

ಬೆಂಗಳೂರು: ಯಾವುದೇ ಶಾಲೆಯ ಕಾಂಪೌಂಡ್ ಬಿದ್ದರೂ ನನ್ನ ಫೋಟೋ ಮಾಧ್ಯಮದಲ್ಲಿ ಬಂದು ಬಿಡುತ್ತದೆ, ನನ್ನನ್ನು ಟೀಕಿಸಲಾಗುತ್ತದೆ. ಎಲ್ಲದಕ್ಕೂ ಸಂಯಮ ಬೇಕಾಗುತ್ತದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾಧ್ಯಮಗಳ ವಿರುದ್ಧ ತಣ್ಣನೆಯ ಅಸಮಾಧಾನ ತೋರ್ಪಡಿಸಿದರು.
ಮೂರು ಲಕ್ಷ ಶಿಕ್ಷಕರು, 1.04 ಕೋಟಿ ಮಕ್ಕಳು, ಸಾವಿರಾರು ಸಿಬ್ಬಂದಿ ನನ್ನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಎಲ್ಲಿ ಏನೇ ಗೊಂದಲ ಸಮಸ್ಯೆಯಾದರೂ ನನ್ನ ಫೋಟೋವನ್ನು ಹಾಕಿ ಪ್ರಶ್ನಿಸಲಾಗುತ್ತದೆ ಎಂದು ಹೇಳಿದ ಅವರು ಇಂತಹ ಸಂದರ್ಭದಲ್ಲಿ ಸಂಯಮ ಅಗತ್ಯ, ಜಿದ್ದಾಜಿದ್ದಿ ಬೇಡವಾಗುತ್ತದೆ ಎಂದು ಹೇಳಿದರು.
ಇತ್ತೀಚಿಗಿನ ಪಿಯುಸಿ ಗೊಂದಲಗಳನ್ನು ಪ್ರಸ್ತಾಪಿಸಿದ ಅವರು, ತನ್ನ ರಿಜಿಸ್ಟರ್ ನಂಬರ್ ಬರೆಯದ ವಿದ್ಯಾರ್ಥಿ ಡೆಸ್ಕ್ ಮೇಲೆ ಬರೆದ ನಂಬರ್ ಉತ್ತರಪತ್ರಿಕೆಯಲ್ಲಿ ಬರೆದಿದ್ದ, ಫಲಿತಾಂಶ ತಡೆಹಿಡಿದಿದ್ದಕ್ಕೆ ಪಿಯು ಇಲಾಖೆಗೆ ಕಾಮನ್‍ಸೆನ್ಸ್ ಇದೆಯಾ ಎಂದು ಪ್ರಶ್ನಿಸುತ್ತಾರೆ. ಥಿಯರಿ ಪರೀಕ್ಷೆಯಲ್ಲಿ ಅರ್ಹ ಪಡೆದು ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ನಿಗದಿತ ಅಂಕ ಬಾರದೇ ಫೇಲ್ ಎಂದು ಘೋಷಿಸಿದರೂ ಇಲಾಖೆಗೆ ತಲೆ ಇಲ್ಲವೇ ಎಂದು ಕೇಳುತ್ತಾರೆ, ಉತ್ತರ ಪತ್ರಿಕೆ ಛಾಯಾಪ್ರತಿಗೆ ಅರ್ಜಿಹಾಕಿ ಕಾಲೇಜು ವಿಳಾಸಕೊಟ್ಟು ಮನೆಗೆ ಉತ್ತರ ಪತ್ರಿಕೆ ಬರಲಿಲ್ಲ ಎಂದವರೂ ಮಾಧ್ಯಮದ ಮುಂದೆ ಬಂದು ಮಾತನಾಡಿ ಇಲಾಖೆಯನ್ನು ಟೀಕಿಸುತ್ತಾರೆ, ಪೋಷಕರೂ ಸಹ ಸಂಯಮ ತೋರುವುದಿಲ್ಲ ಎಂದು ವಸ್ತುಸ್ಥಿತಿಯನ್ನು ವಿವರಿಸಿದರು.