗಳ ಬುರುಡೆ, ಕೊಬ್ಬು, ಸ್ನಾಯು, ಎಲುಬುಗಳ ರಾಶಿ, ಅಲ್ಲಿಯೇ ದನಗಳನ್ನು ಕಡಿದು ಹಾಕುತ್ತಿರುವ ದೃಶ್ಯ ಕಂಡುಬಂದಿದೆ.
ಅದನ್ನು ಚಿತ್ರೀಕರಿಸಲು ಮುಂದಾದಾಗ ಅಲ್ಲಿದ್ದ ಸುಮಾರು 50 ಮಂದಿ ಹಠಾತ್ತನೆ ಹಲ್ಲೆ ನಡೆಸಿ, ದನಗಳಂತೆ ಕಡಿದು ಹಾಕುವುದಾಗಿ ಹೆದರಿಸಿದ್ದಾದರೆ.
ಕ್ಯಾಮೆರಾ, ಮೊಬೈಲ್, ಪೆನ್ಗಳಲ್ಲಿ ಸ್ಪೈ ಕ್ಯಾಮೆರಾ ಇರಬಹುದೆಂದು ಶಂಕಿಸಿ ಅವುಗಳನ್ನೆಲ್ಲ ಒಂದೆಡೆ ಸೇರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ವಿದೇಶಗಳಿಗೆ ರಫ್ತು!: ಇಲ್ಲಿ ಅಕ್ರಮವಾಗಿ ಡಾಲ್ಡಾ, ಪೌಡರ್, ರಾಸಾಯನಿಕಗಳನ್ನು ತಯಾರಿಸಿ ದೇಶದ ನಾನಾ ಭಾಗಗಳಿಗೆ ರವಾನೆ ಮತ್ತು ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಹಲವಾರು ವರ್ಷಗಳಿಂದ ಪೊಲೀಸ್, ಜಿಲ್ಲಾಡಳಿತ, ಅರಣ್ಯ ಇಲಾಖೆಗಳಿಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆಟ್ಟ ರಕ್ತ ಮತ್ತಿತರ ಹೊಲಸನ್ನು ನಾಲೆಗೆ ಬಿಟ್ಟ ಕಾರಣ ಸಮೀಪದ ಕೆರೆ ನೀರು ಕಲುಷಿತಗೊಂಡಿತ್ತು. ದುರ್ವಾಸನೆ ಗ್ರಾಮಸ್ಥರ ಪ್ರಾಣಸಂಕಟಕ್ಕೆ ಕಾರಣವಾಗಿತ್ತು. ಜಮೀನಲ್ಲಿ ಕಾರ್ಯನಿರ್ವಹಿಸಲೂ ಕಾರ್ಮಿಕರು ಹಿಂದೇಟು ಹಾಕುತ್ತಿದ್ದರು.
ಹೀಗಾಗಿ ಚಿಟಗುಪ್ಪ ಸಮೀಪ ಇಂಥದ್ದೇ ಅಕ್ರಮ ಚಟುವಟಿಕೆ ಕೇಂದ್ರದ ಮೇಲೆ 10 ದಿನ ಹಿಂದೆ ಗ್ರಾಮಸ್ಥರೇ ದಾಳಿ ನಡೆಸಿದ್ದರು.
ನಾಲ್ವರು ವಶಕ್ಕೆ: ಹಲ್ಲೆಗೆ ಸಂಬಂಧಿಸಿ ಮುಜ್ಜು ಅಬ್ದುಲ್ ಹಮೀದ್, ಅಯ್ಯುಬ್ ಬಾಬುಮಿಯ್ಯಾ, ಜಾವೇದ್ ಪಾಶಾಮಿಯ್ಯಾ ಹಾಗೂ ಮಹ್ಮದ್ ಹಾಜಿ ಎಂಬವವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಎಫ್ಐಆರ್ ದಾಖಲಾಗಿಲ್ಲ ಎಂದು ಚಿಟಗುಪ್ಪ ಸಿಪಿಐ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


