

ಬೆಂಗಳೂರು: ಬೆಂಗಳೂರಿನ ಕಸದಿಂದ ವಿದ್ಯುತ್ ಉತ್ಪಾದನೆಗೆ ಪೋಲ್ಯಾಂಡ್ ಮೂಲದ ಕಂಪನಿ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಪ್ರತಿ ದಿನ 400 ಟನ್ ಕಸದಿಂದ 4 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಿದ್ದು, ಸುಮಾರು ರು.350 ಕೋಟಿ ವೆಚ್ಚದ ಯೋಜನೆ ಇದಾಗಿದೆ.
ಗುರುವಾರ ಖಾಸಗಿ ಹೋಟೆಲೊಂದರಲ್ಲಿ ಎಕೋಲಾಗ್ ಕಂಪನಿ ನಿರ್ದೇಶಕ ರಾಬರ್ಟ್ ಜಾನ್ಸ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಾಪ್ರಭ ಒಪ್ಪಂದಕ್ಕೆ ಸಹಿ ಹಾಕಿದರು.
ಎಕೋಲಾಗ್ ಕಂಪನಿ ನಿರ್ದೇಶಕ ರಾಬರ್ಟ್ ಜಾನ್ಸ್ ಮಾತನಾಡಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‍ಎಸ್‍ಬಿ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ನಗರದ ಹೊರವಲಯದಲ್ಲಿ ಕಸ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ತೆರೆಯಲು ಅನುಮತಿ ನೀಡಿವೆ ಎಂದು ಹೇಳಿದರು.
ಕ್ಲೀನ್ ಟೆಕ್ನಾಲಜಿ ವಲಯದಲ್ಲಿ ಸುಮಾರು 50 ಮಿಲಿಯನ್ ಡಾಲರ್ ಬಂಡವಾಳ ಹೂಡಲಾಗುತ್ತಿದೆ. ಬೆಂಗಳೂರಿನ ತ್ಯಾಜ್ಯ ಬಳಕೆಯಿಂದ ನಿತ್ಯ 400 ಟನ್ ತ್ಯಾಜ್ಯ ಬಳಸಿ 4 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ತಿಳಿಸಿದರು. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಪರಿಶುದಟಛಿ ವಾತಾವರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಾತ್ರವಲ್ಲ, ಕಾಳಜಿ ವಹಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದರು.