ಮಡದಿ ಮೋಸಕ್ಕೆ ಬೇಸತ್ತು ನೇಣಿಗೆ ಕೊರಳೊಡ್ಡಿದ ಪತಿ!

ಅವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆತ ಓದು ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಅವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆತ   ಓದು ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಸೇರಿಕೊಂಡು ಕುಟುಂಬ  ನಿಭಾಯಿಸತೊಡಗಿದ. ಅರೆಕಾಲಿಕ ಉಪನ್ಯಾಸಕಿಯಾಗಿದ್ದ ಆಕೆ ಐಎಎಸ್, ಕೆಎಎಸ್ ಮಾಡಲು ಕೋಚಿಂಗ್ ಪಡೆಯುವುದಾಗಿ ಹೇಳಿ, ಓದುವುದಕ್ಕಾಗಿಯೇ ಪಿಜಿ ಸೇರುವುದಾಗಿ  ಹೇಳಿ ಗಂಡನಿಂದ ದೂರವಾಗಿದ್ದಳು. ಆದರೆ, ಅಲ್ಲಿ ಮತ್ತೊಬ್ಬನನ್ನು ಮದುವೆಯಾಗಿ ಹೊಸ    ಸಂಸಾರ ಪ್ರಾರಂಭಿಸಿದ್ದಳು.

ಆದರೆ, ಈ ವಿಚಾರ ತಿಳಿದ ಗಂಡ, ಪ್ರೀತಿಸಿದ ಹೆಂಡತಿಯೇ ಮೋಸ ಮಾಡಿದಳೆಂದು  ಬೇಸತ್ತು, ಆಕೆಯ ವಿವಾಹಕ್ಕೆ ಶುಭ ಕೋರಿ ನೇಣುಹಾಕಿಕೊಂಡು ಆತ್ಮಹತ್ಯೆಯನ್ನೇ ಮಾಡಿಕೊಂಡ! ಹೌದು. ಇಂತಹ ಘಟನೆಯೊಂದು ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಬಾವಿ ಎನ್‍ಜಿಇಎಫ್ ಲೇಔಟ್ ನಿವಾಸಿ ಮುಕುಂದ (33) ಆತ್ಮಹತ್ಯೆಗೆ ಶರಣಾದ  ಬಡಪಾಯಿ ಪತಿ. ಅರೆಕಾಲಿಕ ಉಪನ್ಯಾಸಕಿಯಾಗಿ ಕೆಲಸ ಮಾಡು ತ್ತಿರುವ ಚೂಡಾಮಣಿ  ಪಿಜಿಯಲ್ಲಿರುವುದಾಗಿ ಹೇಳಿ, ಮತ್ತೊಬ್ಬನನ್ನು ವಿವಾಹವಾದವಳು. 

ಪಿಜಿ ಸೇರಿದ್ದಳು: ಪತಿಯ ಬಳಿ ಐಎಎಸ್-ಕೆಎಎಸ್ ಮಾಡುವ ಇಂಗಿತ ವ್ಯಕ್ತಪಡಿಸಿದ ಚೂಡಾಮಣಿ, `ಮನೆಯಲ್ಲಿದ್ದರೆ ನಿನ್ನ ಪ್ರೀತಿಯ ಕಾರಣದಿಂದ ಏಕಾಗ್ರತೆಯಿಂದ  ಓದಲಿಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ಪಿಜಿಯಲ್ಲಿದ್ದು, ಓದುತ್ತೇನೆ. ಆಗಾಗ ಬಂದು  ಹೋಗಿ  ಮಾಡುತ್ತೇನೆ. ನಾನೇನು ನಿನ್ನ ಸಂಪೂರ್ಣವಾಗಿ ತೊರೆದು ಹೋಗಲ್ಲ, ಗಾಬರಿಯಾಗಬೇಡ'  ಎಂದು  ವಿಶ್ವಾಸ ಬರುವಂತೆ ಮಾತನಾಡಿ ಗಂಡನಿಂದ ದುಡ್ಡು ಪಡೆದು ಪಿಜಿ ಸೇರಿಕೊಂಡಿದ್ದಳು.  

ಆದರೆ, ಪ್ರೀತಿ ಕುರುಡು ಎಂಬುವುದಕ್ಕೆ ಸಾಕ್ಷಿ ಎಂಬಂತೆ ಅಲ್ಲಿ ಆಕೆಯ ಹೃದಯವ ಕದವನ್ನು ಮತ್ತೊಬ್ಬ ತಟ್ಟಿಬಿಟ್ಟಿದ್ದ. ಬೇರೊಬ್ಬ ಯುವಕನ ಪ್ರೇಮಪಾಶದಲ್ಲಿ ಸಿಲುಕಿಕೊಂಡ ಅವಳು, ವಿಧಿಯಿಲ್ಲದೇ ಅವನನ್ನೂ ಮದುವೆಯಾದಳು. ಇಬ್ಬರು ಗಂಡಂದಿರಿಗೂ ಗೊತ್ತಾಗದಂತೆ  ಸಂಸಾರವನ್ನು ಚಾಣಾಕ್ಷತೆಯಿಂದ ನಿಭಾಯಿಸತೊಡಗಿದ್ದಳು. ಆದರೆ, ಸತ್ಯವನ್ನು ಬಹಳ ದಿನ   ಮುಚ್ಚಿಡಲು ಸಾಧ್ಯವಿಲ್ಲ ಎನ್ನುವ ಮಾತಿನಂತೆ ಕ್ರಮೇಣ ನಿಜ ಬಯಲಾಯಿತು. ಸತ್ಯ ಗೊತ್ತಾದ  ದಿನ ಅಮಾಯಕ ಮುಕುಂದ ತನ್ನ ಜೀವವನ್ನೇ ಬಲಿಕೊಡಲುನಿರ್ಧರಿಸಿಬಿಟ್ಟ. 

`ಹೆಚ್ಚು ಓದಿರುವ ಹುಡುಗಿಯನ್ನು ಮದುವೆಯಾಗೋದು ಒಳ್ಳೆಯದಲ್ಲ. ಅವಳು ಹೆಚ್ಚು ದಿನ ನಿನ್ನೊಂದಿಗೆ ಬಾಳ್ವೆ ಮಾಡೋದಿಲ್ಲ. ಒಂದಿಲ್ಲ ಒಂದು ದಿನ ಅವಳು ನಿನಗೆ ಕೈ ಕೊಡುತ್ತಾಳೆ  ಎಂದು ಅಪ್ಪ-ಅಮ್ಮ ಹೇಳಿದ್ದರು. ಅವರು ಹೇಳಿದ ಹಾಗೆಯೇ ಈಗ ನೀನು ನನ್ನ ಪ್ರೀತಿಗೆ ಮೋಸ ಮಾಡಿ ಬೇರೊಬ್ಬನನ್ನು ವಿವಾಹವಾಗಿರುವೆ. ನನ್ನ ಬದುಕಿಗೆ ಇವತ್ತೇ ಕೊನೆ ದಿನ. ಹೊಸ  ಗಂಡನೊಂದಿಗೆ  ನೀನಾದರೂ ಚೆನ್ನಾಗಿರು. `ಹ್ಯಾಪಿ ಮ್ಯಾರೀಡ್ ಲೈಫ್ ಎಂಬ ಡೆತ್‍ನೋಟ್  ಬರೆದಿಟ್ಟ  ಪತಿ,  ಬುಧವಾರ ನೇಣಿಗೆ ಕೊರಳೊಡ್ಡಿ ತನ್ನ ಬದುಕಿಗೆ ಇತಿಶ್ರೀ ಹಾಡಿದ್ದಾನೆ. ಈ ಸಂಬಂಧ   ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com