

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಹಮ್ಮಿಕೊಂಡಿರುವ ಚಿತ್ರಸಂತೆಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ 12 ನೇ ಚಿತ್ರಸಂತೆಯನ್ನು ಹಮ್ಮಿಕೊಳ್ಳಲಾಗಿದ್ದು, ಚಿತ್ರಸಂತೆಗೆ ಭಾನುವಾರ ಚಾಲನೆ ನೀಡಲಾಯಿತು. ರಾಜ್ಯದ ನೂರಾರು ಕಲಾವಿದರು ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ನಾನಾ ಭಾಗದ ಸುಮಾರು 1200ಕ್ಕೂ ಅಧಿಕ ಕಲಾವಿದರು ತಮ್ಮ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಇನ್ನು ಚಿತ್ರಸಂತೆಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಕರ್ನಾಟಕದ ಸಾವಿರಾರು ಕಲಾ ಪ್ರೇಮಿಗಳು ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಇಂದು ನಡೆದ ಉದ್ಘಾಟನಾ ಕಾಯಕ್ರಮದಲ್ಲಿ ಮೇಯರ್ ಶಾಂತಕುಮಾರಿ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.
ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಲಾವಿದರಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಚಿತ್ರಕಲಾ ಪರಿಷತ್ ನ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ನೆರವು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಹೊಸ ಕಲಾವಿದರನ್ನು ಬೆಳಕಿಗೆ ತರಲು ಚಿತ್ರಕಲಾ ಪರಿಷತ್ ಕಳೆದ 11 ವರ್ಷಗಳಿಂದ ಸತತವಾಗಿ ಚಿತ್ರ ಸಂತೆಯನ್ನು ಆಯೋಜಿಸುತ್ತಾ ಬಂದಿದ್ದು, ಕಲಾ ಪ್ರೇಮಿಗಳು ಸ್ಥಳದಲ್ಲಿಯೇ ತಮಗೆ ಬೇಕಾದ ಚಿತ್ರವನ್ನು ಕಲಾವಿದರಿಂದ ಚಿತ್ರಿಸಿಕೊಂಡು ಖರೀದಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಇನ್ನು ಭಾನುವಾರವೇ ಚಿತ್ರಸಂತೆಯನ್ನು ಉದ್ಘಾಟಿಸಿರುವುದರಿಂದ ರಜೆಯ ಸವಿಯನ್ನು ಬೆಂಗಳೂರು ಜನ ಚಿತ್ರಸಂತೆಯಲ್ಲಿ ಕಳೆದಿದ್ದು ವಿಶೇಷವಾಗಿತ್ತು.
ಇನ್ನು ಚಿತ್ರಸಂತೆಯಲ್ಲಿ 10 ರೂಪಾಯಿಯಿಂದ ಹಿಡಿದು 10 ಲಕ್ಷ ರೂ. ವರೆಗಿನ ವಿವಿಧ ಬಗೆಯ ಚಿತ್ರಗಳು ಮಾರಾಟಕ್ಕಿದ್ದು, ಕಲಾ ಪ್ರೇಮಿಗಳು ತಮಗೆ ಇಷ್ಟವಾದ ಚಿತ್ರಗಳನ್ನು ಖರೀದಿಸಬಹುದಾಗಿದೆ.