ಜಿಲ್ಲಾ ಸುದ್ದಿ

ಅನ್ನಪೂರ್ಣ ಉಚಿತ

ಅನ್ನಪೂರ್ಣ ಉಚಿತ
ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಅಕ್ಕಿ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published On :

ಬೆಂಗಳೂರು: ಬಡತನದ ಹೆಚ್ಚು`ವರಿ' ಹೋಗಲಾಡಿಸುವುದೇ ನಮ್ಮ ಗುರಿ. ಇದನ್ನು ಯಾರು ವಿರೋಧಿಸಿದರೂ ಸರಿಯೇ! ಈ ಉದ್ಘೋಷದ ಮೂಲಕ ರಾಜ್ಯ ಸರ್ಕಾರ ಅನ್ನಭಾಗ್ಯದ ವಿಸ್ತರಣಾ ಯೋಜನೆಗೆ ಶುಕ್ರವಾರ ಚಾಲನೆ ನೀಡಿದೆ. ಇದರಿಂದಾಗಿ ಇನ್ನು ಮುಂದೆ ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತ ಅಕ್ಕಿ, ರಿಯಾಯಿತಿ ದರದಲ್ಲಿ ಅಯೋಡೈಸ್ಡ್ ಉಪ್ಪು ಮತ್ತು ತಾಳೆ ಎಣ್ಣೆ ಲಭಿಸಲಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ವಿಸ್ತರಣೆ ಹಾಗೂ  ಪಿಎಲ್‍ದಾರರಿಗೆ ಅಕ್ಕಿ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಡವರನ್ನು ಹೊಂದಿರುವುದು ಕರ್ನಾಟಕ. ಪಕ್ಕದ ತಮಿಳುನಾಡು ಮತ್ತು ಕೇರಳಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲೇ ಹೆಚ್ಚು. ಹೀಗಾಗಿ ಬಡತನದ ನೋವನ್ನು ಹೋಗಲಾಡಿಸುವುದು ನಮ್ಮ ಗುರಿ. ಪೌಷ್ಟಿಕ ಆಹಾರ ನೀಡುವ ಆಕಾಂಕ್ಷೆಯೂ ಇದೆ.

ಹೀಗಾಗಿ ಅನ್ನಭಾಗ್ಯ  ಯೋಜನೆಯನ್ನು ವಿಸ್ತರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಎರಡು ಹೊತ್ತು ಊಟ ಕೊಡುವುದರಲ್ಲಿ ತಪ್ಪೇನಿದೆ. ಯಾವೊಬ್ಬ ಬಡವನೂ ಹಸಿವಿನಿಂದ ಮಲಗಬಾರದು. ಇದನ್ನು ಯಾರು ಟೀಕಿಸಿದರೂ ಸರಿಯೇ ನಾವು ನಿಲ್ಲಿಸಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ಎಪಿಎಲ್‍ದಾರರಿಗೂ ಅಕ್ಕಿ
ಬರುವ ತಿಂಗಳ ಒಂದನೇ ತಾರೀಖಿನಿಂದ ಬಡತನ ರೇಖೆಗಿಂತ ಮೇಲಿರುವ ಜನರಿಗೂ ರಿಯಾಯಿತಿ ದರದಲ್ಲಿ ಅಕ್ಕಿ, ಗೋದಿ ನೀಡಲಾಗುತ್ತದೆ. ಈ ಮೂಲಕ ಬಡ ಮಧ್ಯಮ ವರ್ಗದವರಿಗೂ ಅನುಕೂಲ ಮಾಡಿಕೊಡಲಾಗುತ್ತಿದೆ. ಈ ವ್ಯವಸ್ಥೆಯಿಂದಾಗಿ ರಾಜ್ಯದ ಒಟ್ಟಾರೆ 6.5 ಕೋಟಿ ಜನರಲ್ಲಿ 4 ಕೋಟಿ ಜನ ಬರುತ್ತಾರೆ. ಇದೂ ಕೂಡ ಬಡವರ ಪರವಾದ ನಿರ್ಧಾರ ಎಂದು ಸಮರ್ಥಿಸಿಕೊಂಡಿದ್ದಾರೆ.

20 ಲಕ್ಷ ಹೊಸ ಪಡಿತರ ಚೀಟಿ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‍ಗುಂಡೂರಾವ್ ಮಾತನಾಡಿ, ಹೊಸ ಸರ್ಕಾರ ಬಂದ ಮೇಲೆ 20 ಲಕ್ಷ ಹೊಸ ಪಡಿತರ ಚೀಟಿಗಳನ್ನು ನೀಡಲಾಗಿದೆ. ಜೊತೆಗೆ ಕಾಳಸಂತೆಯಲ್ಲಿ ಪಡಿತರ ಮಾರಾಟವಾಗುತ್ತಿದ್ದುದನ್ನು ತಪ್ಪಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದರು.
ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಶಾಸಕರಾದ ಅಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್, ಆರ್.ವಿ.ದೇವರಾಜ್, ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಎಂ.ಆರ್.ಸೀತಾರಾಂ ಮತ್ತಿತರರು ಇದ್ದರು.
ಬಿಪಿಎಲ್
ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಉಚಿತ
ಕುಟುಂಬವೊಂದಕ್ಕೆ ಗರಿಷ್ಠ 30 ಕೆಜಿ ಅಕ್ಕಿ ಉಚಿತ
ರು. 25ಗೆ ಪ್ರತಿ ಲೀ.ತಾಳೆ ಎಣ್ಣೆ
ರು.2ಗೆ ಆಯೋಡೈಸ್ಡ್ ಉಪ್ಪು
ಕೆಜಿಗೆ ರು. 15 ರಂತೆ 5 ಕೆಜಿ ಅಕ್ಕಿ
ರು. 10 ರಂತೆ 5 ಕೆಜಿ ಗೋದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.