ಮಂಗಳೂರು: ನಗರದ ಹೊರವಲಯದ ಪಂಜಿಮೊಗರು ಎಂಬಲ್ಲಿ ಭಾನುವಾರ ರಾತ್ರಿ 16 ವರ್ಷದ ಅಪ್ರಾಪ್ತೆ ಮೇಲೆ ಐವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕುಂಜತ್ತಬೈಲಿನ ಪ್ರಶಾಂತ್ ಶೆಟ್ಟಿ (23), ಪಂಜಿ ಮೊಗರು-ಉರುಂದಾಡಿ ನಿವಾಸಿಗಳಾದ ನೌಫಾಲ್ (20), ಸಲ್ಮಾನ್ (20), ಸುರೇಶ್ (20) ಬಂಧಿತ ಆರೋಪಿಗಳು. ಎಲ್ಲರನ್ನೂ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಪ್ರಾಪ್ತನಾಗಿದ್ದು, ತನಿಖೆ ನಡೆಯುತ್ತಿದೆ.
ಪ್ರೀತಿಸುವ ನಾಟಕ: ಪ್ರಮುಖ ಆರೋಪಿ ಪ್ರಶಾಂತ್ ಶೆಟ್ಟಿ ಯುವತಿಯ ನೆರೆಮನೆ ನಿವಾಸಿಯಾಗಿದ್ದು, ಕಳೆದ ಕೆಲವು ಸಮಯದಿಂದ ಪ್ರೀತಿಸುವಂತೆ ಆಕೆಯನ್ನು ಪೀಡಿಸುತ್ತಿದ್ದ. ಯುವತಿ ತೀವ್ರ ಪ್ರತಿರೋಧ ಒಡ್ಡುತ್ತಿದ್ದರೂ ಪ್ರಶಾಂತ್ ತನ್ನ ಚಾಳಿಯನ್ನು ಮುಂದುವರಿಸುತ್ತಲೇ ಇದ್ದ. ಇತ್ತೀಚೆಗೆ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವನ್ನೂ ನಡೆಸಿದ್ದ ಎನ್ನಲಾಗಿದೆ.
ಭಾನುವಾರ ಸಂಜೆ ಯುವತಿಗೆ ಕರೆ ಮಾಡಿದ್ದ ಪ್ರಶಾಂತ್, ಮುಖ್ಯವಾದ ವಿಚಾರದ ಕುರಿತು ಮಾತನಾಡುವುದಿದೆ ಎಂದು ತಿಳಿಸಿ ಪಂಜಿನಮೊಗರಿಗೆ ಬರುವಂತೆ ಮನವೊಲಿಸಿದ್ದ. ಅದರಂತೆ ಯುವತಿ ಪಂಜಿನಮೊಗರಿಗೆ ಬಸ್ ನಲ್ಲಿ ಬಂದಿಳಿದಿದ್ದಾಳೆ.
ಈ ವೇಳೆ ಅಪ್ರಾಪ್ತ ಆರೋಪಿ ಆಕೆಯನ್ನು ಪ್ರಶಾಂತ್ ಬಳಿ ಕರೆದೊಯ್ಯುವುದಾಗಿ ತಿಳಿಸಿ ತನ್ನ ಬೈಕ್ ನಲ್ಲಿ ಮನೆಯೊಂದಕ್ಕೆ ಕರೆದೊಯ್ದ. ಅಲ್ಲಿ ಆರೋಪಿಗಳು ಸೇರಿ ಆಕೆಗೆ ಮತ್ತು ಬರಿಸುವ ಪಾನೀಯವನ್ನು ನೀಡಿದ್ದು, ಬಳಿಕ ಐವರೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರ ನಡೆಸಿದ ಬಳಿಕ ರಾತ್ರಿ 9.30ರ ವೇಳೆಗ ಯುವತಿಯನ್ನು ಅಪ್ರಾಪ್ತ ಆರೋಪಿ ತನ್ನ ಬೈಕ್ ನಲ್ಲಿ ಪಂಜಿಮೊಗರು ಬಸ್ ನಿಲ್ದಾಣದಲ್ಲಿ ಇಳಿಸಿ ಪರಾರಿಯಾಗಿದ್ದ. ತೀರ ನಿತ್ರಾಣಗೊಂಡಿದ್ದ ಯುವತಿಯನ್ನು ಸ್ಥಳೀಯರು ವಿಚಾರಣೆ ನಡೆಸಿ ಮನೆಗೆ ಕಳುಹಿಸಿಕೊಟ್ಟಿದ್ದರು.
ಸೋಮವಾರ ಬೆಳಗ್ಗೆಯೂ ತೀವ್ರವಾಗಿ ದಣಿದಿದ್ದ ಯುವತಿಯನ್ನು ಮನೆಯವರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮಂಗಳೂರಿನ ಮಹಿಳಾ ಶಕ್ತಿ ಎಂಬ ಸಂಘಟನೆಯ ಮೂಲಕ ಯುವತಿಯು, ಕಾವೂರು ಠಾಣೆಗೆ ದೂರು ದಾಖಲಿಸಿದ್ದಾಳೆ.