ಜಿಲ್ಲಾ ಸುದ್ದಿ

ಮಾನ ಕಳೆದ ಮಳೆ

ಮಾನ ಕಳೆದ ಮಳೆ
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಒಬ್ಬ ಬಲಿಯಾಗಿದ್ದು, ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಾರು ವಾಹನಗಳು ಜಖಂಗೊಂಡಿವೆ. ರಸ್ತೆಗಳು ನೀರಿನಲ್ಲಿ ಮುಳುಗಿಹೋಗಿದ್ದವು. ಹಲವು ಬಡಾವಣೆಗಳಲ್ಲಿ ಮಳೆ ನೀರಿನ ಜತೆಗೆ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ನಾಗರಿಕರ  ಜೀವನವನ್ನು ನರಕವಾಗಿಸಿತು. ನಗರದ ಕೇಂದ್ರ ಭಾಗದಲ್ಲಿ ಮಧ್ಯರಾತ್ರಿಯವರೆಗೆ ಸಂಚಾರ ಸ್ಥಗಿತಗೊಂಡಿತ್ತು.

ಬಹುತೇಕ ಎಲ್ಲ ರಸ್ತೆಗಳು ಜಲಾವೃತವಾಗಿದ್ದರಿಂದ ತೀರಾ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೂರಾರು ವಾಹನಗಳು ಮುಳುಗಿದ್ದವು. ಕೆಲವು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಗುರುವಾರ ಸಂಜೆಯಿಂದ ರಾತ್ರಿಯವರೆಗೆ ಸುರಿದ ಸತತ ಮಳೆಗೆ 30ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 500ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಗುರುತಿಸಲಾಗದಷ್ಟು ಜಲಾವೃತವಾಗಿದ್ದವು. ಕೆಲವು ರಸ್ತೆಗಳಲ್ಲಿ 6 ಅಡಿಗಳಿಗೂ ಹೆಚ್ಚು ನೀರು ನಿಂತಿತ್ತು. ಇದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ದಿಕ್ಕೆಟ್ಟು, ಸವಾರರು ವಾಹನಗಳನ್ನೇ ಬಿಟ್ಟು ಈಜಿ ರಸ್ತೆ ದಡ ಸೇರಬೇಕಾಗಿತ್ತು.

ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿಹೋಗಿದ್ದವು. ಅವುಗಳನ್ನು ಹುಡುಕಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನಗಳ ಸವಾರರು ಮಳೆಯಲ್ಲೂ ಸಂಚರಿಸಲು ಯತ್ನಿಸಿ ಗಾಯಗೊಂಡರು. ಆನಂದರಾವ್ ವೃತ್ತದ ಸುತ್ತಮುತ್ತ ಎಂದಿನ ಭಾರಿ ಮಳೆಯ ಸ್ಥಿತಿಯೇ ಮರುಕಳಿಸಿತ್ತು. ರಾಜ್ಯರಸ್ತೆ ಸಾರಿಗೆ ನಿಗಮದ ಬಸ್ಸುಗಳೇ ನೀರಿನಲ್ಲಿ ಮುಳುಗಿದ್ದವು. ಇದರಿಂದ ಬಸ್ಸಿನಲ್ಲಿದವರು ಲಗೇಜುಗಳನ್ನೇ ಬಿಟ್ಟು ತಪ್ಪಿಸಿಕೊಳ್ಳಬೇಕಾಯಿತು. ಕೆಲವರು ಮಳೆ ನೀರಿನಲ್ಲೇ ಈಜಾಡಿಕೊಂಡು ದಡ ಸೇರಬೇಕಾದ ಸ್ಥಿತಿ ಇತ್ತು.

ಅಣ್ಣಮ್ಮನ ಮುಂದೆ ಸಾವು

ಗಾಂಧಿನಗರದ ಅಣ್ಣಮ್ಮ ದೇವಸ್ಥಾನ ಮುಂಭಾಗದಲ್ಲಿ ವ್ಯಕ್ಕಿಯೊಬ್ಬ ಮಳೆಗೆ ಬಲಿಯಾಗಿದ್ದಾವೆ. ಅತಿಯಾದ ಮಳೆಯಿಂಜ ಆತ ಕುಸಿದು ಬಿದ್ದು ಸತ್ತಿದ್ದಾನೆ ಎಂದು ಹೇಳಲಾಗಿದೆ. ಆತ ಮಳೆ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೋ ಅಥವಾ ವಿದ್ಯುತ್ ಶಾಕ್‌ನಿಂದ ಸತ್ತಿದ್ದಾನೋ ಎನ್ನುವುದು ಖಾತರಿಯಾಗಿಲ್ಲ. ಸಂಜೆ ಮಳೆ ಬಂದಾಗ ಈತ ಅಲ್ಲೇ ಮಲಗಿದ್ದು ನಂತರ ಮಳೆಯಿಂದ ರಸ್ತೆ ಜಲಾವೃತವಾಗಿದ್ದರಿಂದ ಆತ ಅಲ್ಲೇ ಮುಳುಗಿ ಸತ್ತಿರಬಹುದು ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದರು.

ಅವಾಂತರ ಹೇಗೆ ಎಲ್ಲಿ?
ಕೆಲವೆಡೆ ರಾಜಕಾಲುವೆ ಮುಚ್ಚಿದ್ದರಿಂದ ಮನೆಗಳಿಗೆ ನೀರು ನುಗ್ಗಿತು. ಸಂಪಂಗಿರಾಮನಗರ, ಡಬಲ್ ರಸ್ತೆ, ಶಾಂತಿನಗರ, ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆ, ಕುಮಾರಸ್ವಾಮಿ ಲೇಔಟ್, ಜಯನಗರ, ಜೆ.ಪಿ ನಗರ ಸೇರಿದಂತೆ ವಿವಿಧ ಪ್ರದೇಶ. ಕೆಲವೆಡೆ ರಾಜಕಾಲುವೆ ಮುಚ್ಚಿಹೋಗಿ ಮನೆಗಳಿಗೆ ನೀರು ನುಗ್ಗಿತು. ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ವಾಹನಗಳು ಚಲಿಸದೆ ನಿಂತವು. ಶಿವಾನಂದ ವೃತ್ತದಲ್ಲೂ ನೀರು ನುಗ್ಗಿ ವಾಹನಗಳು ಅಲ್ಲಲ್ಲಿ ನಿಂತು ಚಾಲಕರು ಮುಂದೆ ಹೋಗದೆ ಪರದಾಡಿದರು,

ಇನ್ನೂ 3 ದಿನ ಮಳೆ

ವಾಯುಭಾರ ಕುಸಿತದಿಂದ ನಗರದಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ. ಕನ್ಯಾ ಕುಮಾರಿ ಕೊಮಾರಿಯನ್‌ಗಳಲ್ಲಿ ಸುಳಿಗಾಳಿ ಕಾಣಿಸಿಕೊಂಡಿದೆ. ಇದರಿಂದ ವಾಯವ್ಯದ ಕಡೆಗೆ ಮಾರುತಗಳು ಸಾಗಿಬರುತ್ತಿವೆ. ಪರಿಣಾಮ ಕರಾವಳಿ ಮತ್ತಿತ್ತರ ಪ್ರದೇಶಗಳಲ್ಲಿ ಮಳೆಯಾಗಲಿದೆ. ಅನಂತರ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಚಾಮರಾಜನಗರ ಜಿಲ್ಲೆಯಿಂದ ಬೆಂಗಳೂರು ವರೆಗೆ ಧಾರಾಕಾರ ಮಳೆಯಾಗಲಿದೆ.

ದಾಖಲೆ ಮಳೆ ಅಲ್ಲ, ರಭಸ ಮಳೆ

ನಗರದಲ್ಲಿ ಸಂಜೆ 6 ಗಂಟೆಯ ನಂತರ ಸುರಿದ ಮಳೆ ದಾಖಲೆ ಏನೂ ನಿರ್ಮಿಸಿಲ್ಲ, ಆದರೆ ಕೇವಲ ಒಂದೂವರೆ ಗಂಟೆಯಲ್ಲಿ ಭಾರೀ ಮಳೆ ಸುರಿದಿದ್ದರಿಂದ ಹೆಚ್ಚು ಪ್ರವಾಹ ಉಂಟಾಗಿ ಪರಿಣಾಮ ಹೆಚ್ಚಾಗಿದೆ. ತಗ್ಗುಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಸಮಸ್ಯೆ ಹೆಚ್ಚಾಗಿದೆ. ಗುರುವಾರ ಸಂಜೆಯಿಂದ ರಾತ್ರಿ 8.30ರವರೆಗೂ ಸುಮಾರು 89.6 ಮಿ.ಮಿ ಮಳೆಯಾಗಿದೆ. ಆದರೆ 1998ರಲ್ಲಿ ಇದೇ ಸಮಯದಲ್ಲಿ 18 ಸೆ.ಮೀಟರ್ ಮಳೆಯಾಗಿತ್ತು. ಆದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಇಂಥ ಮಳೆ ಸರ್ವೆ ಸಾಮಾನ್ಯ ಎಂದು ಹವಾಮಾನ ಇಲಾಖೆ ನಿದೇಶಕ ಬಿ.ಪುಟ್ಟಣ್ಣ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.