

ಬೆಂಗಳೂರು: ಲೋಕಾಯುಕ್ತ ಆಯ್ಕೆ ಪ್ರಕ್ರಿಯೆ ಎರಡು ವಾರಗಳ ಕಾಲ ಮುಂದಕ್ಕೆ ಹೋಗಿದೆ. ಹೊಸ ವರ್ಷದಲ್ಲಿ ಹೊಸ ಲೋಕಾಯುಕ್ತರ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಲಿದೆ.
ಜೊತೆಗೆ ನೂತನ ಲೋಕಾಯುಕ್ತರ ರೇಸ್‍ನಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ.ವಿಕ್ರಂಜಿತ್ ಸೇನ್, ಸಿರಿಯಾಕ್ ಜೋಸೆಫ್ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಈ ಮಧ್ಯೆಯೇ ಎಸ್.ಆರ್.ನಾಯಕ್ ಅವರು ಹೆಸರೂ ಕೂಡ ತೇಲಿಬಂದಿದೆ.
ಪೂರ್ವ ನಿಗದಿಯಂತೆ ನೂತನ ಲೋಕಾಯುಕ್ತರ ಆಯ್ಕೆ ಸಂಬಂಧ ಉನ್ನತ ಮಟ್ಟದ ಸಭೆ ಸೋಮವಾರ ನಡೆಯಬೇಕಾಗಿತ್ತು. ಆದರೆ, ಮುಖ್ಯಮಂತ್ರಿ, ವಿಪಕ್ಷ ನಾಯಕರು ವಿಧಾನಪರಿಷತ್ ಚುನಾವಣೆಯಲ್ಲಿ ತೊಡಗಿದ್ದಾರೆ. ಈ ಕಾರಣದಿಂದ ಸಭೆಯನ್ನು ಮುಂದೂಡಲಾಗಿದೆ. ಜನವರಿ ಮೊದಲ ವಾರದಲ್ಲಿ ನಡೆಯುವ ಸಭೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಮುಖ್ಯಮಂತ್ರಿ, ಎರಡೂ ಸದನಗಳ ಸಭಾಧ್ಯಕ್ಷ ಸಭಾಪತಿಯವರು, ಪ್ರತಿಪಕ್ಷ ನಾಯಕರು ಹೊಸ ಲೋಕಾಯುಕ್ತರನ್ನು ಆಯ್ಕೆ ಮಾಡುವರು.
ಸಭೆ ಮುಂದಕ್ಕೆ: ಡಿಸೆಂಬರ್ 21ರಂದು ಸಭೆ ನಿಶ್ಚಯವಾಗಿತ್ತು, ನಂತರ 28ರಂದು ಸಭೆ ನಡೆಯುವುದೆಂದು ತೀರ್ಮಾನವಾಗಿತ್ತು. ಅಂತಿಮವಾಗಿ ಜನವರಿ ಮೊದಲ ವಾರದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ರಾಜ್ಯ ಉಚ್ಚ ನ್ಯಾಯಾಲಯದಿಂದ ಬರಬೇಕಾಗಿದ್ದ ಆಯ್ಕೆ ಪಟ್ಟಿ ಈ ವರೆಗೆ ಬಂದಿಲ್ಲ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.