

ಬೆಂಗಳೂರು: ರಾಜ್ಯ ಸರ್ಕಾರವು ನಾಲ್ಕನೇ ಹಣಕಾಸು ಆಯೋಗ ರಚಿಸಿದ್ದು, ಸಿ.ಜಿ.ಚಿನ್ನಸ್ವಾಮಿ ಆಯೋಗದ ನೇತೃತ್ವ ವಹಿಸಲಿದ್ದಾರೆ. ಇವರೊಂದಿಗೆ ಎಚ್.ಡಿ.ಅಮರನಾಥ್ ಹಾಗೂ ಡಾ.ಶಶಿಧರ್ ಆಯೋಗದ ಸದಸ್ಯರಾಗಿ ಕರ್ತವ್ಯ ನಿರ್ವಹಿಸುವರು.
ಆಯೋಗದ ಪ್ರಮುಖ ಜವಾಬ್ದಾರಿಯೆಂದರೇ ಪಂಚಾಯಿತಿ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಹಣಕಾಸಿನ ಪಾಲುಗಳ ಅನುಪಾತ ಮತ್ತು ಪ್ರಮಾಣವನ್ನು ನಿರ್ಧರಿಸಲಿದೆ. ಜೊತೆಗೆ ಅನುಷ್ಟಾನಕ್ಕೆ ಸಂಬಂಧಿಸಿ ಸರಕಾರಕ್ಕೆ ಸಲಹೆಗಳನ್ನು ನೀಡುವುದು. ಇಷ್ಟೇ ಅಲ್ಲದೇ ಸ್ಥಳೀಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳ ಸದ್ಭಳಕೆ ಕುರಿತು ಮಾರ್ಗದರ್ಶನ ಮಾಡಲಿದೆ.
ಜೊತೆಗೆ ಕಾಲಕಾಲಕ್ಕೆ ಸರ್ಕಾರದಿಂದ ಸಾಲ, ಮುಂಗಡ ಮರುಪಾವತಿ ಪಡೆದ ಸ್ಥಳೀಯ ಸಂಸ್ಥೆಗಳಿಗೆ ಆಗಿಂದಾಗೆ ವಿಶ್ಲೇಷಣೆ ಮಾಡಲಿದೆ. 2016ರ ಮೇ 31ರೊಳಗೆ ಆಯೋಗವು ಸರ್ಕಾರಕ್ಕೆ ತನ್ನ ವರದಿಯನ್ನು ಒದಗಿಸಬೇಕಿದ್ದು, ಈ ವೇಳೆ ಸರ್ಕಾರದ ಆರ್ಥಿಕ ಸಂಪನ್ಮೂಲ ಮತ್ತು ಹಣಕಾಸು ಬೇಡಿಕೆ ಕುರಿತಾಗಿಯೂ ಶಿಫಾರಸುಗಳನ್ನು ಮಾಡಲಿದೆ.
ಎ.ಜಿ.ಕೂಡ್ಗಿ ನೇತೃತ್ವದ 3ನೇ ಹಣಕಾಸು ಆಯೋಗವು ಪಂಚಾಯತ್ ರಾಜ್ ಕ್ಷೇತ್ರಕ್ಕೆ ಒತ್ತು ನೀಡಲು ವಿಶೇಷ ಪ್ರಯತ್ನ ನಡೆಸಿತ್ತು. ತಾಲೂಕು ಪಂಚಾಯಿತಿಗೆ 2-3 ಕೋಟಿ ಹಾಗೂ ಜಿಲ್ಲಾ ಪಂಚಾಯಿತಿಗೆ 5 ಕೋಟಿ ವಿಶೇಷ ಅಭಿವೃದ್ಧಿ ಅನುದಾನ ನೀಡುವಂತೆಯೂ ಶಿಫಾರಸ್ಸು ಮಾಡಿತ್ತು