

ಬೆಂಗಳೂರು: ರಾಜ್ಯದಲ್ಲಿ ಅಲ್ಪಸಂಖ್ಯಾತ ಶಾಲೆಯ ಮಾನ್ಯತೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಹೈಕೋರ್ಟ್ ಮಂಗಳವಾರ ಮೌಖಿಕವಾಗಿ ತಾಕೀತು ಮಾಡಿದೆ.
ಆರ್‍ಟಿಆ ಕಾಯ್ದೆ ಅನ್ವಯ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಒತ್ತಡ ಹೇರುತ್ತಿದೆ. ಆದರೆ, ತಮ್ಮ ಶಾಲೆ ಅಲ್ಪಸಂಖ್ಯಾತ ಶಾಲೆ ವ್ಯಾಪ್ತಿಗೆ ಸೇರಲಿದ್ದು, ಆರ್‍ಟಿಇ ಕಾಯ್ದೆ ಈ ಶಾಲೆಗೆ ಅನ್ವಯವಾಗುವುದಿಲ್ಲ. ಅಲ್ಲದೇ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಸಹ ಸಾರ್ವಜನಿಕ ಶಿಕ್ಷಣ ಇಲಾಖೆ ವಿಳಂಬ ಮಾಡುತ್ತಿರುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕೃಷ್ಣ
ಗಂಗಾ ಎಜುಕೇಷನ್ ಟ್ರಸ್ಟ್ ಹೈಕೋರ್ಟ್‍ನಲ್ಲಿ ತಕರಾರು ಅರ್ಜಿ ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾ. ಎಚ್.ಜಿ. ರಮೇಶ್ ಅವರಿದ್ದ ಏಕಸದಸ್ಯ ಪೀಠ, ಅಲ್ಪಸಂಖ್ಯಾತ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಿದರೆ ತಿಂಗಳು ಕಳೆದರು ವಿಲೇವಾರಿ ಮಾಡದೆ ತಡೆಹಿಡಿದುಕೊಳ್ಳುತ್ತೀರಿ.
ಇಲಾಖೆಗೆ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸದೆ ಹೋದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ವಕೀಲರ ಶುಲ್ಕ ರೂಪದಲ್ಲಿ ಕೋರ್ಟ್‍ಗೆ ರು.25,000 ದಂಡ ಪಾವತಿಸುವಂತೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಶಿಕ್ಷಣ ಇಲಾಖೆಗೆ ತರಾಟೆ ಶಿಕ್ಷಣ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ತಾಳಿದ ಪೀಠ, ರಾಜ್ಯದಲ್ಲಿ
ಶಿಕ್ಷಣ ಇಲಾಖೆ ಏನು ಮಾಡುತ್ತಿದೆ? ಅದೊಂದು ಇಲಾಖೆಯೇ? ಹಾಗೂ ಅದಕ್ಕೊಬ್ಬರು ಕಾರ್ಯದರ್ಶಿ ಇದ್ದಾರೆಯೇ? ಇಲಾಖೆಯಲ್ಲಿ ಏನು ನಡೆಯುತ್ತಿದೆ? ಇಲಾಖೆ ಮಾಡುವ ಎಡವಟ್ಟುಗಳಿಂದ ಸಾಮಾನ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಇಲಾ ಖೆಯ ಅಧಿಕಾರಿಗಳಿಗೆ ತಿಂಗಳಿಗೆ ಸರಿಯಾಗಿ ವೇತನ ನೀಡಲಾಗುತ್ತಿದೆಯೇ? ಸರಿಯಾಗಿ ವೇತನ ಪಡೆದರೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಲ್ಲವೇ? ಎಂದು ಪೀಠ ಚಾಟಿ ಬೀಸಿದೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನೇ ಮರೆತಂತಿದೆ. ಅವರ ಬಳಿ ಹೇಗೆ ಕೆಲಸ ತೆಗೆಸಬೇಕು ಎಂಬುದರ ಕುರಿತು ಯೋಚಿಸುತ್ತಿರುವುದಾಗಿ ಇದೇ ವೇಳೆ ನ್ಯಾಯಮೂರ್ತಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದರು.