

ಬೆಂಗಳೂರು: ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಬಿರಿಯಾನಿ ಡೆಲಿವರಿ ಬಾಯ್ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮತ್ತಿಕೆರೆ ನಿವಾಸಿ ಸಿ.ರಾಜು(27) ಮೃತರು. ಟನೆಯಲ್ಲಿ ಅಭಿಷೇಕ್ ಎಂಬಾತನಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿ 12.30ರ ಸುಮಾರಿಗೆ ಯಶವಂತಪುರದಿಂದ ಪೀಣ್ಯದ ಮನೆಯೊಂದಕ್ಕೆ ಬಿರಿಯಾನಿ ತಲುಪಿಸಲು ಬೈಕ್‍ನಲ್ಲಿ ರಾಜು ಹೋಗುತ್ತಿದ್ದ. ಅಬಿsಷೇಕ್ ಬೈಕ್ ಚಲಾಯಿಸುತ್ತಿದ್ದ, ರಾಜು ಹಿಂಬದಿ ಕುಳಿತಿದ್ದ. ಆರ್‍ಎಂಸಿ ಯಾರ್ಡ್ ಬಳಿ ರಸ್ತೆ ಗುಂಡಿಯಲ್ಲಿ ನಿಯಂತ್ರಣ ತಪ್ಪಿ ಇಬ್ಬರು ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ಅಭಿಷೇಕ್‍ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಡ ಕುಟುಂಬದ ರಾಜು ಬೆಳಗ್ಗೆ ಫ್ಲಿಟ್ ಕಾರ್ಟ್‍ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ, ರಾತ್ರಿ ಬಿರಿಯಾನಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.