

ಬೆಂಗಳೂರು: ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಂತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದೆ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆಂಬ ಕಾರಣಕ್ಕೆ ಹೊಸ ಮದ್ಯದಂಗಡಿಗಳಿಗೆ ಅನುಮತಿ ಪ್ರಸ್ತಾಪವನ್ನು ಮುಂದೂಡುತ್ತಲೇ ಬಂದಿದ್ದ ಸರ್ಕಾರ, ಇದೀಗ ಏಕಾಏಕಿ 1750 ಹೊಸ ಮೇದ್ಯದಂಗಡಿಗೆ ಅನುಮತಿ ನೀಡಲು ಸಜ್ಜಾಗಿದೆ. ಈ ಬೆಳವಣಿಗೆಯನ್ನು ಸಾರ್ವಜನಿಕರು, ಸಂಘಸಂಸ್ಥೆಗಳು, ಪ್ರತಿಪಕ್ಷ-ಗಳು ತೀವ್ರವಾಗಿ ಟೀಕಿಸಿವೆ.
ಕುಡಿಯುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ, ಆದರೆ ಸರ್ಕಾರದ ಆದಾಯದಲ್ಲಿ ಸೋರಿಕೆಯಾಗುತ್ತಿದೆ. ಇದಕ್ಕೆ ತಡೆ ಒಡ್ಡುವುದಕ್ಕಾಗಿಯಾದರೂ ಹೊಸ ಮದ್ಯದ ಅಂಗಡಿ ಮತ್ತು ಬಾರ್‍ಗಳಿಗೆ ಪರವಾನಗಿ ನೀಡಲು ಸರ್ಕಾರ ಚಿಂತಿಸುತ್ತಿದೆ ಎಂದು ಸ್ವತಃ ಮುಖ್ಯ-ಮಂತ್ರಿ ಹೇಳಿದ್ದಾರೆ. ಇನ್ನೊಂದೆಡೆ ಅಬಕಾರಿ ಖಾತೆ ವಹಿಸಿಕೊಂಡ ಮನೋಹರ ತಹಶೀಲ್ದಾರ್ ಅವರು, ಹೊಸ ಮದ್ಯದಂಗಡಿ ಅನುಮತಿ ನೀಡುವ ನಮ್ಮ ಇಂಗಿತವನ್ನು ಈಗಾಗಲೇ ಹೊರಹಾಕಿದ್ದರು. ಇದೀಗ ಸಚಿವರ ಇಂಗಿತಕ್ಕೆ ಮುಖ್ಯಮಂತ್ರಿಯವರು ದನಿಗೂಡಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಹೊಸ ಮದ್ಯದಂಗಡಿಗೆ ಅನುಮತಿ ಕೊಟ್ಟಿಲ್ಲ. ಇದಕ್ಕೆ ಪ್ರಮುಖ ಕಾರಣ, ಹೊಸದಾಗಿ ಮದ್ಯದಂಗ-ಡಿಗೆ ಅನುಮತಿ ನೀಡಿದರೆ ಸಾರ್ವಜನಿಕ ವಲಯದಲ್ಲಿ ಟೀಕೆಗೊಳಗಾಗಬೇಕಾಗುತ್ತದೆ ಮತ್ತು ಒಂದು ವರ್ಗದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಅಧಿಕಾರಕ್ಕೆ ಬಂದ ಮೂರು ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಮೌನ ವಹಿಸಿದ್ದವು. ಅಬಕಾರಿ ಇಲಾಖೆ ಮಾತ್ರ ಕಳೆದ 23 ವರ್ಷಗಳಿಂದ ಹೊಸ ಮದ್ಯದಂಗಡಿಗೆ ಅನು-ಮತಿ-ಕೊಡದೇ ಇರುವ ಕಾರಣ ಬೇಡಿಕೆ ಹೆಚ್ಚಿದ್ದು, ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಇಡುತ್ತಲೇ ಬಂದಿತ್ತು. ಈ ಹಿಂದೆ ಅಬಕಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ-ಯವರು 900 ಹೊಸ ಲೈಸೆನ್ಸ್ ನೀಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರಾದರೂ ಸಿಎಂ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಇದೀಗ ಮುಖ್ಯಮಂತ್ರಿಯವರು ಏಕಾಏಕಿ ನಮ್ಮ ಹಿಂದಿನ ನಿಲುವಿಗೆ ರಿಯಾಯಿತಿ ತೋರಿಸಿ ಹೊಸ ಲೈಸೆನ್ಸ್ ವಿತರಿಸಲು ಆಸಕ್ತಿ ತೋರ್ಪಡಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಹೊಸ ಮದ್ಯದಂಗಡಿಗೆ ಅನುಮತಿ ನೀಡುವ ಚಿಂತನೆಯನ್ನು ಮುಖ್ಯ-ಮಂತ್ರಿ ಹೊರಹಾಕುತ್ತಿದ್ದಂತೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಹೆಚ್ಚೆಚ್ಚು ಮದ್ಯದಂಗಡಿಗೆ ಅನುಮತಿ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವುದು ಸರಿಯಲ್ಲ, ಸರ್ಕಾರ ಕೂಡಲೇ ತನ್ನ ಮಾತನ್ನು ಹಿಂಪಡೆಯಬೇಕೆಂಬ ಕೂಗು ಕೇಳಿಬಂದಿದೆ. ಇನ್ನೊಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ಸಹ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ಬೇಕೆಂದು ಮದ್ಯದಂಗಡಿಗೆ ಲೈಸೆನ್ಸ್ ಕೊಡಲು ಮುಂದಾಗಿರುವುದು ಖಂಡನಾರ್ಹ ಎಂದರು. ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ಸಹ ಸರ್ಕಾರದ ನಿಲುವನ್ನು ಟೀಕಿಸಿದೆ.
2014-15ನೇ ಸಾಲಿನಲ್ಲಿ 13800 ಕೋಟಿ ರೂಪಾಯಿ ಇದ್ದ ಅಬಕಾರಿ ಆದಾಯ-ವನ್ನು ಈ ವರ್ಷ 15200 ಕೋಟಿಗೆ ಏರಿಸುವ ಉದ್ದೇಶದಿಂದ ಸರ್ಕಾರ ಕ್ರಮಕೈ-ಗೊಂಡಿ-ರುವುದು ಆಘಾತಕಾರಿಯಾದದ್ದು ಎಂದು ಅಭಿಪ್ರಾಯಪಟ್ಟಿದೆ. ಸರ್ಕಾರದ ಕ್ರಮ ಸರ್ವಥಾ ಸಮ್ಮತವಲ್ಲ. ಸಮಾಜ ಹಾಗೂ ನಾಗರಿಕರ ಸ್ವಾಸ್ಥ್ಯವನ್ನು ಹಾಳುಗೆಡವುವ ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳಿಗೆ ಕಾರಣವಾಗಿಯೂ ಖಜಾನೆ ತುಂಬಿಸಿಕೊಳ್ಳುವ ಸರ್ಕಾ-ರದ ಇಂಗಿತ ಖಂಡನೀಯ ಎಂದು ಸಂಘಟನೆ ಆರೋಪಿಸಿದೆ.