

ಬೆಂಗಳೂರು: ಲೋಕಾಯುಕ್ತದಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಲೋಕಾಯುಕ್ತ ಕಾಯ್ದೆಯಲ್ಲೇ ತಿದ್ದುಪಡಿ ತಂದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆ ಆಗ್ರಹಿಸಿದೆ.
ಭ್ರಷ್ಟಾಚಾರ ವಿರುದ್ಧ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದರು, ತಡೆಯುವಂತವರು ಇಲ್ಲದಂತಾಗಿದೆ. ಮೇಲ್ನೋಟಕ್ಕೆ ಲೋಕಾಯುಕ್ತರ ಮಗನೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಗಳು ಬರುತ್ತಿದ್ದರು, ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಯಾವುದೇ ಕಾಯ್ದೆಯನ್ನು ತಿದ್ದುಪಡಿ ಮಾಡೋ ಹಕ್ಕು ಶಾಸಕರಿಗಿರುತ್ತದೆ. ಆದರೆ, ನಮ್ಮ ರಾಜ್ಯದ ಶಾಸಕರು ಅಸಹಾಯಕರಾಗಿದ್ದಾರೆ. ಲೋಕಾಯುಕ್ತ ಕಾಯ್ದೆಯನ್ನು ಬಲಪಡಿಸಬೇಕೆಂದು ಇಚ್ಛಾಶಕ್ತಿ ಶಾಸಕರಲ್ಲಿಲ್ಲ.ಭ್ರಷ್ಟಾಚಾರವನ್ನು ಹತ್ತಿಕ್ಕಬೇಕಾದರೆ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಚಂದ್ರ ರೆಡ್ಡಿ ಹೇಳಿದ್ದಾರೆ.
ರೈತರ ಸಮಸ್ಯೆ ಕುರಿತು ರಾಜ್ಯ ಮಟ್ಟದ ಸಮ್ಮೇಳನ
ರೈತರ ಸಮಸ್ಯೆ ಕುರಿತು ರಾಜ್ಯ ಮಟ್ಟದ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಗೆ ಜುಲೈ 22ರಂದು ಹಮ್ಮಿಕೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ರಾಮಚಂದ್ರ ರೆಡ್ಡಿ ತಿಳಿಸಿದ್ದಾರೆ. ಇತ್ತೀಚೆಗೆ ರೈತರು ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರ ದಿನ ನಿತ್ಯ ಜೀವನ ಕ್ಲಿಷ್ಟಕರವಾಗುತ್ತಿದ್ದು, ಈ ಹಿನ್ನಲೆಯಲ್ಲಿ ರೈತರ ಸಮಸ್ಯೆ ಚರ್ಚಿಸಲು ಈ ಸಮ್ಮೇಳನ ಆಯೋಜಿಸಲಾಗಿದ್ದು, ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಸಚಿವರು, ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಕಬ್ಬು ಬೆಳೆದ ರೈತರ ಸಮಸ್ಯೆ, ಆಹಾರ ಧಾನ್ಯಗಳನ್ನು ಬೆಳೆದ ರೈತರ ಸಮಸ್ಯೆ, ತೋಟಗಾರಿಕೆ ಬೆಳೆಗಳು, ಸಮರ್ಪಕವಾದ ದರ ಸಿಗದ ರೈತರ ಸಮಸ್ಯೆ ಕುರಿತು ಸಮ್ಮೇಳನದಲ್ಲಿ ಚರ್ಚೆಸಿ, ಕೆಲವು ನಿರ್ಣಯಗಳನ್ನು ಜಾರಿಗೊಳಿಸಿಲು ಸರ್ಕಾರವನ್ನು ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.