

ಕನಕಪುರ/ಗುಂಡ್ಲುಪೇಟೆ: ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಗುರುವಾರ ಇಬ್ಬರು ರೈತರು ಮೃತಪಟ್ಟಿದ್ದಾರೆ. ಕನಕಪುರದ ಆಲಹಳ್ಳಿಯ ಮಹದೇವನಾಯ್ಕ (61), ದೊಡ್ಡಬಳ್ಳಾಪುರದ ದೊಡ್ಡಹುಂಡಿಯ ಮಹದೇವಸ್ವಾಮಿ (45) ಮೃತ ರೈತರು.
ಬುಧವಾರ ರಾತ್ರಿ ಮಹದೇವನಾಯ್ಕ ಅವರು ರಮೇಶ್ ಎಂಬವರ ಜತೆಗೆ ಹೊಲ ಕಾಯಲು ಹೋಗಿದ್ದರು. ಆಗ ಕಾಡಾನೆ ದಿಢೀರ್ ದಾಳಿ ಮಾಡಿದೆ. ಈ ವೇಳೆ ರಮೇಶ್ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ, ದುರದೃಷ್ಟವಶಾತ್ ಜಾಸ್ತಿ ದೂರ ಓಡಲಾಗದ ಮಹದೇವನಾಯ್ಕ ಆನೆ ದಾಳಿಗೆ ಒಳಗಾಗಿದ್ದಾರೆ. ರಮೇಶ್ ಗ್ರಾಮಸ್ಥರನ್ನು ಕರೆತರುವ ವೇಳೆಗಾಗಲೇ ಮಹದೇವ ನಾಯ್ಕ ಅವರು ಆನೆ ಕಾಲ್ತುಳಿತಕ್ಕೆ ಬಲಿಯಾಗಿದ್ದರು.
ಪ್ರತಿಭಟನೆ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ಸಕಾಲಕ್ಕೆ ಸ್ಥಳಕ್ಕೆ ಆಗಮಿಸದಿದ್ದ ಕಾರಣ ಮಹದೇವ ನಾಯ್ಕ ಅವರ ಮುಂದಿಟ್ಟು ಗ್ರಾಮಸ್ಥರು ಕೆಲಕಾಲ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಹಲ್ಲೆಗೂ ಮುಂದಾದರು. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು.
ಇನ್ನು ಮಹದೇವಸ್ವಾಮಿ ಅವರು ಪತ್ನಿ ರಾಣಿ ಜತೆಗೆ ಗುರುವಾರ ಮುಂಜಾನೆ ದೊಡ್ಡ ಹುಂಡಿ ಚೆನ್ನವಡೆಯನಪುರ ರಸ್ತೆಯ ಬಳಿ ಇರುವ ಜಮೀನಿನಲ್ಲಿದ್ದ ಹತ್ತಿ ಬಿಡಿಸಲು ಹೋಗಿದ್ದರು. ಈ ವೇಳೆ ಜಮೀನಿಗೆ ನುಗ್ಗಿದ ಒಂಟಿ ಸಲಗ ದಂಪತಿ ಮೇಲೆ ದಾಳಿ ನಡೆಸಿದೆ. ಮಹದೇವಸ್ವಾಮಿ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದಿದೆ. ಗಂಭೀರ ಗಾಯಗೊಂಡ ಮಹದೇವಸ್ವಾಮಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.