ಜಿಲ್ಲಾ ಸುದ್ದಿ

ಲೋಕಾಯುಕ್ತ ಬಡವರಿಗೆ ಬೇಕು

ಲೋಕಾಯುಕ್ತ ಬಡವರಿಗೆ ಬೇಕು
ಲೋಕಾಯುಕ್ತದ ಏಳು ಬೀಳು ಕೃತಿ ಬಿಡುಗಡೆ (ಕೃಪೆ ಕೆಪಿಎನ್ )
Published On :
ಬೆಂಗಳೂರು:  ದೇಶದಲ್ಲಿಯೇ ಉತ್ತಮ ಹೆಸರಿದ್ದ ಕರ್ನಾಟಕ ಲೋಕಾಯುಕ್ತ ಅಧಃಪತನ ಕಂಡಿದ್ದು ಈ ಸಂಸ್ಥೆ  ಶ್ರೀಮಂತರಿಗೆ, ಅಧಿಕಾರಿಗಳಿಗೆ ಬೇಡವಾಗಿದೆ.  ಆದರೆ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಲು  ಅಗತ್ಯವಾಗಿ ಬೇಕಾಗಿದೆ ಎಂದು ನಿವೃತ್ತ  ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ  ಅಭಿಪ್ರಾಯಪಟ್ಟರು. ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ನಡೆದ  ಕಾರ್ಯಕ್ರಮದಲ್ಲಿ `ಕರ್ನಾಟಕ ಲಾ ಜರ್ನಲ್  ಪಬ್ಲಿಕೇಶನ್ಸ್ ' ಹೊರತಂದಿರುವ ಡಾ.ಅಬ್ದುಲ್  ಹಕೀಂ ರಚನೆಯ `ಲೋಕಾಯುಕ್ತದ ಏಳು ಬೀಳು' ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.  ಕರ್ನಾಟಕ ಲೋಕಾಯುಕ್ತ ಕಾಯಿದೆ ಏನೋ ಚೆನ್ನಾಗಿದೆ. ಆ ಸ್ಥಾನದಲ್ಲಿ ಬಂದು ಕೂರುವವರ  ಮೇಲೆ ಅದರ ಮೌಲ್ಯ ನಿರ್ಧಾರವಾಗುತ್ತದೆ.  ಲೋಕಾಯುಕ್ತದಲ್ಲೂ ಭ್ರಷ್ಟಾಚಾರ ಇತ್ತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಲ್ಲಿ ಕೆಲಸ ಮಾಡುವ ಶೇ. 75 ರಷ್ಟು ಅಧಿಕಾರಿಗಳು ಎರವಲಾಗಿ ಬಂದವರೆ. ಬರುವ ಮುನ್ನ ಭ್ರಷ್ಟಾಚಾರದ ರೋಗ  ಅಂಟಿಕೊಂಡಿರುತ್ತದೆ. ಒಂದು ಕಾಲದಲ್ಲಿ ಬಲಿಷ್ಠವಾಗಿದ್ದ ಈ ಸಂಸ್ಥೆಯನ್ನು ಶ್ರೀಮಂತರು ಮತ್ತು ಅಧಿಕಾರಿಗಳು ನಾಶಪಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು. ಇವತ್ತಿನ ಪ್ರತಿಯೊಂದು ಸಮಸ್ಯೆಗೂ ಸಮಾಜವೇ  ಕಾರಣ. ಅ„ಕಾರ ಮತ್ತು ಶ್ರೀಮಂತಿಕೆಯನ್ನು ಪೂಜಿಸುವವರು ನಮ್ಮ ಸಮಾಜದಲ್ಲಿದ್ದಾರೆ.  ಭ್ರಷ್ಟಾಚಾರದ ವಿರುದ್ಧ ಕಡಿಮೆ ಮಾತನಾಡುತ್ತಾರೆ.  ಅದೆಲ್ಲವನ್ನು ಸಮಾಜ ಸಹಿಸಿಕೊಂಡು ಹೋಗುತ್ತಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ  ನ್ಯಾ. ಭಾಸ್ಕರ್  ರಾವ್ ಅವರ ರಾಜಿನಾಮೆಯನ್ನು ಸರ್ಕಾರ ಅಂಗೀಕರಿಸಬಾರದಿತ್ತು. ಏಕೆಂದರೆ ಜೈಲಿಗೆ ಹೋಗುತ್ತೇನೆ ಎಂಬ ಭಯದಿಂದಲೇ ಅವರು ರಾಜಿ ನಾಮೆ ನೀಡಿದರು. ಈ ವ್ಯಕ್ತಿಯನ್ನು ನೇಮಿಸುವಾಗ
ರಾಜ್ಯವಕೀಲರ ಸಂಘ ಠರಾವು ಹೊರಡಿಸಿ ಭಾಸ್ಕರ್  ರಾವ್ ಬೇಡ ಎನ್ನುವ ಅಕ್ಷೇಪವನ್ನು ವ್ಯಕ್ತಪಡಿಸಿತ್ತು. ಆದರೆ ಅದನ್ನು ಏಕೆ ತಿರಸ್ಕರಿಸಲಾಯಿತು ಎಂಬುದನ್ನು
ರಾಜ್ಯದ ಜನರ ಮುಂದಿಡಬೇಕು ಎಂದು ಸಂತೋಷ್  ಹೆಗ್ಡೆ ಆಗ್ರಹಿಸಿದರು.  ಅಧ್ಯಕ್ಷತೆ ವಹಿಸಿದ್ದ ಮಾಜಿ ರಾಜ್ಯಪಾಲ ಡಾ.ಎಂ.ರಾಮ್ ಜೋಯಿಸ್ ಮಾತನಾಡಿ, ಲೋಕಾಯುಕ್ತ  ಸಂಸ್ಥೆ ಮೇಲಿದ್ದ ವಿಶ್ವಾಸವೆಲ್ಲ ಈಗ ಹೋಗಿ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಅಡ್ಡದಾರಿ ಹಿಡಿಯದಂತಹ  ವ್ಯಕ್ತಿಯನ್ನು ನೇಮಿಸುವಂತಾಗಬೇಕು. ಜ್ಞಾನ  ಮತ್ತು ಚಾರಿತ್ರ್ಯ ಇರುವವರು ಬಂದರೆ ಸಮಾಜ  ಸೇವೆ ಮಾಡಬಹುದು. ಈಗ ಉದ್ಭವಿಸಿರುವ ಸಮಸ್ಯೆಯನ್ನು ಹಗುರವಾಗಿ ತೆಗೆದುಕೊಳ್ಳುವುದು  ಬೇಡ. ತೆಗೆದುಕೊಂಡರೆ ಮುಂದಿನ ಪೀಳಿಗೆ ದಾರಿ  ತಪ್ಪುವ ಸಾಧ್ಯತೆ ಇದೆ ಎಂದರು. ಕೃತಿಯ ಕರ್ತೃ ಡಾ. ಅಬ್ದುಲ್ ಹಕೀಂ, ಹಿರಿಯ ಪತ್ರಕರ್ತ ಮಂಜುನಾಥ ಅದ್ದೆ, ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್ ಉಪಸ್ಥಿತರಿದ್ದರು.
ಸೈದಾಂತಿಕ  ಜನಾಂದೋಲನ ಆಗಬೇಕು
ಇತ್ತೀಚಿನ ದಿನಗಳಲ್ಲಿ ಹಿರೋಯಿಸಂ ಮತ್ತು  ಪುಢಾರಿತನ ಕಾಣಿಸುತ್ತಿದ್ದು, ನಾಯಕತ್ವ  ಗಟ್ಟಿಯಾಗಿ ಕಾಣಿಸುತ್ತಿಲ್ಲ. ಮಾತು ಮಲಿನವಾಗುತ್ತಿದ್ದು, ಸಂಘಟಿಸುವ  ನಾಯಕತ್ವಕ್ಕಿಂತ ಜನರನ್ನೇ ಹಿಂಬಾಲಿಸುವಂತೆ  ಮಾಡುವ ನಾಯಕತ್ವ ಹೆಚ್ಚಾಗಿದೆ. ಆ ನಾಯಕತ್ವಕ್ಕೆ ಭಾವವಿಲ್ಲ, ಭಾಷೆಯಿಲ್ಲ. ನೈತಿಕ ಅಧಃಪತನ ತಲುಪುತ್ತಿರುವ ಈ ಸಮಾಜವನ್ನು ಮೇಲೆತ್ತಲು ಜನರು ಸಿದ್ಧರಿದ್ದಾರೆ. ಅವರಿಗೆ ಸರಿಯಾದ  ಮಾರ್ಗದರ್ಶನ ತೋರಲು ನಾಯಕರ ಕೊರತೆ ಇದೆ. ಜಯಪ್ರಕಾಶ್ ನಾರಾಯಣ್ ಚಳವಳಿ ಮತ್ತು ಜನ ಲೋಕಪಾಲ್ ಚಳವಳಿ ಜನರಲ್ಲಿ ವಿಶ್ವಾಸ ಮೂಡಿಸಿದರೂ ಸಹ ಅವುಗಳ ಒಳಗಿದ್ದ ಆಂತರಿಕ ವೈರುಧ್ಯಗಳು, ಶಿಥಿಲ ಸಮುದಾಯ  ಚಳವಳಿಯನ್ನು ಹಾಳು ಮಾಡಿದವು. ಜೆಪಿ ತನ್ನ ಹಿಂಬಾಲಕರಿಗೆ ಜಾತಿ ಬಿಡಿ ಎಂದಾಗ ಆ ವೇದಿಕೆಯಲ್ಲೇ ಆಕ್ಷೇಪ ವ್ಯಕ್ತವಾಯಿತು. ಅಣ್ಣಾ ಹಜಾರೆ ಜತೆಯಲ್ಲಿದ್ದ ಕೇಜ್ರಿವಾಲ್ ವಿದೇಶದಿಂದ ಹರಿದು ಬಂದ 9 ಲಕ್ಷ ಡಾಲರ್ ಲೆಕ್ಕವನ್ನು  ಮುಚ್ಚಿಟ್ಟಿದ್ದು, ಶಿಥಿಲ ಸಮುದಾಯಕ್ಕೆ  ಸಾಕ್ಷಿಗಳಾಗಿವೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ
ಸೈದಾಂತಿಕ ಜನಾಂದೋಲನ ಆರಂಭವಾದರೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.