

ಬೆಂಗಳೂರು: ಪುರಾತನ ಕಾಲದ ಪಂಚಲೋಹ ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಿರುವ ರಾಜರಾಜೇಶ್ವರಿ ನಗರ ಪೊಲೀಸರು ರು.1.55 ಕೋಟಿ ಮೌಲ್ಯದ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಸಮೀಪದ ಗೋಣಿಪುರ ಗ್ರಾಮದ ರುದ್ರಮೂರ್ತಿ(35), ರೇವಣ್ಣ(38), ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಜ್ಞಾನೇಶ್ವರಾಚಾರ್(45) ಹಾಗೂ ಕೆಂಗೇರಿ ಸಮೀಪದ ಕೆಂಚನಪುರ ಗ್ರಾಮದ ನಾಗರಾಜ್ (45) ಬಂಧಿತರು. ಇವರಿಂದ 1 ಪಂಚಲೋಹ ಪಾತ್ರೆ, ಗಣಪತಿ ದೇವರ ಯಂತ್ರದ ವಿಗ್ರಹ, ಋಷಿಮುನಿ ಇರುವ ಯಂತ್ರದ ವಿಗ್ರಹ, ಪಂಚಲೋಹದ ಚಿಕ್ಕ ಪೆಟ್ಟಿಗೆ ಹಾಗೂ ಶಾಖ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮಾ.28ರಂದು ರಾಜರಾಜೇಶ್ವರಿ ನಗರ ಬೆಮೆಲ್ ಬಡಾವಣೆ ಕಾಫಿ ಕಟ್ಟೆ ಬಳಿ ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಆರೋಪಿಗಳಿಗೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಬಾಷಾ ಎಂಬಾತ ವಿಗ್ರಹಗಳನ್ನು ಮಾರಾಟ ಮಾಡಲು ಕೊಟ್ಟಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾರೆ. ಬಾಷಾನಿಗಾಗಿ ಹುಡುಕಾಟ ನಡೆದಿದೆ. ಪಂಚಲೋಹದ ವಿಗ್ರಹಗಳ ಬಗ್ಗೆ ಖಚಿತತೆಗಾಗಿ ಪುರಾತತ್ವ ಇಲಾಖೆಗೆ ಕಳುಹಿಸಿಕೊಡ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.