

ಬೆಂಗಳೂರು: ಯಾವುದೇ ಕಾರಣಕ್ಕೂ ಬೃಹತ್ ಬೆಂಗಳೂರು ಮಹಾಪಾಲಿಕೆ ವಿಭಜನೆ ನಿರ್ಧಾರ ಬೇಡ. ಸಮರ್ಥ ಆಡಳಿತ ನೀಡಲು ವಿಭಜನೆ ಪೂರಕವಲ್ಲ. ಸರ್ಕಾರ ಈ ನಿರ್ಧಾರ ಕೈಬಿಡಬೇಕೆಂದು ಕೇಂದ್ರ ಕಾನೂನು ಸಚಿವ ಸದಾನಂದಗೌಡ ಒತ್ತಾಯಿಸಿದರು.
ಭಾನುವಾರ ಕೆಂಪೇಗೌಡ ಒಕ್ಕಲಿಗರ ಸಂಘ ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವತಿಯಿಂದ ಏರ್ಪಸಿದ್ದ ನಾಡಪ್ರಭು ಕೆಂಪೇಗೌಡರ 503ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯವಸ್ಥೆಯಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಿದೆ. ಆ ಮೂಲಕ ಆಡಳಿತ ವ್ಯವಸ್ಥೆಯನ್ನೂ ಬಲಗೊಳಿಸಲಾಗಿತ್ತು. ಬಿಬಿಎಂಪಿ ವಿಭಜನೆ ಬದಲು ಮತ್ತಷ್ಟು ಒಳ್ಳೆಯ ಆಡಳಿತ ನೀಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಿ ಎಂದು ಅಭಿಪ್ರಾಯಪಟ್ಟರು.
ಸ್ಮಾರ್ಟ್‍ಸಿಟಿ ವ್ಯವಸ್ಥೆಯನ್ನು ಕೆಂಪೇಗೌಡರು ಅಂದೇ ಅಳವಡಿಸಿದ್ದರು. ಪೇಟೆಗಳ ವ್ಯವಸ್ಥೆ, ಕೆರೆ-ಕುಂಟೆ ಒಳಗೊಂಡಂತೆ ಜನತೆಗೆ ಅನುಕೂಲವಾಗುವ ವ್ಯವಸ್ಥೆ ಅವರ ದೂರದೃಷ್ಟಿ ಚಿಂತನೆ ತಿಳಿಸುತ್ತದೆ. ಆ ಪರಿಕಲ್ಪನೆಯನ್ನು ನಗರದಲ್ಲಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಶಾಸಕ ಕೆ. ಗೋಪಾಲಯ್ಯ ಮಾತನಾಡಿ, `ನಗರದಲ್ಲಿ 40-50 ವರ್ಷಗಳ ಹಿಂದೆ ಇದ್ದ ಪ್ರಶಾಂತ ವಾತಾವರಣವಿಲ್ಲ. ಕೆಂಪೇಗೌಡರು ನಿರ್ಮಿಸಿದ ಕೆರೆಗಳು ಕಣ್ಮರೆಯಾಗಿವೆ. ಆದ್ದರಿಂದ ನಗರದಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ನಾಡಪ್ರಭುಗಳು ನಿರ್ಮಿಸಿದ ಮಾದರಿ ಬೆಂಗಳೂರನ್ನು ಸರ್ಕಾರ ಛಿದ್ರಗೊಳಿಸಲು ಮುಂದಾಗಿದೆ. ಬೆಂಗಳೂರು ಒಂದೇ ಆಗಿ ಉಳಿಯುವ ನಿಟ್ಟಿನಲ್ಲಿ ಸಮುದಾಯದೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದಾಗಿ' ಎಚ್ಚರಿಸಿದರು.
ಸಮುದಾಯದ 10 ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಪುರಸ್ಕರಿಸಲಾಗಿದ್ದು, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ ರು.5 ಸಾವಿರದಂತೆ ರು.50 ಸಾವಿರ ಪ್ರೊತ್ಸಾಧನ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ 10 ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಕೆಎಸ್ ಡಿಎಲ್ ಪ್ರಧಾನ ಕಾರ್ಯದರ್ಶಿ ಗುಂಡಯ್ಯ, ಕಾರ್ಯಾಧ್ಯಕ್ಷ ವಿ. ಎಸ್. ವೆಂಕಟೇಶ್ ಉಪಸ್ಥಿತರಿದ್ದರು.