

ಬೆಂಗಳೂರು: ಪರಿಸರ ಸಂಬಂಧಿತ ವಿಷಯಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ನ್ಯಾಯಾಲಯಗಳು ಸ್ಥಿರವಾದ ನೀತಿಯನ್ನು ರೂಪಿಸಬೇಕೆಂದು ಸಿಆರ್‍ಐಎಸ್‍ಪಿಯ ರಾಷ್ಟ್ರೀಯ ಅಧ್ಯಕ್ಷ ಕುಮಾರ್ ವಿ.ಜಹಗೀರದಾರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣಗಳ ವಿಲೇವಾರಿ ಕುರಿತಂತೆ ಕಾನೂನುಗಳಿಗೆ ತಿದ್ದುಪಡಿ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು. ಕಾನೂನು ತಿದ್ದುಪಡಿಯಲ್ಲಿ ಆರೋಪಿಗಳ ಬಂಧನಕ್ಕೆ 8 ವಾರದೊಳಗೆ ಅನುಮತಿ ನೀಡಬೇಕು. ಎಲ್ಲ ಆರೋಪ ಪಟ್ಟಿಯನ್ನು 6 ತಿಂಗಳಲ್ಲಿ ಮುಗಿಸಬೇಕು. ಎಲ್ಲ ನ್ಯಾಯಾಲಯದ ಕಲಾಪಗಳನ್ನು ದೃಶ್ಯ ಮತ್ತು ಶ್ರವಣದ ದಾಖಲಾತಿ ಮಾಡಿಕೊಳ್ಳಬೇಕು. ನ್ಯಾಯಾಂಗ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಸಾಧನ ಬಳಸಿಕೊಳ್ಳಬೇಕು. ಜಿಲ್ಲಾ ನ್ಯಾಯಾಧೀಶರಿಗೆ ಉಚ್ಚ ನ್ಯಾಯಾಲಗಳಿಗೆ ಬಡ್ತಿ ನೀಡಿ ಪ್ರಕರಣಗಳ ತ್ವರಿತ ವಿಚಾರಣೆಗೆ ಮುಂದಾಗಬೇಕು ಎಂದು ಹೇಳಿದರು.
ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಸರ್ಕಾರಿ ತನಿಖಾ ಸಂಸ್ಥೆಗಳ ಗುಣಮಟ್ಟ ಸುಧಾರಣೆಗೆ ಫೊರೆನ್ಸಿಕ್ ಪ್ರಯೋಗಾಲಯ ಸ್ಥಾಪನೆ ಮಾಡ ಬೇಕೆಂದು ಆಗ್ರಹಿಸಿದರು. ವಕೀಲ ಮೀರಾಭಾಯ್ ಪಡ್ಕೆ ಇದ್ದರು.