

ಬೆಂಗಳೂರು: ಬಿಬಿಎಂಪಿಯನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಣೋತ್ಸಾಹದಲ್ಲಿರುವ ಬಿಜೆಪಿಯು ಭಾನುವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಕಳೆದ ಐದು ವರ್ಷಗಳಲ್ಲಿ ಬಿಬಿಎಂಪಿಯನ್ನು ಆಳಿದ ತಮ್ಮ ಪಕ್ಷ ಏನೆಲ್ಲಾ ಮಾಡಿದೆ, ರಾಜ್ಯ ಸರ್ಕಾರ ಬಿಜೆಪಿ ಕೈಯಲ್ಲಿದ್ದಾಗ ಬೆಂಗಳೂರಿಗೆ ಏನೆಲ್ಲಾ ಸಿಕ್ಕಿದೆ ಎಂಬುದನ್ನು ತಿಳಿಸಿಕೊಡುವ ಜೊತೆಗೆ ಮುಂದೆ ಅಧಿಕಾರ ಸಿಕ್ಕರೆ ಏನೆಲ್ಲಾ ಮಾಡುತ್ತೇವೆಂದು ವಿಸ್ತೃತವಾಗಿ ತಿಳಿಸಿದೆ.
ವಿಭಜನೆಯಲ್ಲ, ವಿಂಗಡಣೆ: ಬಿಬಿಎಂಪಿಯನ್ನು ವಿಭಜಿಸದೇ, ಆಡಳಿತದಲ್ಲಿ ಮಹತ್ವದ ವಿಕೇಂದ್ರೀಕರಣ ವ್ಯವಸ್ಥೆ ಮಾಡುವ ಇರಾದೆಯನ್ನು ಪ್ರಮಾಳಿಕೆ ವ್ಯಕ್ತಪಡಿಸಿದೆ. ಮೊಬೈಲ್ ಆಧರಿತ ಸೇವೆಗಳು, ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಸೇರಿದಂತೆ ಮೂಲಸೌಕರ್ಯಕ್ಕೆ ರು.5 ಸಾವಿರ ಕೋಟಿ ಖರ್ಚು ಮಾಡುವ ಮತ್ತು ಪ್ರತಿ 6 ತಿಂಗಳಿಗೂ ಶ್ವೇತಪತ್ರ ಹೊರಡಿಸುವ ಮಹತ್ವಾಕಾಂಕ್ಷೆ ವ್ಯಕ್ತವಾಗಿದೆ.
ಖಾಸಗಿ ಹೋಟೆಲ್ ನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಕೇಂದ್ರ ಕೇಂದ್ರ ಸಚಿವ ಅನಂತಕುಮಾರ್, ಬಿಜೆಪಿ ಚುನಾವಣಾ ಉಸ್ತುವಾರಿ ಆರ್.ಅಶೋಕ್, ಪಕ್ಷದ ವಕ್ತಾರ ಸುರೇಶ್ ಕುಮಾರ್, ಸಿ.ಟಿ.ರವಿ, ಅಶ್ವತ್ಥನಾರಾಯಣ, ಸುಬ್ಬ ನರಸಿಂಹ, ಮುನಿರಾಜು, ಮಾಳವಿಕ, ಪ್ರಕಾಶ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.
ಅನಂತಕುಮಾರ್ ಮಾತನಾಡಿ, ನಗರದ ಸ್ವಚ್ಛತೆ ಸುರಕ್ಷತೆಯ ಕುರಿತಂತೆ, ನಾಗರಿಕರ ಸಹಭಾಗಿತ್ವದಲ್ಲಿ ನಗರದ ವ್ಯವಸ್ಥೆಯನ್ನು ಸರಿದಾರಿಗೆ ತರುವುದಾಗಿ ಈ ವಚನ ಪತ್ರದಲ್ಲಿ ಹೇಳಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‍ಗೆ ಬಿಬಿಎಂಪಿ ಚುನಾವಣೆಗೆ ಪ್ರಣಾಳಿಕೆ ತರುವ ನೈತಿಕ ಅಧಿಕಾರವೇ ಇಲ್ಲ. ಮುಖ್ಯಮಂತ್ರಿಯವರು ಬೆಂಗಳೂರನ್ನು ವಿಭಜನೆ, ತ್ರಿಭಜನೆ, ಪಂಚಭಜನೆ ಮಾಡಿ ತುಂಡು ತುಂಡು ಮಾಡುವ ದುರುದ್ದೇಶ ಇಟ್ಟುಕೊಂಡಿದ್ದರು ಎಂದು ಟೀಕಿಸಿದರು.