

ಬೆಂಗಳೂರು: ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜನರಿಕ್ ಔಷಧಿ ಮಳಿಗೆಗಳ ಬಗ್ಗೆ ಡ್ರಗ್ ಮಾಫಿಯಾ ಅಪಪ್ರಚಾರ ಮಾಡುತ್ತಿದೆ ಎಂದು ರಾಜ್ಯ ವಾರ್ತಾ ಸಚಿವ ರೋಷನ್ ಬೇಗ್ ಕಿಡಿಕಾರಿದ್ದಾರೆ.
ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ಕ್ಷಯರೋಗ ಪತ್ತೆಹಚ್ಚುವ ಸಿಬಿ ನ್ಯಾಕ್ಟ್ (CB Nact) ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ರೋಷನ್ ಬೇಗ್ ಅವರು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ದೊರೆಯುವ ಜನರಿಕ್ ಔಷಧಿಗಳ ಬಗ್ಗೆ ಡ್ರಗ್‌ಮಾಫಿಯಾ ತನ್ನ ಸ್ವಾರ್ಥಕ್ಕಾಗಿ ಅಪಪ್ರಚಾರ ಮಾಡುತ್ತಿದ್ದು, ಜನರಿಕ್ ಔಷಧಿಗಳು ಪ್ರಖ್ಯಾತ ಕಂಪೆನಿಗಳ ಗುಣಮಟ್ಟಕ್ಕೆ ಸರಿಸಮಾನವಾಗಿದೆ. ಜನರಿಕ್ ಔಷಧಿ ಜನಪ್ರಿಯಗೊಂಡರೆ ತಮ್ಮ ವ್ಯಾಪಾರಕ್ಕೆ ಪೆಟ್ಟುಬೀಳಬಹುದೆಂಬ ಆತಂಕದಿಂದ ಖಾಸಗಿ ಔಷಧಿ ವ್ಯಾಪಾರಿಗಳು ಜನರಿಕ್ ಔಷಧಿಗಳಲ್ಲಿ ಗುಣಮಟ್ಟವಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಡ್ರಗ್ ಮಾಫಿಯಾದ ಈ ವ್ಯವಸ್ಥಿತ ಷಡ್ಯಂತ್ರಕ್ಕೆ ಸರ್ಕಾರ ಜಗ್ಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರು ಮಾತನಾಡಿ, ಈ ಹಿಂದೆ ಜನರಿಕ್ ಔಷಧಿ ಮಳಿಗೆ ಸ್ಥಾಪಿಸುವಾಗ ಸರಿಯಾದ ರೀತಿಯಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಹಾಗಾಗಿ ಔಷಧಿ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಎಚ್‌ಎಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜನರಿಕ್ ಔಷಧಿ ಮಳಿಗೆಗೆ ಇನ್ನು ಮುಂದೆ ಸಮರ್ಪಕವಾಗಿ ಔಷಧಿಗಳು ಪೂರೈಕೆಯಾಗುವಂತೆ ಎಚ್ಚರಿಕೆ ವಹಿಸಲಿದೆ ಎಂದು ತಿಳಿಸಿದರು.
ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಯಲ್ಲಿ ಜನರಿಕ್ ಮಳಿಗೆಯಲ್ಲಿ ಇನ್ನೊಂದು ತಿಂಗಳೊಳಗಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಅತ್ಯಾಧುನಿಕ ಸಿಬಿ ನ್ಯಾಕ್ಟ್ ಯಂತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಕ್ಷಯ ರೋಗ ಪತ್ತೆಗೆ ಈ ಮೊದಲಿನ ವ್ಯವಸ್ಥೆಯಲ್ಲಿ 3ರಿಂದ 6 ತಿಂಗಳ ಕಾಲಾವಕಾಶ ಬೇಕಾಗುತ್ತಿತ್ತು. ಆ ವೇಳೆಗೆ ರೋಗ ಪತ್ತೆಯಾಗದ ರೋಗಿಗಳಿಂದ ಇತರರಿಗೂ ಸೋಂಕು ತಗುಲುವ ಅಪಾಯಗಳಿತ್ತು. ಇದರಿಂದ ಕ್ಷಯರೋಗ ನಿಯಂತ್ರಣ ಕಷ್ಟವಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರದ ಸಿಆರ್‌ಎಸ್ ಅನುದಾನದಡಿಯಲ್ಲಿ ಸಿಬಿನ್ಯಾಕ್ಟ್ ಯಂತ್ರಗಳನ್ನು ಪೂರೈಕೆ ಮಾಡಿಕೊಳ್ಳಲಾಗಿದೆ. ಈ ಯಂತ್ರಗಳಲ್ಲಿ 90 ನಿಮಿಷದಲ್ಲಿ ಕರಾರುವಕ್ಕಾಗಿ ಕ್ಷಯರೋಗ ಪತ್ತೆ ಹಚ್ಚಬಹುದು ಎಂದು ಶರಣಪ್ರಕಾಶ ಪಾಟೀಲ್ ವಿವರಿಸಿದರು.