

ಬೆಂಗಳೂರು: ಸಿಮೆಂಟ್ ಮಿಶ್ರಣದ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಚಾಲಕ ಮೃತಪಟ್ಟು, ಹಿಂಬದಿ ಸವಾರ ಆತನ ಸಹೋದರ ಗಾಯಗೊಂಡಿರುವ ಘಟನೆ ಮಂಗಳವಾರ ತಡರಾತ್ರಿ ಮಡಿವಾಳ ಕೆರೆ ರಸ್ತೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಲ ಮೂಲದ ಮಾಂಟು ಸೆರನ್ (29) ಮೃತಪಟ್ಟಿದ್ದು, ನೆಫ್ರಿನ್ ಸೆರನ್(21) ಗಾಯಗೊಂಡಿದ್ದಾರೆ. ಇಬ್ಬರು ಸಹೋದರರು ಚಿಕ್ಕಲ್ಲಸಂದ್ರ ಬಾಡಿಗೆ ಮನೆಯಲ್ಲಿ ವಾಸವಿದ್ದರು.ವೈಟ್‍ಫೀಲ್ಡ್ ನಲ್ಲಿರುವ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಇಬ್ಬರೂ ಕೆಲಸ ಮಾಡುತ್ತಿದ್ದರು.
ಮಂಗಳವಾರ ವೈಟ್ ಫೀಲ್ಡ್ ನಲ್ಲಿ ಕೆಲಸ ಮುಗಿಸಿದ ಸಹೋದರರು ರಾತ್ರಿ 9.30ರಲ್ಲಿ ತಮ್ಮ ಪಲ್ಸರ್ ಬೈಕ್ ನಲ್ಲಿ ಚಿಕ್ಕಲ್ಲಸಂದ್ರದ ಮನೆಗೆ ವಾಪಸಾಗುತ್ತಿದ್ದರು. ಮಡಿವಾಳ ಕೆರೆ ರಸ್ತೆಯಲ್ಲಿ ಬರುತ್ತಿರುವಾಗ ಸೂರ್ಯ ಕನ್‍ಸ್ಟ್ರಕ್ಷನ್‍ಗೆ ಸೇರಿದ ಸಿಮೆಂಟ್ ಮಿಶ್ರಣ ಲಾರಿ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್ ಚಾಲಕ ಮಾಂಟು ಸೆರೆನ್ ಮೇಲೆ ಲಾರಿ ಚಕ್ರ ಹರಿದಿದ್ದರಿಂದ ಆಸ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ನೆಫ್ರಿನ್ಸೆರನ್ ಗಾಯಗೊಂಡಿದ್ದಾನೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರಿಂದ ನೆಫ್ರಿನ್ ಪ್ರಾಣಾಪಾಯದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಘಟನೆಯಿಂದ ಗಾಬರಿಗೊಂಡ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮೈಕೋ ಲೇ ಔಟ್ ಸಂಚಾರ ಠಾಣೆ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಚಾಲಕನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.