

ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ ಕುನಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ಜಯಪ್ರಕಾಶ್ ಅವರ ಪುತ್ರಿ ಶುಭದ ಅವರನ್ನು ವರಿಸಿದ್ದಾರೆ.
ಎಚ್ ಡಿ ದೇವೇಗೌಡ ಪುತ್ರ ಬಾಲಕೃಷ್ಣೇಗೌಡ-ಕವಿತಾ ಅವರ ಪುತ್ರರಾಗಿರುವ ಕುನಾಲ್ ಅವರು, ಉದ್ಯಮಿ ಟಿ.ವಿ.ಜಯಪ್ರಕಾಶ್ ಮತ್ತು ತಾರಾಮಣಿ ಅವರ ಪುತ್ರಿ ಶುಭದ ಅವರನ್ನು ವರಿಸಿದ್ದಾರೆ.
ಕನಕಪುರ ರಸ್ತೆಯಲ್ಲಿರುವ ಜ್ಞಾನ ಸ್ವೀಕಾರ್ ಪಬ್ಲಿಕ್ ಶಾಲೆಯಲ್ಲಿ ಕುನಾಲ್-ಶುಭದ ಅವರ ವಿವಾಹ ಸಮಾರಂಭ ನಡೆದಿದ್ದು, ಕುಟುಂಬದ ಕೆಲವೇ ಬಹುಮುಖ್ಯ ಸ್ನೇಹಿತರು-ಬಂಧುಮಿತ್ರರ ಉಪಸ್ಥಿತಿಯಲ್ಲಿ ಸರಳವಾಗಿ ವಿವಾಹ ನೆರವೇರಿದೆ.
ಇದೇ ಏಪ್ರಿಲ್ 25ರಂದು ಬೆಂಗಳೂರಿನ ಅರಮನೆ ಮೈದಾನದ ಬೆಂಗಳೂರು ಮೇನ್ ಪ್ಯಾಲೆಸ್ (ವಸಂತನಗರ ಮುಖ್ಯದ್ವಾರ)ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ. ಕುಮಾರ ಸ್ವಾಮಿ, ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬಸ್ಥರು ಪಾಲ್ಗೊಳ್ಳುತ್ತಿದ್ದು, ದೇಶದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ.